Advertisement

ನಾಳೆಯಿಂದ ಮಾವು, ಹಲಸು ಮೇಳ

10:28 AM May 24, 2018 | |

ಬೆಂಗಳೂರು: ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವತಿಯಿಂದ ಲಾಲ್‌ಬಾಗ್‌ನಲ್ಲಿ ಮೇ 25ರಿಂದ ಜೂ.15ರವರೆಗೆ ಮಾವು ಮತ್ತು ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದೆ.

Advertisement

ಲಾಲ್‌ಬಾಗ್‌ನ ಮರಿಗೌಡ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಅಪರ ನಿರ್ದೇಶಕ (ಹಣ್ಣುಗಳ ವಿಭಾಗ) ಹಾಗೂ ನಿಗಮದ ನಿರ್ದೇಶಕ ಕೆ.ಎಂ. ಪರಶಿವಮೂರ್ತಿ ಮಾತನಾಡಿ, ವಿವಿಧ ತಳಿಯ ಮಾವು ಹಾಗೂ ಹಲಸಿನ ಹಣ್ಣುಗಳನ್ನು ಒಂದೇ ವೇದಿಕೆಯಡಿ ಗ್ರಾಹಕರಿಕೆ ದೊರೆಯುವಂತೆ ಮಾಡುವುದು ಹಾಗೂ ರೈತರಿಕೆ ಸೂಕ್ತ ಮಾರುಕಟ್ಟೆ ಒದಗಿಸುವುದು ಮೇಳದ ಮುಖ್ಯ ಉದ್ದೇಶವಾಗಿದೆ. ಇನ್ನು ಕಳೆದ 7 ವರ್ಷಗಳಿಂದ ಲಾಲ್‌ಬಾಗ್‌ನಲ್ಲಿ ಮಾವು ಮೇಳ ಹಮ್ಮಿಕೊಳ್ಳುತ್ತಿದ್ದು, ವರ್ಷದಿಂದ ವರ್ಷಕ್ಕೆ ಮಾವು ಹಾಗೂ ಹಲಸಿನ ಹಣ್ಣುಗಳ ಬೇಡಿಕೆ ಹೆಚ್ಚುತ್ತಿದೆ.  ಜತೆಗೆ ರೈತರೂ ನೇರವಾಗಿ ಮಾರಾಟ ಮಾಡಿ ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ ಎಂದರು.

ಮೇಳದಲ್ಲಿ ಸುಮಾರು 90 ಮಳಿಗೆಗಳು ಇರಲಿದ್ದು, 15 ವಿವಿಧ ತಳಿಯ ಮಾವು ಮತ್ತು ಹಲಸಿನ ಹಣ್ಣುಗಳು ಲಭ್ಯವಿರಲಿವೆ. ಉತ್ತಮ ಹಣ್ಣುಗಳನ್ನು ಗ್ರಾಹಕರಿಗೆ ಒದಗಿಸುವ ಉದ್ದೇಶದಿಂದ ನಿಗಮವು ಒಂದು ವಿಶೇಷ ತಂಡ ರಚಿಸಿದ್ದು, ಈ ತಂಡ ಹಣ್ಣಿನ ಸರಕುಗಳನ್ನು ಪರೀಕ್ಷಿಸಿ, ನಂತರ ಮಾರಾಟಕ್ಕೆ ಅವಕಾಶ ನೀಡುತ್ತದೆ. ಒಟ್ಟಾರೆ ಮೇಳದಲ್ಲಿ ಮಾರಾಟ ಮಾಡುವ ಹಣ್ಣುಗಳನ್ನು ವೈಜ್ಞಾನಿಕ ರೀತಿಯಲ್ಲಿ ಮಾಗಿಸುವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಈ ವರ್ಷ 12ರಿಂದ 14 ಲಕ್ಷ ಟನ್‌ ಮಾವಿನ ಫ‌ಸಲು ನಿರೀಕ್ಷಿಸಲಾಗಿತ್ತು. ಆದರೆ, ವಾತಾವರಣದಲ್ಲಾದ ಬದಲಾವಣೆಗಳಿಂದ 8 ಲಕ್ಷ ಟನ್‌ ಇಳುವರಿ ಮಾತ್ರ ಬಂದಿದೆ. ಇನ್ನು ಗ್ರಾಹಕರಿಗೆ ಹಲಸಿನ ಹಣ್ಣುಗಳ ವಿವಿಧತೆ ತಿಳಿಯುವುದು ಕಷ್ಟವಾದ್ದರಿಂದ ರೈತರೇ ಮೇಳದಲ್ಲಿ ಗ್ರಾಹಕರೆದುರು ಹಲಸನ್ನು ಬಿಡಿಸಿಕೊಡುತ್ತಾರೆ. ಈ ಹಿಂದೆ ಮಾಡಿದ್ದ ಕರುನಾಡ ಮಾವು ಎಂಬ ಬ್ರ್ಯಾಂಡ್‌ನ‌ ದುರುಪಯೋಗ ವಾಗಿದ್ದರಿಂದ, ರಫ್ತು ಮಾಡುವುದಕ್ಕೆ ಅಧಿಕೃತವಾಗಿ ಕರ್‌ಸಿರಿ (ಕರ್ನಾಟಕ ಸಿರಿ) ಬ್ರ್ಯಾಂಡ್‌ಮಾಡಲಾಗಿದೆ ಎಂದು ಹೇಳಿದರು.

ಮೆಟ್ರೋದಲ್ಲಿ ಮಾವು: ಈ ಬಾರಿ ಲಾಲ್‌ಬಾಗ್‌ನಲ್ಲಿ ಮಾತ್ರವಲ್ಲದೇ ನಗರದ ಬಹುತೇಕ ಮೆಟ್ರೋ ರೈಲು ನಿಲ್ದಾಣಗಳ ಬಳಿಯೂ ಮಾವಿನ ಹಣ್ಣಿನ ಮಳಿಗೆ ಹಾಕಲು ನಿಗಮ ಚಿಂತಿಸಿದೆ. ಶನಿವಾರ ಮತ್ತು ಭಾನುವಾರದಂದು ಕಬ್ಬನ್‌ ಉದ್ಯಾನವನ (10 ಮಳಿಗೆ) ಹಾಗೂ ಮೈಸೂರು ಬ್ಯಾಂಕ್‌ ವೃತ್ತದ ಎಫ್ ಕೆಸಿಸಿಐ ಯಲ್ಲೂ ಮಳಿಗೆಗಳು ಇರಲಿವೆ. ಇದರೊಂದಿಗೆ ಈಗಾಗಲೇ ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ರಾಮನಗರ, ಮಂಡ್ಯ, ಧಾರವಾಡದಲ್ಲಿ
ಸ್ಥಳೀಯ ಮೇಳಗಳನ್ನು ಆಯೋಜಿಸಲಾಗಿದೆ.  

Advertisement

ನಿಪ ಸೋಂಕಿಲ್ಲ
ಮಾವಿನಹಣ್ಣು ಸೇವನೆಯಿಂದ ನಿಪ ವೈರಾಣು ಹರಡುತ್ತದೆ ಎಂಬ ವದಂತಿ ಇದೆ. ಆದರೆ ಮಾವು ಸೇವನೆಯಿಂದ ನಿಪ ವೈರಸ್‌ ಹರಡುವುದಿಲ್ಲ ಎಂದು ನಿಗಮದ ನಿರ್ದೇಶಕ ಕೆ.ಎಂ. ಪರಶಿವಮೂರ್ತಿ ಸ್ಪಷ್ಟಪಡಿಸಿದ್ದಾರೆ. ಬಾವುಲಿಗಳು (ಬ್ಯಾಟ್‌) ತನ್ನ ಬಾಯಿಯ ಗಾತ್ರಕ್ಕಿಂತ ದೊಡ್ಡದಾದ ಹಣ್ಣುಗಳನ್ನು ತಿನ್ನುವುದಿಲ್ಲ. ಮಾವು ಬಾವಲಿ ಬಾಯಿಗಿಂತಲೂ ದೊಡ್ಡ ಗಾತ್ರದಲ್ಲಿರುತ್ತದೆ. ಹಾಗಾಗಿ ನಿಫಾಹ್‌ ವೈರಸ್‌ ಸೋಂಕು ಮಾವಿಗೆ ಹರಡಿರುವುದಿಲ್ಲ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next