Advertisement

ಮಂಜೇಶ್ವರ ವಿಧಾನಸಭಾ ಕ್ಷೇತ್ರ : ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆ

05:15 PM Apr 02, 2021 | Team Udayavani |

ಕಾಸರಗೋಡು: ರಾಜ್ಯದ ಅತ್ಯಂತ ಉತ್ತರಕ್ಕಿರುವ, ಭಾಷಾ ಅಲ್ಪಸಂಖ್ಯಾತರೇ ಹೆಚ್ಚಿರುವ ಮತ್ತು ಅತ್ಯಂತ ಹಿಂದುಳಿದಿರುವ ಪ್ರದೇಶವಾಗಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಚುನಾವಣಾ ಪ್ರಚಾರದಲ್ಲಿ ಮೂರು ಪಕ್ಷಗಳು ಮುಂಚೂಣಿಯಲ್ಲಿದ್ದು, ಮತದಾರರನ್ನು ಭೇಟಿಯಾಗುತ್ತಾ ಮತ ಯಾಚಿಸುತ್ತಿದ್ದಾರೆ.

Advertisement

ಇದನ್ನೂ ಓದಿ:ಹುಬ್ಬಳ್ಳಿ: ಚಹಾ ಮಿರ್ಚಿ ಬಜಿ ಮಾರಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಸಾರಿಗೆ ನೌಕರರು

ಎಡರಂಗ, ಐಕ್ಯರಂಗ ಮತ್ತು ಎನ್‌ಡಿಎ ಪಕ್ಷಗಳ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಕಾವೇರ ತೊಡಗಿದ್ದು ಮನೆ ಮನೆಗಳಿಗೆ ತೆರಳಿ ಅಭ್ಯರ್ಥಿಗಳು ಮತ ಯಾಚಿಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯುವ ಹೋರಾಟಗಾರ ಕೆ.ಸುರೇಂದ್ರನ್‌ ಎನ್‌ಡಿಎ ಯಿಂದ, ಮುಸ್ಲಿಂ ಲೀಗಿನ ಯುವ ನಾಯಕ ಮಂಜೇಶ್ವರ ಬ್ಲಾಕ್‌ ಪಂಚಾಯತ್‌ ಮಾಜಿ ಅಧ್ಯಕ್ಷರಾಗಿದ್ದ ಎ.ಕೆ.ಎಂ.ಅಶ್ರಫ್‌ ಐಕ್ಯರಂಗದಿಂದ, ಸಿ.ಪಿ.ಎಂ. ಜಿಲ್ಲಾ ಸಮಿತಿ ಸದಸ್ಯ, ನೀಲೇಶ್ವರ ಬ್ಲಾಕ್‌ ಪಂಚಾಯತ್‌ ಮಾಜಿ ಅಧ್ಯಕ್ಷ ಯುವ ನಾಯಕ ವಿ.ವಿ.ರಮೇಶನ್‌ ಎಡರಂಗದಿಂದ ಸ್ಫರ್ಧಿಸುತ್ತಿದ್ದಾರೆ.

ವಿ.ವಿ.ರಮೇಶನ್

Advertisement

ಈ ಕ್ಷೇತ್ರದಲ್ಲಿ ಹಿಂದೆ 1957ರಲ್ಲಿ ಕನ್ನಡಿಗರಾದ ಉಮೇಶ್‌ ರಾವ್‌, 1960 ರಿಂದ 1967 ರ ತನಕ ಕರ್ನಾಟಕ ಸಮಿತಿಯ ನ್ಯಾಯವಾದಿ ಕಳ್ಳಿಗೆ ಮಹಾಬಲ ಭಂಡಾರಿ, 1970ರಿಂದ 1977 ರ ತನಕ ಸಿಪಿಐ ಪಕ್ಷದ ಎಂ.ರಾಮಪ್ಪ ಮಾಸ್ಟರ್‌, 1982 ರಿಂದ 1987 ರ ತನಕ ಇದೇ ಪಕ್ಷದ ಡಾ.ಸುಬ್ಬರಾವ್‌ ಗೆದ್ದು ರಾಜ್ಯದ ನೀರಾವರಿ ಸಚಿವರಾಗಿದ್ದರು. 1987 ರಿಂದ 2006 ರ ತನಕ ಐಕ್ಯರಂಗದ ಚೆರ್ಕಳಂ ಅಬ್ದುಲ್ಲ ಶಾಸಕರಾಗಿ ಸ್ಥಳೀಯಾಡಳಿತ ಸಚಿವರಾಗಿದ್ದರು. 2006 ರಲ್ಲಿ ಎಡರಂಗದ ಅಭ್ಯರ್ಥಿ ನ್ಯಾಯವಾದಿ ಸಿ.ಎಚ್‌.ಕುಂಞಂಬು ಗೆಲುವು ಸಾಧಿಸಿದ್ದರು. 2011ರಿಂದ ಶಾಸಕ ರಾಗಿದ್ದ ಪಿ.ಬಿ.ಅಬ್ದುಲ್ಲ ರಝಾಕ್‌ ಅವರು ಅನಾರೋಗ್ಯದಿಂದ 2018ರಲ್ಲಿ ನಿಧನ ಹೊಂದಿದರು.

ಬಳಿಕ 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಮುಸ್ಲಿಂ ಲೀಗಿನ ಎಂ.ಸಿ.ಕಮರುದ್ದೀನ್‌ ಐಕ್ಯರಂಗದಿಂದ ಗೆದ್ದು ಕ್ಷೇತ್ರದ ಹಾಲಿ ಶಾಸಕರಾಗಿರುವರು. ಎಡರಂಗದ ಅಭ್ಯರ್ಥಿ ರಾಜ್ಯ ಸರಕಾರದ ಅಭಿವೃದ್ಧಿಯ ಸಾಧನೆಗಳನ್ನು ಮತದಾರರ ಮುಂದಿರಿಸಿ ಮತ ಯಾಚಿಸುತ್ತಿದ್ದು, ವಿಪಕ್ಷ ಐಕ್ಯರಂಗದ ಅಭ್ಯರ್ಥಿ ಎಡರಂಗದ ಆಡಳಿತದ ವಿಫಲತೆಯನ್ನು ಎತ್ತಿ ತೋರಿಸಿ ಮತ ಯಾಚಿಸುತ್ತಿದ್ದಾರೆ. ಎನ್‌ಡಿಎ ಅಭ್ಯರ್ಥಿ ಕೇಂದ್ರ ಬಿಜೆಪಿ ಸರಕಾರದ ಸಾಧನೆಯನ್ನು ಮತದಾರರ ಮುಂದಿರಿಸಿ ಮತ ಯಾಚಿಸುತ್ತಿದ್ದಾರೆ.

ಕೆ.ಸುರೇಂದ್ರನ್‌

2016 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಐಕ್ಯರಂಗದ ಮುಸ್ಲಿಂ ಲೀಗ್‌ ಅಭ್ಯರ್ಥಿ ಪಿ.ಬಿ.ಅಬ್ದುಲ್‌ ರಜಾಕ್‌ ಕೇವಲ 89 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಪಿ.ಬಿ.ಅಬ್ದುಲ್‌ ರಝಾಕ್‌ 56,870 ಮತಗಳನ್ನು ಪಡೆದಿದ್ದರೆ, ಎನ್‌ಡಿಎಯ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್‌ 56,781 ಮತಗಳನ್ನು ಪಡೆದಿದ್ದರು. ಎಡರಂಗದ ಸಿಪಿಎಂ ಅಭ್ಯರ್ಥಿ ಸಿ.ಎಚ್‌.ಕುಂಞಂಬು 42,565 ಮತಗಳನ್ನು ಪಡೆದಿದ್ದರು.
ಪಿ.ಬಿ.ಅಬ್ದುಲ್‌ ರಝಾಕ್‌ ಅವರ ನಿಧನದ ಹಿನ್ನೆಲೆಯಲ್ಲಿ 2019 ಅಕ್ಟೋಬರ್‌ 21 ರಂದು ನಡೆದ ಉಪಚುನಾವಣೆಯಲ್ಲಿ ಐಕ್ಯರಂಗದ ಮುಸ್ಲಿಂ ಲೀಗ್‌ ಅಭ್ಯರ್ಥಿ ಎಂ.ಸಿ.ಖಮರುದ್ದೀನ್‌ 7923 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಎಂ.ಸಿ.ಖಮರುದ್ದೀನ್‌ 65,407 ಮತಗಳನ್ನು ಪಡೆದಿದ್ದರೆ, ಎನ್‌ಡಿಎಯ ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು 57,484 ಮತಗಳನ್ನು ಪಡೆದಿದ್ದರು. ಎಡರಂಗದ ಸಿಪಿಎಂ ಅಭ್ಯರ್ಥಿ ಎಂ.ಶಂಕರ ರೈ 38,233 ಮತಗಳನ್ನು ಪಡೆದು ತೃತೀಯ ಸ್ಥಾನದಲ್ಲಿ ತೃಪ್ತಿ ಪಡಬೇಕಾಯಿತು.

ಎ.ಕೆ.ಎಂ.ಅಶ್ರಫ್‌

ಈ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಲು ಐಕ್ಯರಂಗ ಹೋರಾಡುತ್ತಿದ್ದರೆ, ಎನ್‌ಡಿಎ ಹಾಗು ಎಡರಂಗ ಈ ಕ್ಷೇತ್ರವನ್ನು ಐಕ್ಯರಂಗದಿಂದ ಕಸಿದು ಕೊಳ್ಳಲು ಪ್ರಯತ್ನಿಸುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಗೆಲುವು ತಮ್ಮದೇ ಎಂಬುದಾಗಿ ಮೂರು ಪಕ್ಷಗಳ ಅಭ್ಯರ್ಥಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. ಈ ಮೂವರೊಳಗೆ ಯಾರು ಹಿತವರು ಎಂಬುದು ಎ.6 ರಂದು ನಿರ್ಣಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next