Advertisement

ಮಾವು ಈ ವರ್ಷವೂ ಹುಳಿ

01:13 PM Apr 26, 2019 | pallavi |

ಹುಬ್ಬಳ್ಳಿ: ಮಾರುಕಟ್ಟೆಗೆ ಲಗ್ಗೆಯಿಟ್ಟ ಹಣ್ಣುಗಳ ರಾಜನಿಗೆ ಈಗ ಬಂಗಾರದ ಬೆಲೆ ಬಂದಿದೆ. ಹೊರ ರಾಜ್ಯಗಳಿಂದ ಮಾವು ಮಾರುಕಟ್ಟೆಗೆ ಬಂದಿದ್ದು, ಮಳೆಯಿಂದಾಗಿ ಬೆಳೆ ಕ್ಷೀಣಿಸಿದ ಪರಿಣಾಮ ದುಬಾರಿ ಹಣ್ಣು ಬಡವರಿಗೆ ಕೈಗೆಟುಕದಂತಾಗಿದೆ. ಬೆಳೆಗಾರರ ನಿರೀಕ್ಷೆಯಂತೆ ಮಾವು ಬಂದಿದ್ದರೆ ಚನ್ನಮ್ಮ ವೃತ್ತದಲ್ಲಿ ಕಣ್ಣಾಡಿಸಿದಲ್ಲೆಲ್ಲಾ ಮಾವಿನ ಹಣ್ಣಿನ ವ್ಯಾಪಾರದ್ದೇ ಭರಾಟೆ ಇರುತ್ತಿತ್ತು. ಬೆಳೆಗಾರರೇ ನೇರವಾಗಿ ಹಣ್ಣುಗಳನ್ನು ತಂದು ವ್ಯಾಪಾರ ಮಾಡುತ್ತಿದ್ದರು. ಆದರೆ ಹವಾಮಾನ ವೈಪರೀತ್ಯದಿಂದ ಈ ಬಾರಿ ಹಣ್ಣಿನ ಕೊರತೆಯಾಗಿದ್ದು, ಬೆರಳೆಣಿಕೆ ವ್ಯಾಪಾರಿಗಳು ಅಲ್ಪಸ್ವಲ್ಪ ಹಣ್ಣು ಖರೀದಿಸಿ ವ್ಯಾಪಾರದಲ್ಲಿ ತೊಡಗಿದ್ದಾರೆ. ದುಬಾರಿ ಬೆಲೆಯಿಂದ ಚಿಲ್ಲರೆ ವ್ಯಾಪಾರಿಗಳು ವ್ಯಾಪಾರಕ್ಕೆ ಹಿಂದೇಟು ಹಾಕುವಂತಾಗಿದೆ.

Advertisement

ಬೇಸಿಗೆ ಆರಂಭದಲ್ಲಿ ಮಾವು ಬೆಳಗಾರರಲ್ಲಿ ಉತ್ತಮ ಬೆಳೆ ಬರುವ ನಿರೀಕ್ಷೆ ಮೂಡಿತ್ತು. ಮರಗಳು ಹಿಡಿದಿದ್ದ ಹೂವು ಹಾಗೂ ಕಾಯಿ ನೋಡಿ ಈ ಬಾರಿ ಬಂಪರ್‌ ಬೆಳೆ ಕನಸು ಕಂಡಿದ್ದರು. ಆದರೆ ಕೆಲವೆಡೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಹೂವು, ಕಾಯಿ ಉದುರಿ ಬೆಳೆಗಾರರ ಆಸೆ
ಬುಡಮೇಲು ಮಾಡಿದೆ.

ಮಹಾರಾಷ್ಟ್ರದಿಂದ ಬಂದಿರುವ ದೇವಗಡ ಆಪೂಸ್‌, ರತ್ನಗಿರಿ ಆಪೂಸ್‌ ಹಾಗೂ ಸ್ಥಳೀಯವಾಗಿ ದೊರೆಯುವ ಕಲಿ¾ ತಳಿಯ ಹಣ್ಣುಗಳು ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಿವೆ. ಕೆಲವೇ ತಳಿಯ ಹಣ್ಣುಗಳು ಮಾರುಕಟ್ಟೆಯಲ್ಲಿದ್ದು, ಬೆಲೆ ದುಬಾರಿ ಎನ್ನುವ ಕಾರಣಕ್ಕೆ ವ್ಯಾಪಾರಿಗಳು ಸಂಖ್ಯೆಯೂ ಕಡಿಮೆಯಿದೆ.

ಲೋಕಲ್‌ ಹಣ್ಣಿನ ನಿರೀಕ್ಷೆ: ಸ್ಥಳೀಯ ಹಣ್ಣುಗಳು ಮಾರುಕಟ್ಟೆಗೆ ಆಗಮಿಸುವ ನಿರೀಕ್ಷೆಯಲ್ಲಿ ವ್ಯಾಪಾರಿಗಳಿದ್ದಾರೆ. ಈ ಹಣ್ಣುಗಳ ಆಗಮನದಿಂದ ಗಗನಕ್ಕೇರಿರುವ ಬೆಲೆ ಒಂದಿಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ ಎನ್ನುವುದು ವ್ಯಾಪಾರಿಗಳ ನಿರೀಕ್ಷೆ. ಹೊರ ರಾಜ್ಯದ ಹಣ್ಣುಗಳನ್ನು ದುಬಾರಿ ಬೆಲೆ ನೀಡಿ ತಿನ್ನುವ ಬದಲು 15 ದಿನ ಕಳೆದರೆ ಸ್ಥಳೀಯ ಹಣ್ಣು ಮಾರುಕಟ್ಟೆಗೆ ಬರಲಿದೆ ಎಂಬುದು ಕೂಡ ಗ್ರಾಹಕರ ಲೆಕ್ಕಾಚಾರ.

ಸಗಟು ವ್ಯಾಪಾರದ ಹಂತದಲ್ಲೇ ಹಣ್ಣುಗಳು ತುಟ್ಟಿ ಹೊರಗಡೆಯಿಂದ ಬಂದಿರುವ ಹಣ್ಣು ಸಗಟು ವ್ಯಾಪಾರದ ಹಂತದಲ್ಲೇ ದುಬಾರಿಯಾಗಿರುವುದರಿಂದ ಚಿಲ್ಲರೆ ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ಹಣ್ಣು ತಂದು ಮಾರಾಟ ಮಾಡಲು ಮನಸ್ಸು ಮಾಡುತ್ತಿಲ್ಲ. ಸಣ್ಣ ಪ್ರಮಾಣದಲ್ಲಿ ಖರೀದಿಸಿ ತಂದು ಅದರಲ್ಲಿ ಒಂದಿಷ್ಟು ಲಾಭ ಮಾಡಿಕೊಂಡು ಮಾರಾಟ ಮಾಡುತ್ತಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಹಣ್ಣು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಿದೆ. ನಾವು ಸಗಟು ವ್ಯಾಪಾರಿಗಳಿಂದ ಖರೀದಿಸಿ ಮಾರಾಟ ಮಾಡುತ್ತಿದ್ದೇವೆ. ಸಾರಿಗೆ ವೆಚ್ಚ ಸೇರಿದಂತೆ ನಾವು ಒಂದಿಷ್ಟು ಉಳಿಸಿಕೊಂಡು ವ್ಯಾಪಾರ ಮಾಡಬೇಕು. ಆದರೆ ಗ್ರಾಹಕರು ಕಡಿಮೆ ಬೆಲೆಗೆ ಚೌಕಾಸಿ ಮಾಡುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಿ ಆಲಂ ಸಾಬ ಮುಲ್ಲಾ.

Advertisement

ಗ್ರಾಹಕರು ಅಂಗಡಿಗಳ ಹತ್ತಿರವೇ ಹೋಗುತ್ತಿಲ್ಲ ಬಾಯಲ್ಲಿ ನೀರು ತರುವ ಮಾವಿನ ಹಣ್ಣು ಸವಿಯಬೇಕೆನಿಸುತ್ತದೆ. ಆದರೆ ಹಣ್ಣಿನ
ದರ ಕೇಳಿದರೆ ಗ್ರಾಹಕರು ಅಂಗಡಿಗಳ ಹತ್ತಿರವೇ ಹೋಗುತ್ತಿಲ್ಲ. ಮಧ್ಯಮ ಹಾಗೂ ಕೆಳ ವರ್ಗದ ಜನರು ಹಣ್ಣಿನ ರಾಜನ ಹತ್ತಿರವೇ ಸುಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಹಣ್ಣಿನ ಮಾರುಕಟ್ಟೆ ಬಣಗುಡುತ್ತಿದೆ. ಆದರೂ ಕೆಲ ಮಾವು ಪ್ರಿಯರು ನಾಲ್ಕೈದು ಡಜನ್‌ ಬದಲಿಗೆ ಎರಡು ಡಜನ್‌ಗೆ ಸೀಮಿತವಾಗುತ್ತಿದ್ದು, ವ್ಯಾಪಾರವೂ ಅಷ್ಟಕ್ಕಷ್ಟೆ ಎಂಬಂತಾಗಿದೆ

ಇತ್ತೀಚೆಗೆ ಸುರಿದ ಮಳೆಯಿಂದಾಗಿ ಈ ಬಾರಿ ಹೊರ ರಾಜ್ಯದಲ್ಲೂ ಬೆಳೆ ಕಡಿಮೆಯಿದೆ. ಉತ್ತಮ ಗುಣಮಟ್ಟದ ಹಣ್ಣು ಬೇರೆಡೆಗೆ
ಕಳುಹಿಸಲಾಗುತ್ತಿದೆ. ಹಣ್ಣಿನ ಕೊರತೆಯಿಂದಾಗಿ ಈ ಬಾರಿ ನಗರದಲ್ಲಿ ಮಾವು ದುಬಾರಿಯಾಗಿದೆ. ನಮ್ಮಲ್ಲೂ ಕೂಡ ಮಳೆಯಿಂದಾಗಿ ಕಳೆದ
ವರ್ಷಕ್ಕೆ ಹೋಲಿಸಿದರೆ ಬೆಳೆ ಪ್ರಮಾಣ ಕಡಿಮೆಯಾಗಲಿದೆ. ಹೀಗಾಗಿ ಸ್ಥಳಿಯ ಹಣ್ಣಿನ ಬೆಲೆಯೂ ದುಬಾರಿಯಾಗುವ ಸಾಧ್ಯತೆಗಳಿವೆ.
 ಜಿಲಾನಿ, ವ್ಯಾಪಾರಿ

ಒಂದೊಂದು ಕಡೆ ಒಂದೊಂದು ದರವಿದೆ. ಹೊರ ರಾಜ್ಯದಿಂದ ತರಿಸಲಾಗಿದೆ, ನಾವು ದುಬಾರಿ ಬೆಲೆಗೆ ಖರೀದಿಸಿದ್ದೇವೆ ಎಂದು ವ್ಯಾಪಾರಿಗಳು ದರ ಕಡಿಮೆ ಮಾಡುತ್ತಿಲ್ಲ. ಬೆಲೆ ನೋಡಿದರೆ ಮಾವು ಮುಟ್ಟಲಿಕ್ಕೂ ಆಗುವುದಿಲ್ಲ. ಆದರೆ ವರ್ಷಕ್ಕೊಮ್ಮೆ ತಿನ್ನುವ
ಹಣ್ಣು ಎನ್ನುವ ಕಾರಣಕ್ಕೆ ಖರೀದಿಸಲೇಬೇಕು. ನಾಲ್ಕೈದು ಡಜನ್‌ ತೆಗೆದುಕೊಳ್ಳುವ ಬದಲು ಎರಡು ಡಜನ್‌ ತೆಗೆದುಕೊಂಡಿದ್ದೇನೆ.
 ಸವಿತಾ ವಸ್ತ್ರದ, ಗ್ರಾಹಕಿ

ಸ್ಥಳೀಯವಾಗಿ ದೊರೆಯುತ್ತಿದ್ದ ಆಪೂಸ್‌ ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗುವ ಸಾಧ್ಯತೆಗಳಿವೆ. ನಿರಂತರ
ಮಳೆಯಿಂದ ಸಾಕಷ್ಟು ಬೆಳೆ ನಾಶವಾಗಿದೆ. ಹೀಗಾಗಿ ಸ್ಥಳೀಯವಾಗಿ ದೊರೆಯುವ ಹಣ್ಣಿನ ಕೊರತೆಯಿಂದಾಗಿ ಕಳೆದ ಬಾರಿಗಿಂತ ಈ
ಬಾರಿ ಹಣ್ಣಿನ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ಮಾವು ಬೆಳೆದ ರೈತನಿಗೆ ಯಾವುದೇ ಲಾಭವಾಗುವುದಿಲ್ಲ.
 ಡಿ.ಟಿ. ಪಾಟೀಲ, ಮಾವು ಬೆಳೆಗಾರ

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next