ಮಂಗಳೂರು: ಬಿಜೆಪಿ ನಿಕಟ ಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಮತ್ತೆ ಸಂಸದರನ್ನಾಗಿ ಆಯ್ಕೆ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕರೆ ನೀಡಿರುವುದು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಮಂಗಳೂರಿನಲ್ಲಿ ಬುಧವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ವಿಜಯೇಂದ್ರ ಅವರು. ಬಿಜೆಪಿ ಧ್ವಜವನ್ನು ಎತ್ತರಕ್ಕೆ ಹಾರಿಸಿರುವ ಕೀರ್ತಿ ನಮ್ಮ ಕಾರ್ಯಕರ್ತರಿಗೆ ಸಲ್ಲುತ್ತದೆ. ಇದೇ ವೇಳೆ ಪಕ್ಷದ ಕಾರ್ಯಕರ್ತರಿಗೆ ನಾನು ಮನವಿ ಮಾಡುತ್ತೇನೆ, ಮುಂದಿನ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ನಳಿನ್ ಕುಮಾರ್ ಕಟೀಲ್ ಅವರನ್ನು ಮತ್ತೆ ಸಂಸದರನ್ನಾಗಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು. ಇದು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ರಾಜಕೀಯ ವಲಯದಲ್ಲಿ ಈ ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಲಾಗುತ್ತದೆ ಎನ್ನುವ ಚರ್ಚೆಯ ನಡುವೆ ವಿಜಯೇಂದ್ರ ಅವರು ನೀಡಿದ ಹೇಳಿಕೆ ಹೊಸ ಚರ್ಚೆ ಹುಟ್ಟು ಹಾಕಿದೆ. ಇದೀಗ ಮೂರು ಬಾರಿಯ ಸಂಸದ ನಳಿನ್ ಕುಮಾರ್ ಅವರು ಕಟೀಲ್ ಮತ್ತೆ ಕಣಕ್ಕಿಳಿಯುವ ಸುಳಿವನ್ನು ವಿಜಯೇಂದ್ರ ಬಹಿರಂಗ ವೇದಿಕೆಯಲ್ಲಿ ನೀಡಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ಆರಂಭದ ಕಾಲದಿಂದ ಇಂದಿನವರೆಗೂ ಭದ್ರನೆಲೆ ಒದಗಿಸಿರುವುದು ನಮ್ಮ ಕರಾವಳಿ ಕರ್ನಾಟಕ ಮಾತ್ರ. ಅದಕ್ಕಾಗಿ ಈ ಭಾಗದ ಜನತೆಗೆ ನಾನು ಹೃದಯ ತುಂಬಿ ಕೃತಜ್ಞತೆ ಸಲ್ಲಿಸಿ ಅಭಿನಂದಿಸುತ್ತೇನೆ. ನಮ್ಮ ಮುಂದಿರುವ ಲೋಕ ಸಭಾ ಚುನಾವಣೆಯಲ್ಲಿ ವಿಶ್ವಗುರು ಭಾರತವನ್ನಾಗಿಸುವ ಸಂಕಲ್ಪ ತೊಟ್ಟು ಮುನ್ನಡೆದಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಹಗಲಿರುಳು ಶ್ರಮಿಸಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್, ರಾಜೇಶ್ ನಾಯ್ಕ್, ಹರೀಶ್ ಪೂಂಜ, ಕು.ಭಾಗೀರಥಿ ಮುರುಳ್ಯ, ಜಿಲ್ಲಾಧ್ಯಕ್ಷ ಸುದರ್ಶನ್, ಮೇಯರ್ ಸುಧೀರ್ ಶೆಟ್ಟಿ, ಚಲನಚಿತ್ರನಟಿ ತಾರಾ ಅನುರಾಧಾ, ಮೋನಪ್ಪ ಭಂಡಾರಿ, ಉದಯಕುಮಾರ್ ಶೆಟ್ಟಿ, ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು ಮತ್ತು ಕಾರ್ಯಕರ್ತರು ಸಭೆಯಲ್ಲಿ ಹಾಜರಿದ್ದರು.
ದಕ್ಷಿಣ ಕನ್ನಡ ಪ್ರವಾಸದ ವೇಳೆ ವಿಜಯೇಂದ್ರ ಅವರು ಪಕ್ಷದ ಹಿರಿಯ, ಮಾಜಿ ಶಾಸಕ ಯೋಗೀಶ್ ಭಟ್ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
”ನಮ್ಮ ಬೂತ್ – ನಮ್ಮ ಶಕ್ತಿ ಕಾರ್ಯಕರ್ತ ನಮಗೆ ಸ್ಫೂರ್ತಿ” ಎಂಬ ಧ್ಯೇಯ ವಾಕ್ಯದಡಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಕೋಡಿಯಾಲ್ ಬೈಲ್ 30 ನೇ ವಾರ್ಡ್’ನ ಬೂತ್ ಸಂಖ್ಯೆ 65 ರ ಅಧ್ಯಕ್ಷ ಯಶವಂತ್ ಕುದ್ರೋಳಿ ಅವರ ನಿವಾಸಕ್ಕೆ ಭೇಟಿ ನೀಡಿದರು.