ಕೋಲಾರ: ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಬಿದ್ದ ಬಿರುಗಾಳಿ ಸಮೇತ ಭಾರಿ ಮಳೆಯಿಂದಾಗಿ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಮಾವು ಬೆಳೆಗೆ ಹಾನಿಯಾಗಿದ್ದು, ಕೆಲವು ಕಡೆಗಳಲ್ಲಿ ಭಾರಿ ಬಿರುಗಾಳಿಗೆ ಮರಗಳು ಸಹಾ ನೆಲಕ್ಕುರುಳಿವೆ.
ಅತಿ ಹೆಚ್ಚು ಮಾವು ಬೆಳೆಯುವ ಶ್ರೀನಿವಾಸ ಪುರ,ಮುಳಬಾಗಿಲು ತಾಲೂಕುಗಳು ಹಾಗೂ ಕೋಲಾರ ತಾಲೂಕಿನ ಕೆಲವು ಭಾಗಗಳಲ್ಲಿ ಸುಮಾರು 40 ಕಿಮೀ ವೇಗದೊಂದಿಗೆ ಬೀಸಿದ ಗಾಳಿಯ ರಭಸಕ್ಕೆ ಮಾವಿನ ಕಾಯಿ ನೆಲಕ್ಕೆ ಉದುರಿ ಹೋಗಿದೆ. ಅದರಲ್ಲೂ ಶ್ರೀನಿವಾಸ ಪುರ ತಾಲೂಕಿನ ರೋಣೂರು ಹೋಬಳಿ, ಕಸಬಾ, ಯಲ್ದೂರು ಹೋಬಳಿಗಳ ಹಲವು ಭಾಗಗಳಲ್ಲಿ ಅತಿ ಹೆಚ್ಚಿನ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಮಾವು ಜತೆಗೆ ತೋಟಗಾರಿಕಾ ಬೆಳೆಗ ಳಾದ ಟೊಮೆಟೋ, ಕ್ಯಾಪ್ಸಿಕಂ ಸೇರಿದಂತೆ ಇತರ ಬೆಳೆಗಳು ಹಾಳಾಗಿದ್ದು, ಕೆಲವು ಕಡೆ ಬಿರುಗಾಳಿಗೆ ಶೆಡ್‌ಗಳ ಶೀಟುಗಳು ಗಾಳಿಗೆ ಹಾರಿದ್ದು, ರೈತರಿಗೆ ಸಾಕಷ್ಟು ಹಾನಿ ಸಂಭವಿಸಿದೆ.
ಅಧಿಕ ಪ್ರಮಾಣದಲ್ಲಿ ಮಾವು ಬೆಳೆ ಹಾನಿ: ಕಳೆದ ಮೂರು ತಿಂಗಳ ಹಿಂದೆ ಬಿದ್ದಿದ್ದ ಆಲಿಕಲ್ಲು ಮಳೆಯಿಂದಾಗಿ ಶೇ.40 ರಷ್ಟು ಮಾವು ಪಿಂದೆಗಳು ಉದುರಿ ಹೋಗಿ ಹಾನಿಯಾಗಿತ್ತು. ಇದೀಗ ಬಿದ್ದ ಮಳೆಗೆ ಇದ್ದಬದ್ದ ಮಾವಿಗೂ ಹಾನಿಯಾಗಿದ್ದು, ಇನ್ನೇನು 15 ದಿನಗಳಲ್ಲಿ ಕೊಯ್ಲಿಗೆ ಬರಬೇಕಿದ್ದ ಮಾವು ಬೆಳೆ ಮಳೆ,ಬಿರುಗಾಳಿಯ ರಭಸಕ್ಕೆ ನೆಲದ ಪಾಲಾಗಿದೆ.
ಪರಿಹಾರಕ್ಕೆ ಮಾವು ಬೆಳೆಗಾರರ ಆಗ್ರಹ: ಭಾನುವಾರ ಸಂಜೆ ಬಿದ್ದಿರುವ ಬಿರುಗಾಳಿ ಸಹಿತಿ ಭಾರಿ ಮಳೆಯಿಂದ ರೈತರಿ ಗಾ ಗಿರುವ ಹಾನಿಗೆ ಸೂಕ್ತ ಪರಿಹಾರ ನೀಡುವ ಮೂಲಕ ಸಂಕಷ್ಟದ ಲ್ಲಿರುವ ರೈತರ ಕೈಹಿಡಿಯುವಂತೆ ಮಾವು ಬೆಳೆಗಾರರು ಒತ್ತಾಯಿಸಿದ್ದಾರೆ.
Related Articles
ತೋಟಗಾರಿಕಾ ಹಾಗೂ ಕಂದಾಯ ಇಲಾ ಖೆಗಳ ವಿಶೇಷ ತಂಡ ರಚಿಸಿ ಜಂಟಿ ಸರ್ವೆ ನಡೆಸ ಬೇಕು. ಆಗಿರುವ ಬೆಳೆ ಹಾನಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಆಯ್ಕೆಯಾಗಿರುವ ಶಾಸಕರುಗಳು ಸಚಿವರಾಗಲು ಲಾಭಿ ನಡೆಸುವಲ್ಲಿ ಬ್ಯುಸಿಯಾಗಿದ್ದಾರೆ. ಮೂರು ದಿನಗಳ ವಿಧಾನಸಭಾ ಅಧಿವೇಶನವೂ ಆರಂಭವಾಗುತ್ತಿರುವುದರಿಂದ ಅಲ್ಲಾದರೂ ಜಿಲ್ಲೆಯ ಮಾವು ಬೆಳೆಗಾರರ ನೋವಿನ ಕುರಿತು ಚರ್ಚೆ ಮಾಡಿ ಸೂಕ್ತ ಪರಿಹಾರ ಒದಗಿಸಬೇಕು ಎಂಬುದು ಜಿಲ್ಲೆಯ ರೈತರ ಒತ್ತಾಯವಾಗಿದೆ.