ಹಾವೇರಿ: ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯಡಿ ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಮಾವು ಬೆಳೆಯನ್ನು ಗುರುತಿಸಿದೆ. ಆದರೆ, ಜಿಲ್ಲೆಯ ಮಾವು ಬೆಳೆಗಾರರು ಹವಾಮಾನ ವೈಪರೀತ್ಯ, ಮಾರುಕಟ್ಟೆ ಅವ್ಯವಸ್ಥೆ ಹಾಗೂ ಅಧಿಕ ಖರ್ಚು ಕಡಿಮೆ ಆದಾಯದಿಂದ ಬೇಸತ್ತು ಮಾವು ಕೃಷಿಯಿಂದಲೇ ವಿಮುಕ್ತರಾಗಿ ಪರ್ಯಾಯ ಬೆಳೆಗಳತ್ತ ಚಿತ್ತ ಹರಿಸುತ್ತಿದ್ದಾರೆ. ಇದರಿಂದಾಗಿ ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆ ಸಾಕಾರಗೊಳ್ಳುವುದೇ? ಎಂಬ ಆತಂಕ ಮೂಡಿಸಿದೆ.
ಕೇಂದ್ರ ಸರ್ಕಾರದ ಆತ್ಮ ನಿರ್ಭರ ಯೋಜನೆಯಡಿ ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಗೆ ಅನುಮೋದನೆ ನೀಡಿದ್ದು, ರಾಜ್ಯ ಸರ್ಕಾರ ಗುರುತಿಸಿದ ಉತ್ಪನ್ನಗಳ ಪಟ್ಟಿಯಲ್ಲಿ ಜಿಲ್ಲೆಯ ಮಾವು ಬೆಳೆ ಗುರುತಿಸಲಾಗಿದೆ. ಈ ಯೋಜನೆ ಮೂಲಕ ಭವಿಷ್ಯದ ದಿನಗಳಲ್ಲಿ ಜಿಲ್ಲೆಯಲ್ಲಿ ಮಾವು ಉತ್ಪನ್ನದಡಿ ಸಣ್ಣ ಉದ್ಯಮಗಳ ಆರಂಭ, ಉತ್ಪನ್ನಗಳ ಮೌಲ್ಯವರ್ಧನೆ, ಉದ್ಯೋಗಾವಕಾಶಗಳ ಸೃಷ್ಟಿಸುವ ನೀರಿಕ್ಷೆ ಹೊಂದಲಾಗಿತ್ತು. ಆದರೆ, ಜಿಲ್ಲೆಯಲ್ಲಿ ಮಾವು ಬೆಳೆಗಾರರು ಹೆಚ್ಚಿನ ಆದಾಯ ನೀಡುವ ಬೆಳೆಗಳತ್ತ ಗಮನ ಹರಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಮಾವು ಬೆಳೆ ಕ್ಷೇತ್ರ ಕ್ಷೀಣಿಸುತ್ತಿರುವುದರಿಂದ ಈ ಯೋಜನೆಯಡಿ ಮುಂದಿನ ದಿನಗಳಲ್ಲಿ ರೈತರನ್ನು ಮಾವು ಬೆಳೆಯತ್ತ ಪ್ರೋತ್ಸಾಹಿಸುವ ಸವಾಲು ಎದುರಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಒಂದಿಲ್ಲೊಂದು ಸಂಕಷ್ಟ: ಅತಿವೃಷ್ಟಿ ಅನಾವೃಷ್ಟಿ ಕೀಟ ರೋಗ ಬಾಧೆ, ಹವಾಮಾನ ವೈಪರೀತ್ಯ, ಮಾರುಕಟ್ಟೆ ಸಮಸ್ಯೆ ಸೇರಿದಂತೆ ಒಂದಿಲ್ಲೊಂದು ಸಂಕಷ್ಟವನ್ನು ಪ್ರತಿ ವರ್ಷ ಜಿಲ್ಲೆಯ ಮಾವು ಬೆಳೆಗಾರರು ಎದುರಿಸುವಂತಾಗಿದೆ. ಕಳೆದ ವರ್ಷ ಮಾವು ಬೆಳೆ ಕಡಿಮೆಯಿದ್ದರೂ ಇದ್ದ ಬೆಳೆಯನ್ನೇ ಮಾರಾಟ ಮಾಡಲಾಗದೇ ಬೆಳೆಗಾರರು ನಷ್ಟ ಅನುಭವಿಸಿದ್ದರು.
ಮಾವಿನ ಸೀಸನ್ ವೇಳೆಯೇ ಕೊರೊನಾ ಸೋಂಕು ಆರಂಭವಾಗಿ ಲಾಕ್‌ಡೌನ್ ಮಾಡಲಾಗಿತ್ತು. ಇದರಿಂದ ಇದ್ದ ಬೆಳೆಯನ್ನೇ ಸಾಗಿಸಲಾಗದೇ, ಮಾರುಕಟ್ಟೆಗೆ ಒಯ್ಯಲಾಗದೇ ರೈತರು ನಷ್ಟ ಅನುಭವಿಸಿದ್ದರು. ಈ ಸಲುವಾದರೂ ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ವರ್ಷದ ಆರಂಭದಲ್ಲಿ ಸುರಿದ ಅಕಾಲಿಕ ಮಳೆಯಿಂದ ಮಾವು ನಿರೀಕ್ಷಿತ ಪ್ರಮಾಣದಲ್ಲಿ ರೈತರ ಕೈ ಸೇರದ ಸ್ಥಿತಿ ಎದುರಾಗಿದೆ. ಅಲ್ಲದೇ, ಸದ್ಯ ಗಿಡಗಳಲ್ಲಿ ಎರಡನೇ ಬಾರಿ ಹೂ ಬಿಟ್ಟಿದ್ದರೂ ಅದರ ಫಸಲು ಮೇ ತಿಂಗಳಲ್ಲಿ ಆರಂಭಗೊಳ್ಳಲಿದೆ. ಈ ಸಮಯದಲ್ಲಿ ಮುಂಗಾರು ಪೂರ್ವ ಮಳೆ ಆರಂಭಗೊಳ್ಳುವುದರಿಂದ ಆಲಿಕಲ್ಲು ಮಳೆ ಆತಂಕ ರೈತನ್ನು ಕಾಡುವ ಸಾಧ್ಯತೆಯಿದೆ. ಮಾವು ಬೆಳೆಗಾರರು ಒಂದಿಲ್ಲೊಂದು ಸಂಕಷ್ಟ ಎದುರಿಸುವಂತಾಗಿದೆ.
ಪರ್ಯಾಯ ಬೆಳೆಗಳತ್ತ ಮುಖ: ಜಿಲ್ಲೆಯ ಹಾನಗಲ್ಲ ತಾಲೂಕಿನಲ್ಲಿ ಗರಿಷ್ಠ 3200 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಶಿಗ್ಗಾವಿ ತಾಲೂಕಿನಲ್ಲೂ 1500 ಸಾವಿರ ಹೆಕ್ಟೇರ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 5,700 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಿದೆ. ಆದರೆ, ಪ್ರತಿ ವರ್ಷ ವಿವಿಧ ರೋಗಗಳು, ಹವಾಮಾನ ವೈಪರೀತ್ಯ, ದರ ಕುಸಿತ, ಮಾರುಕಟ್ಟೆ ಸಮಸ್ಯೆ, ಇಳುವರಿ ಕುಂಠಿತ, ಮಧ್ಯವರ್ತಿಗಳಿಂದ ವಂಚನೆ ಸೇರಿದಂತೆ ಮಾವು ಬೆಳೆಗಾರರಿಗೆ ಎದುರಾಗುತ್ತಿರುವ ಸಮಸ್ಯೆಗಳಿಂದ ರೈತರು ಬೇಸತ್ತು ಮಾವು ಕೃಷಿಯಿಂದ ವಿಮುಕ್ತರಾಗಿ ಪರ್ಯಾಯ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ. ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿ ಭಾಗದಲ್ಲಿ ಅನೇಕ ರೈತರು ಮಾವಿನ ಮರಗಳನ್ನು ಕಡಿದುರುಳಿಸುತ್ತಿದ್ದಾರೆ.
ಮಾರ್ಗದರ್ಶನದ ಕೊರತೆ: ಜಿಲ್ಲೆಯ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಸಮರ್ಪಕ ಮಾಹಿತಿ, ಮಾರ್ಗದರ್ಶನ ನೀಡುತ್ತಿಲ್ಲ. ತೋಟಗಾರಿಕೆ ಇಲಾಖೆ ರೈತರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಜಿಲ್ಲೆಯ ಮಾವು ಬೆಳೆಗಾರರಿಗಾದ ನಷ್ಟದ ಬಗ್ಗೆ ಇಲಾಖೆ ಸರ್ಕಾರಕ್ಕೆ ಸೂಕ್ತ ಮಾಹಿತಿ ನೀಡುತ್ತಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿವೆ. ಮಾವಿನ ಮರಗಳಿಗೆ ರೋಗ ಬಾಧೆ ಎದುರಾದಾಗ ಇಲಾಖೆಯಿಂದ ರೈತರಿಗೆ ಸೂಕ್ತ ಮಾರ್ಗದರ್ಶ ಸಿಗುತ್ತಿಲ್ಲ. ಸರ್ಕಾರದ ಯೋಜನೆಗಳನ್ನು ಬೆಳೆಗಾರರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಇಲಾಖೆ ಅಧಿ ಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆಂಬ ದೂರುಗಳು ಕೇಳಿ ಬರುತ್ತಿದ್ದು, ಮಾವು ಬೆಳೆಗಾರರು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ.