Advertisement

ಮಂಗಮ್ಮನಪಾಳ್ಯದಲ್ಲಿ ನೀರಿದ್ರೆ ಮಂಗಳ ಕಾರ್ಯ!

11:45 AM Apr 08, 2017 | |

ಮಂಗಮ್ಮನಪಾಳ್ಯದಲ್ಲಿ ಸುಮಾರು 10 ರಿಂದ 15 ಸಾವಿರ ಕುಟುಂಬಗಳು ವಾಸವಾಗಿವೆ. ಈ ಭಾಗದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚು, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ಕಡೆಗಳಿಂದ ಬದುಕು ಕಟ್ಟಿಕೊಳ್ಳಲು ಬಂದವರು ಇಲ್ಲಿನವರೇ ಆಗಿದ್ದಾರೆ. ಪಡಿತರ ಚೀಟಿ ಇದ್ದು ಎಲ್ಲ ಸೌಲಭ್ಯ ಪಡೆದಿದ್ದಾರೆ. ಚುನಾವಣೆಗಳಲ್ಲಿ ಈ ವಲಸಿಗರ ಓಟುಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಆದರೆ, ನಂತರದ ದಿನಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. 

Advertisement

ಬೆಂಗಳೂರು: ಇಲ್ಲಿ ನೀರು ಬರುವುದು ಖಾತ್ರಿಯಾದರೆ ಮಾತ್ರ ಹಬ್ಬ-ಹರಿದಿನ, ಸಮಾರಂಭಗಳು ನಡೆಯುತ್ತವೆ! ಹೌದು, ಬೊಮ್ಮನಹಳ್ಳಿಯ ಮಂಗಮ್ಮನಪಾಳ್ಯದ ಜನ ಯಾವುದೇ ಹಬ್ಬ, ಸಮಾರಂಭಗಳ ದಿನಾಂಕ ನಿಗದಿಪಡಿಸುವ ಮುನ್ನ ಆ ಏರಿಯಾಕ್ಕೆ ನೀರು ಬರುವುದನ್ನು ಖಾತ್ರಿಪಡಿಸಿಕೊಳ್ಳುತ್ತಾರೆ. ನಂತರವಷ್ಟೇ ಕಾರ್ಯಕ್ರಮಗಳು ನಿಗದಿಯಾಗುತ್ತವೆ. ಅಷ್ಟರಮಟ್ಟಿಗೆ ಅಲ್ಲಿ ನೀರಿನ ಬವಣೆ ಕಾಡುತ್ತಿದೆ.  

ಕೆಲವೊಮ್ಮೆ ಮೂರ್‍ನಾಲ್ಕು ದಿನಗಳಿಗೊಮ್ಮೆ ಸುಮಾರು 2 ಗಂಟೆಗಳ ಕಾಲ ಕಾವೇರಿ ನೀರು ಬಿಡಲಾಗುತ್ತದೆ. ಒಂದು ವೇಳೆ ಆ ಸಮಯದಲ್ಲಿ ವಿದ್ಯುತ್‌ ವ್ಯತ್ಯಯವಾದರೆ, ಮತ್ತೆ ನೀರು ಬರಲು ವಾರಗಟ್ಟಲೆ ಕಾಯಬೇಕು. ಪ್ರತಿ ಬಾರಿಯೂ ಏನಾದರೊಂದು ಸಮಸ್ಯೆಯನ್ನು ಮುಂದಿಟ್ಟುಕೊಂಡು ಜಲಮಂಡಳಿ ನೀರಿಗಾಗಿ ಜನರನ್ನು ಪರದಾಡುವಂತೆ ಮಾಡುತ್ತದೆ. ಯಾವುದಾದರೂ ಕಾರ್ಯಕ್ರಮಗಳನ್ನು ಆಯೋಜಿಸಬೇಕಾದರೆ, ನೀರು ಬರುವುದನ್ನು ಖಾತ್ರಿಪಡಿಸಿಕೊಳ್ಳಬೇಕಾದ ಸ್ಥಿತಿ ಇದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ. 

ಮಂಗಮ್ಮನಪಾಳ್ಯದಲ್ಲಿ ಸುಮಾರು 10 ರಿಂದ 15 ಸಾವಿರ ಕುಟುಂಬಗಳು ವಾಸವಾಗಿವೆ. ಈ ಭಾಗದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚು, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ಕಡೆಗಳಿಂದ ಬದುಕು ಕಟ್ಟಿಕೊಳ್ಳಲು ಬಂದವರು ಇಲ್ಲಿನವರೇ ಆಗಿದ್ದಾರೆ. ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಗ್ಯಾಸ್‌, ವಿದ್ಯುತ್‌ ಹೀಗೆ ಎಲ್ಲ ಸೌಲಭ್ಯ ಪಡೆದಿದ್ದು, ಚುನಾವಣೆಗಳಲ್ಲಿ ಈ ವಲಸಿಗರ ಓಟುಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಆದರೆ, ನಂತರದ ದಿನಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. 

ನಿಗದಿತ ಸಮಯವಿಲ್ಲ: ನಗರಸಭೆಯಿಂದ ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟ ಬಳಿಕ ಕಾವೇರಿ ನೀರು ಸರಬರಾಜಿಗೆ ಹೊಸ ಪೈಪ್‌ಲೈನ್‌ ಅಳವಡಿಕೆ ಮಾಡಲಾಗಿದೆ. ಆದರೆ, ನಾಲ್ಕು ದಿನಗಳಿಗೊಮ್ಮೆ ಮಾತ್ರ ನೀರು ಪೂರೈಕೆಯಾಗುತ್ತಿದೆ. ಆದರೆ, ಎಚ್‌ಎಸ್‌ಆರ್‌ ಲೇಔಟ್‌, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬೊಮ್ಮನಹಳ್ಳಿ ಇಕ್ಕೆಲಗಳ ಬಡಾವಣೆಗಳಿಗೆ ಈ ಸಮಸ್ಯೆ ಇಲ್ಲ. ಎರಡು ದಿನಕ್ಕೊಮ್ಮೆ ನೀರು ಬಿಡುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಅಷ್ಟೇನೂ ಬಾಧಿಸಿಲ್ಲ. ಆದರೆ, ಹೆದ್ದಾರಿಯಿಂದ ಒಳಗೆ ಹೋದಂತೆ ನೀರಿನ ಸಮಸ್ಯೆ ಹೆಚ್ಚುತ್ತಾ ಹೋಗುತ್ತದೆ.

Advertisement

ಬಂಡೇಪಾಳ್ಯ, ಲಕ್ಷ್ಮಿಲೇಔಟ್‌, ಗಾರೇಬಾವಿಪಾಳ್ಯ, ಹೊಸಪಾಳ್ಯ, ಸೋಮಸಂದ್ರಪಾಳ್ಯ ಮುಂತಾದ ಕಡೆಗಳಲ್ಲಿ ಎರಡು ಅಥವಾ ಮೂರು ದಿನಗಳಿಗೊಮ್ಮೆ ನೀರು ಬಂದರೂ, ಸಮಯ ನಿಗದಿಯಾಗಿಲ್ಲ.  ಕೆಲವು ಕಡೆಗಳಲ್ಲಿ ಸಂಜೆ 6ಕ್ಕೆ ನೀರು ಬಿಟ್ಟರೆ, ಮತ್ತೆ ಹಲವೆಡೆ ರಾತ್ರಿ 9ಗಂಟೆಗೆ ನೀರು ಹರಿಸಲಾಗುತ್ತದೆ. ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಈ ಭಾಗಗಲ್ಲಿ ಮನೆಯವರೆಲ್ಲ ಕೆಲಸಕ್ಕೆ ಹೋದ ಬಳಿಕ ನೀರು ಬರುತ್ತದೆ. ಇದರಿಂದ ನೀರು ಹಿಡಿದಿಟ್ಟುಕೊಳ್ಳುವವರಿಲ್ಲದೇ ಫಿಲ್ಟರ್‌ಕ್ಯಾನ್‌ಗಳಿಗೆ ಮೊರೆ ಹೋಗಬೇಕಾಗುತ್ತದೆ ಎನ್ನುವುದು ಸರ್ಜಾಪುರದ ನಿವಾಸಿ ಗೌರಿ ಅವರ ಆರೋಪ. 

ಟ್ಯಾಂಕರ್‌ ನೀರು ದುಬಾರಿ: ಬೊಮ್ಮನಹಳ್ಳಿ, ಸರ್ಜಾಪುರ ರಸ್ತೆ, ಬೆಳ್ಳಂದೂರು, ಕೂಡೂÉಗೇಟ್‌, ವೈಟ್‌ಫೀಲ್ಡ್‌ ಇತ್ಯಾದಿ ಬಡಾವಣೆಗಳಲ್ಲಿ ನೀರಿನ ಕೊರತೆ ತಾಂಡವಾಡುತ್ತಿದೆ. ಈ ಭಾಗದಲ್ಲಿ ಸ್ವಂತ ಮನೆಗಳನ್ನು ಹೊಂದಿರುವವರು ಸ್ವಂತಕ್ಕೆ ಬೋರ್‌ವೆಲ್‌ಗ‌ಳನ್ನು ಹಾಕಿಸಿಕೊಂಡಿದ್ದಾರೆ. ಆದರೆ, ಬಾಡಿಗೆ ಮನೆಗಳಲ್ಲಿ, ಕೊಳಗೇರಿಗಳಲ್ಲಿ ವಾಸಿಸುವವರ ಗೋಳು ಕೇಳುವವರಿಲ್ಲ.

ಅಕ್ಕ-ಪಕ್ಕದ ಮನೆಯವರೆಲ್ಲ ಕೂಡಿ ಹಣ ಸಂಗ್ರಹಿಸಿ ಟ್ಯಾಂಕರ್‌ ನೀರು ತರಿಸಿಕೊಂಡು ಹಂಚಿಕೊಳ್ಳುತ್ತಾರೆ. ಹೀಗೆ ತಿಂಗಳಿಗೆ ಐದಾರು ಬಾರಿ ಟ್ಯಾಂಕರ್‌ ನೀರಿಗೆ ಮೊರೆ ಹೋಗಬೇಕಾದ ಸ್ಥಿತಿ ಇದೆ. ಮನೆಗಳ ಬಳಿ ಕಾವೇರಿ ನೀರಿನ ಸಂಪರ್ಕದ ಪೈಪ್‌ಗ್ಳಿದ್ದರೂ, ಖಾಸಗಿ ಟ್ಯಾಂಕರ್‌ಗಳಿಗೆ ಹಣ ಸುರಿಯಬೇಕಿದೆ. ಒಂದು ಟ್ಯಾಂಕರ್‌ಗೆ ಈ ಹಿಂದೆ 600 ರಿಂದ 700 ರೂ. ಇತ್ತು. ಈಗ ಬೇಸಿಗೆ ಆರಂಭದಿಂದಾಗಿ ಅದು 800ರಿಂದ 1200ರೂ. ತಲುಪಿದೆ. 

ಸಭೆ, ಸಮಾರಂಭದ ದಿನಾಂಕ ಗುರುತು ಮಾಡಿಕೊಳ್ಳುವ ಮುನ್ನ ಎಂಟು-ಹತ್ತು ಮನೆಗಳವರು ಸೇರಿ ಟ್ಯಾಂಕರ್‌ ನೀರನ್ನು ತರಿಸಿಕೊಂಡು ದೊಡ್ಡ ಡ್ರಮ್‌ಗಳಲ್ಲಿ ಶೇಖರಿಸಿಟ್ಟುಕೊಳ್ಳುತ್ತೇವೆ. ನೀರು ಬಂದಾಗ ತುಂಬಿಟ್ಟುಕೊಳ್ಳಲು ಪ್ರತಿಯೊಂದು ಮನೆಗೆ ಮೂರ್‍ನಾಲ್ಕು ಡ್ರಮ್‌ಗಳು ಇರುವುದು ಇಲ್ಲಿ ಸಾಮಾನ್ಯ. ಮನೆಗಳಿಗೆ ನೆಂಟರು ಬಂದರೂ ಇದೇ ಪರಿಸ್ಥಿತಿ. ಬೋರ್‌ವೆಲ್‌ ನೀರೋ ಅಥವಾ ಕಾವೇರಿ ನೀರೋ ಕೊಟ್ಟರೆ ಸಾಕು ಎನುತ್ತಾರೆ ಗೃಹಿಣಿ ಮಾರ್ಥ ವಿಜಯಕುಮಾರ್‌. 

ಫಿಲ್ಟರ್‌ ಕ್ಯಾನ್‌ಗೆ ಭಾರಿ ಬೇಡಿಕೆ
ಅಗರಹಳ್ಳಿ, ಜೆ.ಪಿ. ನಗರ, ಮಡಿವಾಳ, ಮಾರುತಿನಗರ, ರಾಮಣ್ಣ ಲೇಔಟ್‌, ಎಚ್‌ಎಸ್‌ಆರ್‌ ಲೇಔಟ್‌ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಎರಡು ದಿನಕ್ಕೊಮ್ಮೆ ಕಾವೇರಿ ನೀರು ಬರುತ್ತದೆ. ಹಲವರ ಮನೆಗಳಲ್ಲಿ ಬೋರ್‌ವೆಲ್‌ಗ‌ಳಿವೆ. ಮೊದಲೆಲ್ಲಾ ಹಣಕ್ಕೆ ನೀರು ಮಾರಾಟ ಮಾಡುವ ದಂಧೆ ಇಲ್ಲೆಲ್ಲಾ ಜೋರಾಗಿತ್ತು. ಆದರೆ, ಪಾಲಿಕೆ ವ್ಯಾಪ್ತಿಗೆ ಬಂದ ಮೇಲೆ ಅದು ಕಡಿಮೆಯಾಗಿದೆ. ಟ್ಯಾಂಕರ್‌ಗಳಿಗೆ ಬೇಡಿಕೆ ಇದೆ. ಈ ಭಾಗದಲ್ಲಿ ಬಹುತೇಕ ಮನೆಗಳಲ್ಲಿ ಫಿಲ್ಟರ್‌ ಕ್ಯಾನ್‌ ನೀರು ಬಳಸುತ್ತಿರುವ ದೃಶ್ಯ ಕಂಡುಬಂತು.

ಸುಮಾರು 15ರಿಂದ 20ಕ್ಕೂ ಹೆಚ್ಚು ಫಿಲ್ಟರ್‌ ಕ್ಯಾನ್‌ ನೀರನ್ನು ಮನೆ-ಮನೆಗೆ ತಲುಪಿಸುವ ಸಂಸ್ಥೆಗಳು ಹುಟ್ಟಿಕೊಂಡಿದ್ದು, 30ರಿಂದ 40 ರೂ.ಗಳ ವರೆಗೆ ಬೆಲೆ ನಿಗದಿ ಮಾಡಲಾಗಿದೆ.  ಎರಡು ವರ್ಷಗಳ ಹಿಂದೆ ಕೊಳಚೆನೀರಿನಿಂದ ತುಂಬಿದ್ದ ಮಂಗಮ್ಮನಕೆರೆಯನ್ನು ಬರಿದು ಮಾಡಲಾಗಿದ್ದು, ದುರಸ್ತಿ ಕೆಲಸ ನಡೆಯುತ್ತಿದೆ. ಸುತ್ತಮುತ್ತ ಎಲ್ಲೂ ನೀರಿನ ಸೆಲೆ ಇಲ್ಲದೆ ಅಂತರ್ಜಲಮಟ್ಟವೂ ಕುಸಿಯುತ್ತಿದೆ. 

8 ರಿಂದ 10 ದಿನಗಳಿಗೊಮ್ಮೆ ನೀರು ಬಿಡಲಾಗುತ್ತದೆ. ಕರೆಂಟು ಹೋದರೆ, ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಒಂದೊಂದು ಸಲ ವಿದ್ಯುತ್‌ ಕಡಿತವಾದರೆ ನಾಲ್ಕು ತಾಸಾದರೂ ಬರುವುದೇ ಇಲ್ಲ. 
-ಗೌರಮ್ಮ, ಚನ್ನಪ್ಪ ಪಟೇಲ್‌ ರಸ್ತೆ, ಮಂಗಮ್ಮನಪಾಳ್ಯ

ಹಲವು ವರ್ಷಗಳಿಂದ ನೀರಿನ ಸಮಸ್ಯೆ ಇದೆ. ಎಷ್ಟು ಜನಕ್ಕೆ ದೂರು ಕೊಟ್ಟರೂ ಪರಿಹಾರ ಮಾತ್ರ ಆಗಿಲ್ಲ. ಅಕ್ಕಪಕ್ಕದ ಬಡಾವಣೆಗ ಳಲ್ಲಿ ಎರಡು ದಿನಕ್ಕೊಮ್ಮೆ ನೀರು ಬರುತ್ತದೆ. ಹಬ್ಬಗಳು ಬಂದರೆ ಟ್ಯಾಂಕರ್‌ಗೆ 1000 ರೂ. ಕೊಟ್ಟು ಬಡಾವಣೆ ಜನ ನೀರು ಹಾಕಿಸಿಕೊಳ್ಳುವ ಪರಿಸ್ಥಿತಿ ಇದೆ.
-ಪಿ. ಸುಧಾಕರ್‌, ಮಂಗಮ್ಮನಪಾಳ್ಯ

* ಸಂಪತ್‌ ತರೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next