ಸಾಗರ: ತಾಲೂಕಿನ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಮಂಡವಳ್ಳಿ, ನಂದೋಡಿ ಹಾಗೂ ಯಡ್ಡಳ್ಳಿ ಮತದಾನ ಕೇಂದ್ರಗಳ ಮತದಾರರು ಮಾರಣಾಂತಿಕ ಮಂಗನ ಕಾಯಿಲೆಯಿಂದ ತತ್ತರಿಸಿ ಹೋಗಿದ್ದರೂ ಪ್ರಜಾಪ್ರಭುತ್ವದ ತಮ್ಮ ಕರ್ತವ್ಯವನ್ನು ಪಾಲಿಸುವಲ್ಲಿ ಹಿಂದೆ ಬೀಳಲಿಲ್ಲ.
18 ದಿನಗಳ ಕಾಲ ಮಣಿಪಾಲದ ಐಸಿಯುನಲ್ಲಿದ್ದು ಬಂದ ನೆಲ್ಲಿಮಕ್ಕಿಯ ದಿವಾಕರ, 12 ದಿನ ಜೀವನ್ಮರಣ ಸನ್ನಿವೇಶ ಅನುಭವಿಸಿದ ಸಂಪದ ರಾಮಚಂದ್ರ ಶಾಸ್ತ್ರಿ, ಇನ್ನು 10 ನಿಮಿಷ ಉಳಿಸಿಕೊಳ್ಳುವುದು ಕಷ್ಟವಿದೆ ಎಂಬ ವೈದ್ಯರ ಉದ್ಘಾರಕ್ಕೆ ಕಾರಣವಾಗಿದ್ದ ಮರಾಠಕೇರಿಯ ಸಂತೋಷ್, ಪತಿ-ಪತ್ನಿಯರಿಬ್ಬರೂ ಮಂಗನ ಕಾಯಿಲೆಗೆ ಸರದಿಯಂತೆ ಮಣಿಪಾಲಕ್ಕೆ ಹೋಗಿ 12 ದಿನವಿದ್ದ ಬಣ್ಣುಮನೆಯ ಬಿ.ಎಸ್.ರಾಘವೇಂದ್ರ ಹಾಗೂ ರತ್ನಾವತಿ ಮೊದಲಾದವರು ಮತದಾನ ಕೇಂದ್ರದ ಬಳಿ ಗ್ರಾಮದ ಉಳಿದವರಿಗೆ ಕಾಣಿಸಿಕೊಂಡರು.
ಬಹುತೇಕ ಜನ ಸಾಗರ ಸೇರಿದಂತೆ ಬೇರೆ, ಬೇರೆ ಕಡೆ ಬಂಧುಗಳ ಅಥವಾ ಬಾಡಿಗೆ ಮನೆಯಲ್ಲಿ ತಾತ್ಕಾಲಿಕ ನಿವಾಸದಲ್ಲಿದ್ದರು. ಮತದಾನಕ್ಕಾಗಿಯೇ ಅರಳಗೋಡಿನತ್ತ ಮಂಗಳವಾರ ಮುಖ ಮಾಡಿದ್ದರು. ಮತ್ತೆ ಮಂಗನ ಕಾಯಿಲೆ ಬರುವುದೆಂಬ ಭಯವಿರುವ ಕಾರಣ ಮಂಡವಳ್ಳಿ ಬೂತ್ ವ್ಯಾಪ್ತಿಯ 25 ಕುಟುಂಬಗಳಲ್ಲಿ 15 ಕುಟುಂಬದವರು ಮತದಾನಕ್ಕಾಗಿಯೇ ಮರಳಿ ಬಂದು, ಮತ ಹಾಕಿ ಮತ್ತೆ ತಾವಿದ್ದಲ್ಲಿಗೆ ಮರಳಿದ್ದಾರೆ.
ಅಳಗೋಡಿನ ಪರಮೇಶ್ವರ್ ಮನೆಯಲ್ಲಿ ಅವರ ತಮ್ಮ ಮಹಾಬಲಗಿರಿ ಅವರ ಪತ್ನಿ ಪೂರ್ಣಿಮಾ (39) ಸಾವನ್ನಪ್ಪಿದ್ದಾರೆ. ಮಹಾಬಲಗಿರಿಯವರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಗರದಲ್ಲಿ ತಾತ್ಕಾಲಿಕವಾಗಿ ವಸತಿ ಮಾಡಿರುವ ಈ ಮನೆಯ ನಾಲ್ವರು ಮತದಾನಕ್ಕಾಗಿಯೇ ಊರಿಗೆ ಬಂದಿದ್ದು, ಮತದಾನದ ಬಳಿಕ ಮತ್ತೆ ಸಾಗರಕ್ಕೆ ಮರಳಿದ್ದಾರೆ. “ನಮ್ಮ ಸಂಕಷ್ಟಗಳೇನೇ ಇರಲಿ. ಮತದಾನ ನಮ್ಮ ಹಕ್ಕು. ಅದನ್ನು ತಪ್ಪಿಸುವುದಕ್ಕೆ ಯಾವ ಕಾರಣವೂ ಸಮರ್ಥವಲ್ಲ’ ಎಂಬ ಕಾರಣಕ್ಕೆ ಮತದಾನ ಮಾಡಲು ಬಂದಿದ್ದೇವೆ ಎಂದು ಶುಂಠಿ ಪರಮೇಶ್ವರ ಅಳಗೋಡು ನುಡಿದರು.
ಮದುವೆ ಮರುದಿನ ಮತದಾನ
ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದ ರಾಕೇಶ ಚೌಗಲೆ ಹಾಗೂ ಗಂಗಾ ನವದಂಪತಿ ಮತದಾನ ಮಾಡಿದರು. ಸೋಮವಾರವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸುವ ಮೂಲಕ ಮಾದರಿಯಾದರು.
ಇದೇ ವೇಳೆ, ತಾಲೂಕಿನ ಕುದ್ರೇಮನಿ ಗ್ರಾಮದಲ್ಲಿ ಶತಾಯುಷಿ ದಂಪತಿಗಳಾದ ಗೋವಿಂದ ಭುಜಂಗ ಪಾಟೀಲ(105), ಪತ್ನಿ ಕೃಷ್ಣಾಬಾಯಿ ಗೋವಿಂದ ಪಾಟೀಲ (101) ಮತದಾನ ಚಲಾಯಿಸಿದರು. ಬೈಲಹೊಂಗಲ ಪಟ್ಟಣದ ಮತಗಟ್ಟೆ ಸಂಖ್ಯೆ 21ರಲ್ಲಿ ಶತಾಯುಷಿ ಅಜ್ಜಿ ಜೈತುನಬಿ ತೋರಗಲ್ಲ(103) ಮತದಾನ ಮಾಡಿ ಇತರರಿಗೆ ಮಾದರಿಯಾದರು.