ಕೊಪ್ಪಳ: ನಗರದ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಬುಧವಾರ ನಡೆದ ಮಾವುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಮೊದಲ ದಿನವೇ ಉತ್ತಮ ಸ್ಪಂದನೆ ದೊರೆಯಿತು. ನೈಸರ್ಗಿಕವಾಗಿ ಮಾಗಿದ ಹಣ್ಣುಗಳನ್ನು ರೈತನಿಂದ ನೇರವಾಗಿ ಗ್ರಾಹಕನಿಗೆ ಎಟುಕುವಂತೆ ಮಾಡಿದ್ದು, ಮೇಳಕ್ಕೆ ಜಿಲ್ಲಾಧಿಕಾರಿ ಸುನೀಲ್ ಕುಮಾರ ಮೇಳಕ್ಕೆ ಚಾಲನೆ ನೀಡಿದರು.
ಯಾವ ತಳಿಯ ಹಣ್ಣುಗಳಿವೆ?: ಮೇಳದಲ್ಲಿ ಕೊಪ್ಪಳ ಜಿಲ್ಲೆಯಲ್ಲಿಯೇ ಬೆಳೆಯುವ ತಳಿಗಳಾದ ಬೇನೆಷಾನ್, ಕೇಸರ್, ದಶಹರಿ, ಆಫೂಸ್, ಮಲ್ಲಿಕಾ, ರಸಪುರಿ, ಸುವರ್ಣರೇಖ, ಇಮಾಮ್ ಪಸಂದ್ ಇದಲ್ಲದೇ ಮುಂತಾದ ತಳಿಗಳ ಹಣ್ಣುಗಳು ಲಭ್ಯ ಇವೆ. ಒಂದೊಂದು ತಳಿಯ ಹಣ್ಣುಗಳಿಗೆ ಒಂದೊಂದು ಬೆಲೆ ನಿಗದಿ ಮಾಡಿದ್ದು, ರೈತ ಹಾಗೂ ಗ್ರಾಹಕನಿಗೆ ಯಾವುದೇ ರೀತಿಯ ಹೊರೆಯಾಗದಂತೆ ಇಲಾಖೆಯು ನಿಗಾ ವಹಿಸಿದೆ. 1 ಕೆಜಿ 50 ರಿಂದ 70 ರೂ. ವರೆಗೆ ಮಾವಿನ ಹಣ್ಣು ದೊರೆಯುತ್ತಿವೆ.
ಸಂಸ್ಕರಿಸಿದ ಚಟ್ನಿಯೂ ಮೇಳದಲ್ಲಿ ಲಭ್ಯ: ಮಾವಿನ ಹಣ್ಣುಗಳ ಜೊತೆ ಮಾವಿನ ಸಂಸ್ಕರಿಸಿದ ಚಟ್ನಿ, ಉಪ್ಪಿನಕಾಯಿ, ಮಾವಿನ ರಸ, ಜಾಮ್ ಹಾಗೂ ಇತರೆ ಉತ್ಪನ್ನಗಳು ಮೇಳದಲ್ಲಿ ಗ್ರಾಹಕರಿಗೆ ಸಿಗಲಿವೆ. ಈ ಬಾರಿ ಮಾವು ಮೇಳದಲ್ಲಿ ಮಾವು ಬೆಳೆದ ರೈತ ಮಹಿಳೆಯರು ಸಹ ಭಾಗಿಯಾಗಿದ್ದಾರೆ.
ಮೇಳದಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಎಸ್‌ಪಿ ರೇಣುಕಾ ಕೆ. ಸುಕುಮಾರ್, ಜಿಪಂ ಸಿಇಒ ಆರ್.ಎಸ್. ಪೆದ್ದಪ್ಪಯ್ಯ ಅವರು ಪಾಲ್ಗೊಂಡು ಮಾವಿನ ವಿವಿಧ ಬಗೆಯ ಹಣ್ಣುಗಳು ಹಾಗೂ ಅವುಗಳ ಗುಣಮಟ್ಟವನ್ನು ಪರೀಕ್ಷಿಸಿ, ಹಣ್ಣುಗಳ ರುಚಿ ಸವಿದರು. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Advertisement
ಮೂರು ವರ್ಷಗಳಿಂದ ತೋಟಗಾರಿಕೆ ಇಲಾಖೆಯು ವಿವಿಧ ಮೇಳ ಆಯೋಜನೆ ಮಾಡುವ ಮೂಲಕ ರೈತ ಹಾಗೂ ಗ್ರಾಹಕರನ್ನು ಆಕರ್ಷಣೆ ಮಾಡಿ ಮಾರುಕಟ್ಟೆಯ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುತ್ತಿದೆ. ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವಿನ ಹಣ್ಣಿಗಳ ಸೀಜನ್ ಈಗಾಗಲೇ ಶುರುವಾಗಿದ್ದು, ಜಿಲ್ಲೆಯ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಯೋಗ್ಯ ಬೆಲೆಯಲ್ಲಿ ಒದಗಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಮಾವು ಮೇಳವನ್ನು ಆಯೋಜಿಸಿದೆ. ಮೇಳದಲ್ಲಿ ವಿವಿಧ ತಳಿಗಳ ಮಾವಿನ ಹಣ್ಣುಗಳು ಎಲ್ಲರ ಮನಸ್ಸನ್ನು ಆಕರ್ಷಿಸುತ್ತಿವೆ. ರಸಭರಿತ, ಸಿಹಿ-ಸಿಹಿಯಾದ ಮಾವಿನ ಹಣ್ಣುಗಳು ಮಾವು ಪ್ರೀಯರಿಗೆ ಕಡಿಮೆ ದರದಲ್ಲಿ ದೊರೆಯುತ್ತಿವೆ.
Related Articles
Advertisement