ಬೆಂಗಳೂರು: ಎದೆನೋವು ಎಂದು ಚಿಕಿತ್ಸೆಗೆ ಬಂದಿದ್ದ ಮಹಿಳೆಯ ಮಾಂಗಲ್ಯ ಸರ ಕದ್ದ ಆರೋಪದಡಿ ಖಾಸಗಿ ಆಸ್ಪತ್ರೆಯ ಮೂವರು ಸಿಬ್ಬಂದಿ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟೇಗಾರಪಾಳ್ಯ ನಿವಾಸಿ ರಾಜೇಶ್ವರಿ(36) ಎಂಬವರು ನೀಡಿದ ದೂರಿನ ಮೇರೆಗೆ ಮೂಡಲಪಾಳ್ಯ ಮುಖ್ಯರಸ್ತೆಯ ಖಾಸಗಿ ಆಸ್ಪತ್ರೆಯ ಶುಶ್ರೂಕಿಯರಾದ ಅಕ್ಷತಾ, ಅದೀನಾ, ಹೌಸ್ ಕೀಪಿಂಗ್ ಕೆಲಸ ಮಾಡುವ ಪ್ರೇಮಮ್ಮಾ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಫೆ.8ರ ಮಧ್ಯಾಹ್ನ ದೂರುದಾರರಾದ ರಾಜೇಶ್ವರಿಗೆ ಎದೆನೋವು ಕಾಣಿಸಿಕೊಂಡಿದ್ದು, ರಾತ್ರಿ ನೋವು ಹೆಚ್ಚಾಗಿದೆ. ಕೂಡಲೇ ಪತಿ ವೆಂಕಟೇಶಮೂರ್ತಿ ಪತ್ನಿ ರಾಜೇಶ್ವರಿಯನ್ನು ತಡರಾತ್ರಿ ಮೂಡಲಪಾಳ್ಯ ಮುಖ್ಯರಸ್ತೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ವೇಳೆ ವೈದ್ಯರು ಆರೋಗ್ಯ ತಪಾಸಣೆ ಮಾಡಿ, ಇಸಿಜಿ ಮಾಡಿಸಲು ಸೂಚಿಸಿದ್ದಾರೆ. ಆಗ ಕರ್ತವ್ಯದಲ್ಲಿದ್ದ ನರ್ಸ್ ಅಕ್ಷತಾ ಇಸಿಜಿ ಮಾಡಬೇಕೆಂದು, ಮಾಂಗಲ್ಯ ಸರ ತೆಗೆಯಲು ಹೇಳಿದ್ದಾರೆ. ಸುಮಾರು 2.50 ಲಕ್ಷ ರೂ. ಮೌಲ್ಯದ 50 ಗ್ರಾಂ ತೂಕದ ಸರ ಬಿಚ್ಚಿ ತಮ್ಮ ಪತಿಯ ಕೈಗೆ ನೀಡಲು ರಾಜೇಶ್ವರಿ ಮುಂದಾಗಿದ್ದಾರೆ. ಆಗ ನರ್ಸ್ ಅಕ್ಷತಾ ಮಾಂಗಲ್ಯ ಸರವನ್ನು ತಲೆದಿಂಬಿನ ಕೆಳಗೆ ಇರಿಸುವಂತೆ ಹೇಳಿದ್ದಾರೆ. ಆದರೂ ರಾಜೇಶ್ವರಿ ಪತಿಯ ಕೈಗೆ ಕೊಡುವೆ. ಅವರನ್ನು ಕರೆಯಿರಿ ಎಂದಾಗ, ಅಕ್ಷತಾ ದಿಂಬಿನ ಕೆಳಗೆ ಇಡುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ ದಿಂಬಿನ ಕೆಳಗೆ ಮಾಂಗಲ್ಯ ಸರ ಇಟ್ಟಿದ್ದಾರೆ.
ಬಳಿಕ ಎದೆಗೆ ಜೆಲ್ ಹಾಕಿ ಇಸಿಜಿ ಮಾಡಿದ ಅಕ್ಷತಾ, ಜೆಲ್ ಒರೆಸಿಕೊಂಡು ಹೊರಡಿ ಎಂದು ರಾಜೇಶ್ವರಿಯನ್ನು ಆತುರಾತುರವಾಗಿ ಹೊರಗೆ ಕಳುಹಿಸಿದ್ದಾರೆ. ಈ ವೇಳೆ ನರ್ಸ್ ಅದೀನಾ ಸಹ ಅಕ್ಷತಾ ಹಾಗೂ ಸ್ವತ್ಛತಾ ಸಿಬ್ಬಂದಿ ಪ್ರೇಮಮ್ಮಾ ಜತೆಗೆ ಇದ್ದರು.
ಬಳಿಕ ರಾಜೇಶ್ವರಿ ಮಾಂಗಲ್ಯ ಸರವನ್ನು ಮರೆತು ಪತಿಯ ಜತೆಗೆ ಮನೆಗೆ ತೆರಳಿದ್ದಾರೆ. ಚುಚ್ಚುಮದ್ದು ಪಡೆದುಕೊಂಡಿದ್ದರಿಂದ ರಾಜೇಶ್ವರಿ ಗಾಢ ನಿದ್ದೆಗೆ ಜಾರಿದ್ದಾರೆ. ಮರು ದಿನ ಸ್ನಾನ ಮಾಡುವಾಗ ಮಾಂಗಲ್ಯ ಸರ ನೆನಪಾಗಿ, ಕೆಲ ಹೊತ್ತಿನ ಬಳಿಕ ದಂಪತಿ ಆಸ್ಪತ್ರೆಗೆ ತೆರಳಿ ವಿಚಾರಿಸಿದಾಗ ಸಿಬ್ಬಂದಿ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲದೆ ಜಗಳ ಮಾಡಿದ್ದಾರೆ, ಹೀಗಾಗಿ ಇಸಿಜಿ ವೇಳೆ ಸ್ಥಳದಲ್ಲಿ ನರ್ಸ್ ಗಳಾದ ಅಕ್ಷತಾ, ಅದೀನಾ, ಹೌಸ್‌ಕೀಪಿಂಗ್ ಕೆಲಸ ಮಾಡುವ ಪ್ರೇಮಮ್ಮಾ ಮೇಲೆ ಅನುಮಾನವಿದೆ ಎಂದು ರಾಜೇಶ್ವರಿ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.