ಮಹಾನಗರ: ಪಾಲಿಕೆ ವ್ಯಾಪ್ತಿಯಲ್ಲಿ 5 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಹಲವು ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಸುಭದ್ರ ಆಡಳಿತವನ್ನು ನೀಡಲಾಗಿದೆ. ರಸ್ತೆ ಅಭಿವೃದ್ಧಿ, ಒಳಚರಂಡಿ ವ್ಯವಸ್ಥೆ ಸುಸ್ಥಿತಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಸ್ಮಾರ್ಟ್‌ಸಿಟಿ, ಅಮೃತ್ ಯೋಜನೆ, ಮಾರುಕಟ್ಟೆ ಅಭಿವೃದ್ಧಿಗೆ ಪ್ರಾಧಾನ್ಯ ನೀಡಲಾಗಿದೆ ಎಂದು ಮೇಯರ್ ಭಾಸ್ಕರ್ ಕೆ. ಅಭಿಪ್ರಾಯಪಟ್ಟರು.
ಮಾ. 7ರಂದು ಮೇಯರ್ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆ ಯಲ್ಲಿ ಗುರುವಾರ ಪಾಲಿಕೆಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 5 ವರ್ಷಗಳಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಿನ ರಸ್ತೆ ಅಭಿವೃದ್ಧಿ, ಕಾಂಕ್ರೀಟ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮಳೆ ನೀರಿನ ಚರಂಡಿ ನಿರ್ಮಾಣಕ್ಕೆ ಒತ್ತು ನೀಡಲಾಗಿತ್ತು. ಬಹುತೇಕ ಭಾಗದಲ್ಲಿ ಫುಟ್‌ಪಾತ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಜತೆಗೆ, ಒಂದು ವರ್ಷದ ಅವಧಿಯಲ್ಲಿ ಪಾಲಿಕೆಯ ವಿವಿಧ ಅಭಿವೃದ್ಧಿ ಚಟುವಟಿಕೆಯನ್ನು ಸರ್ವರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದರು.
1 ವರ್ಷದಲ್ಲಿ ಅಮೃತ್ ಯೋಜನೆಯಡಿ ಒಳಚರಂಡಿ, ನೀರಿನ ವ್ಯವಸ್ಥೆಗೆ 179.50 ಕೋ. ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ನಗರದ 4 ಪಾರ್ಕ್‌ಗಳನ್ನು 2 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. 4 ಕೋ. ರೂ.ವೆಚ್ಚದಲ್ಲಿ ಮಳೆ ನೀರು ಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
2ನೇ ಹಂತದ ಎಡಿಬಿ ಯೋಜನೆ ಪ್ರಗತಿಯಲ್ಲಿದ್ದು, ಕುಡಿಯುವ ನೀರಿನ ಸಮಸ್ಯೆಗೆ ತುಂಬೆಯಲ್ಲಿ ನಿರ್ಮಿಸಿದ ಕಿಂಡಿ ಅಣೆಕಟ್ಟು ಎತ್ತರವನ್ನು 6 ಮೀ. ಎತ್ತರಕ್ಕೆ ಏರಿಸಲಾಗಿದೆ. 8 ಮಾರುಕಟ್ಟೆ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, 4 ಮಾರುಕಟ್ಟೆ ಉದ್ಘಾಟಿಸಲಾಗಿದೆ. ಉಳಿದ 4ರ ಕಾಮಗಾರಿ ಪ್ರಗತಿಯಲ್ಲಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಕೇಂದ್ರ ಮಾರುಕಟ್ಟೆ ನಿರ್ಮಾಣ, ಎಂಎಲ್‌ಸಿಪಿ, ಬಸ್ ಟರ್ಮಿನಲ್ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದರು.
ಪ್ರೀಮಿಯಂ ಎಫ್‌ಐಆರ್‌ನಡಿಯಲ್ಲಿ 120 ಕೋ.ರೂ. ಸಂಗ್ರಹವಾಗಿದ್ದು, ಇದರಲ್ಲಿ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮಳೆಗಾಲದ ನೆರೆ ಪ್ರವಾಹ ತಡೆಗಟ್ಟಲು ಕಾರ್ಯಕ್ರಮ ಆಯೋಜಿಸಲಾಗಿದೆ. ಜಪ್ಪು ಮೆಟರ್ನಿಟಿ ಆಸ್ಪತ್ರೆ ಬಳಿ ಇರುವ ಖಾಲಿ ಸ್ಥಳ, ಕರಂಗಲ್ಪಾಡಿ ಮಾರುಕಟ್ಟೆ , ಕಾರ್‌ಸ್ಟ್ರೀಟ್ ಹೂವಿನ ಮಾರುಕಟ್ಟೆಯನ್ನು ಡಿಬಿಎಫ್ ಓಟಿ ಕಾರ್ಯಕ್ರಮದಡಿ ಅಭಿವೃದ್ಧಿಗೊಳಿಸಲಾಗುವುದು. ಎರಡನೇ ಹಂತದಲ್ಲಿ ನಗರದ 13 ರಸ್ತೆ, ವಿವಿಧ ವೃತ್ತಗಳನ್ನು 22.97 ಕೋ.ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದರು.
ಉಪಮೇಯರ್ ಮಹಮ್ಮದ್, ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ, ನವೀನ್ ಡಿ’ಸೋಜಾ, ಪ್ರವೀಣ್‌ಚಂದ್ರ ಆಳ್ವ, ಕಾರ್ಪೊರೇಟರ್ ಡಿ.ಕೆ. ಅಶೋಕ್, ಪ್ರತಿಭಾ ಕುಳಾಯಿ ಉಪಸ್ಥಿತರಿದ್ದರು.