Advertisement

Mangaluru: ಟ್ರಾಫಿಕ್‌ ಸಿಗ್ನಲ್‌ ಕಾರ್ಯಾಚರಣೆ ಯಾವಾಗ?; ಇಲಾಖೆಗೆ ಸಿಕ್ಕಿಲ್ಲ ಕಂಟ್ರೋಲ್‌

06:37 PM Sep 29, 2024 | Team Udayavani |

ಮಹಾನಗರ: ನಗರದಲ್ಲಿ ಸಂಚಾರ ಸುಧಾರಣೆಗೆ ವಿವಿಧ ಜಂಕ್ಷನ್‌ಗಳಲ್ಲಿ ಟ್ರಾಫಿಕ್‌ ಸಿಗ್ನಲ್‌ಗ‌ಳನ್ನು ಅಳವಡಿಸಲಾಗಿದೆ. ಆದರೆ ಪ್ರಸ್ತುತ ನಗರದ ಐದು ಕಡೆಗಳಲ್ಲಿ ಮಾತ್ರ ಕಾರ್ಯಾಚರಣೆ ನಡೆಯುತ್ತಿದ್ದು, ಉಳಿದ ವುಗಳು ಇನ್ನೂ ಕಾರ್ಯಾಚರಣೆ ಆರಂಭಿಸಿಲ್ಲ.

Advertisement

ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆ ಯಡಿ ಕಮಾಂಡ್‌ ಕಂಟ್ರೋಲ್‌ ರೂಂ ನಿಂದ ನಿಯಂತ್ರಿಸಲ್ಪಡುವ ಈ ಹೊಸ ಕಂಬಗಳ ಸಹಿತ ಸಿಗ್ನಲ್‌ಗ‌ಳನ್ನು ಕೆಲವು ತಿಂಗಳುಗಳ ಹಿಂದೆ ಅಳವಡಿಸಲಾಗಿದೆ. ಆದರೆ ಈ ಮೊದಲು ಎಲ್ಲೆಲ್ಲ ಸಿಗ್ನಲ್‌ಗ‌ಳು ಕಾರ್ಯಾಚರಣೆ ನಡೆಸುತ್ತಿತ್ತೋ ಅಲ್ಲಿ ಮಾತ್ರ ಈಗಲೂ ಕಾರ್ಯಾಚರಿಸು ತ್ತಿದೆ. ಇತರ ಕಡೆಗಳಲ್ಲಿ ಹೊಸ ಸಿಗ್ನಲ್‌ ಅಳವಡಿಸಿದ್ದರೂ ಅವುಗಳು ಕಾರ್ಯಾಚರಣೆ ನಡೆಸು ತ್ತಿಲ್ಲ. ಇವುಗಳು ಇನ್ನೂ ಸ್ಮಾರ್ಟ್‌ ಸಿಟಿಯ ಅಧೀನದಲ್ಲಿಯೇ ಇದ್ದು, ಪೊಲೀಸ್‌ ಇಲಾಖೆಗೆ ಇವುಗಳ ಕಾರ್ಯಾಚರಣೆ ಹಸ್ತಾಂತರಿಸುವ ಕಾರ್ಯ ನಡೆದಿಲ್ಲ.

ಎಲ್ಲೆಲ್ಲಿ ಸಿಗ್ನಲ್‌ ಕಾರ್ಯಾಚರಿಸುತ್ತಿವೆ?
ನಗರದಲ್ಲಿ ಪ್ರಸ್ತುತ ಲಾಲ್‌ಬಾಗ್‌ ವೃತ್ತ, ಪಿವಿಎಸ್‌ ಜಂಕ್ಷನ್‌, ಹಂಪನಕಟ್ಟೆ, ಕಂಕನಾಡಿಯ ಕರಾವಳಿ ವೃತ್ತ, ರಾ.ಹೆ. 66ರ ಕೆ.ಪಿ.ಟಿ. ವೃತ್ತದಲ್ಲಿ, ಸಿಗ್ನಲ್‌ಗ‌ಳು ಕಾರ್ಯಾಚರಿಸುತ್ತಿವೆ. ಬೆಂದೂರುವೆಲ್‌, ಬೆಂದೂರು, ಬಿಜೈ ಕೆಎಸ್‌ಆರ್‌ಟಿಸಿ, ಬಲ್ಮಠಗಳಲ್ಲಿ ಹೊಸ ಸಿಗ್ನಲ್‌ ಅಳವಡಿಸಲಾಗಿದ್ದು ಕಾರ್ಯಾಚರಿಸುತ್ತಿಲ್ಲ.

ಸಮಸ್ಯೆ ಸರಿಪಡಿಸಬೇಕಿದೆ
ಬಂಟ್ಸ್‌ಹಾಸ್ಟೆಲ್‌ನಿಂದ ಕದ್ರಿ ಕಡೆಗೆ ಸಾಗುವ ರಸ್ತೆಯಲ್ಲಿ ಸಿಗ್ನಲ್‌ ದಾಟಿದ ತತ್‌ಕ್ಷಣವೇ ಬಸ್‌ ತಂಗುದಾಣವಿದೆ. ಇಲ್ಲಿ ಸಿಗ್ನಲ್‌ ಕಾರ್ಯಾಚರಿಸಲು ಆರಂಭವಾದರೆ ನಾಲ್ಕೈದು ಬಸ್‌ಗಳು ಒಟ್ಟಿಗೆ ಬಂದಾಗ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಬೆಂದೂರುವೆಲ್‌ ಜಂಕ್ಷನ್‌ನಲ್ಲೂ ಕಂಕನಾಡಿ ಕಡೆಯಿಂದ ಬರುವ ಬಸ್‌ಗಳು ಸಿಗ್ನಲ್‌ ಬುಡದಲ್ಲಿಯೇ ಪ್ರಯಾಣಿಕರನ್ನು ಇಳಿಸುತ್ತವೆ. ಇಲ್ಲಿ ಈಗಾಗಲೇ ವಾಹನ ದಟ್ಟಣೆ ಉಂಟಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಿಗ್ನಲ್‌ ಕಾರ್ಯಾಚರಣೆ ಆರಂಭ ವಾದರೆ ಸಮಸ್ಯೆಯಾಗಲಿದೆ.

ಸಿಗ್ನಲ್‌ನಲ್ಲೇ ಇವೆ ಬಸ್‌ ತಂಗುದಾಣಗಳು
ನಗರದ ಕೆಲವು ಜಂಕ್ಷನ್‌ಗಳಲ್ಲಿ ಸಿಗ್ನಲ್‌ ಅಳವಡಿಸಿರುವಲ್ಲಿಯೇ ಬಸ್‌ ತಂಗುದಾಣಗಳಿವೆ. ಇದರಿಂದಲೂ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಪಿವಿಎಸ್‌ ಜಂಕ್ಷನ್‌ ಬಳಿ ಇಂತಹ ಸಮಸ್ಯೆಯಿದೆ. ನವಭಾರತ ವೃತ್ತದ ಕಡೆಯಿಂದ ಬರುವ ಬಸ್‌ಗಳು ಸಿಗ್ನಲ್‌ ಬಳಿಯೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದರಿಂದ ಎಂ.ಜಿ. ರಸ್ತೆಗೆ ತೆರಳುವ ವಾಹನಗಳು ದಟ್ಟಣೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಇನ್ನೊಂದು ಕಡೆ ಬಂಟ್ಸ್‌ಹಾಸ್ಟೆಲ್‌ನಿಂದ ಬರುವ ಬಸ್‌ಗಳು ಕುದು¾ಲ್‌ ರಂಗರಾವ್‌ ಹಾಸ್ಟೆಲ್‌ ಮುಂಭಾಗದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದರಿಂದ ನವಭಾರತ ರಸ್ತೆಯ ಕಡೆಗೆ ಸಾಗುವ ವಾಹನಗಳಿಗೆ ಅಡ್ಡಿಯಾಗುತ್ತಿದೆ.

Advertisement

ಹಂಪನಟ್ಟೆ ಜಂಕ್ಷನ್‌ನಲ್ಲಿ ಮತ್ತೆ ದಟ್ಟಣೆ
ಹಂಪನಕಟ್ಟೆ ಜಂಕ್ಷನ್‌ನಲ್ಲಿ ಈ ಮೊದಲು ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಪ್ರಯಾಣಿಕರಿಗೆ ಬಸ್ಸುಗಳನ್ನು ಹತ್ತಲು ಅವಕಾಶ ನಿರಾಕರಿಸಲಾಗಿತ್ತು. ತಿಂಗಳ ಹಿಂದೆ ಇಲ್ಲಿನ ಬ್ಯಾರಿಕೇಡ್‌ಗಳನ್ನು ತೆಗೆಯಲಾಗಿದ್ದು, ಪ್ರಯಾಣಿಕರನ್ನು ಸಿಗ್ನಲ್‌ನಲ್ಲಿಯೇ ಹತ್ತಿಸಿಕೊಳ್ಳಲಾಗುತ್ತಿದೆ. ಬಸ್‌ಗಳು ಸಿಗ್ನಲ್‌ ಬಳಿಯೇ ನಿಲ್ಲುವುದರಿಂದ ಹಿಂದಿನಿಂದ ಬರುವ ವಾಹನಗಳಿಗೆ ಕೆಎಸ್‌ರಾವ್‌ ರಸ್ತೆ ಕಡೆಗೆ ತೆರಳಲು ಸಮಸ್ಯೆಯಾಗುತ್ತಿದೆ. ಸುಮಾರು 50 ಸೆಕೆಂಡ್‌ಗಳ ಸಿಗ್ನಲ್‌ ಇದ್ದರೂ ವಾಹನಗಳಿಗೆ ಸರಾಗವಾಗಿ ಸಾಗಲು ಸಾಧ್ಯವಾಗುತ್ತಿಲ್ಲ.

ಪ್ರಾಯೋಗಿಕ ಕಾರ್ಯಾಚರಣೆ ಪರಿಶೀಲಿಸಿ ಕ್ರಮ
ನಗರದ ಜಂಕ್ಷನ್‌ಗಳಲ್ಲಿ ಹೊಸದಾಗಿ ಅಳವಡಿಸಿರುವ ಸಿಗ್ನಲ್‌ಗ‌ಳು ಸದ್ಯ ಸ್ಮಾರ್ಟ್‌ ಸಿಟಿಯವರ ನಿಯಂತ್ರಣದಲ್ಲಿದ್ದು, ಅವುಗಳು ಕಾರ್ಯಾಚರಿಸುತ್ತಿಲ್ಲ. ಪೊಲೀಸ್‌ ಇಲಾಖೆಗೆ ಇನ್ನೂ ಹಸ್ತಾಂತರಿಸುವ ಪ್ರಕ್ರಿಯೆ ಇನ್ನೂ ಆಗಿಲ್ಲ. ಪ್ರಾಯೋಗಿಕ ಕಾರ್ಯಾಚರಣೆಗಳನ್ನು ಪರಿಶೀಲಿಸಿದ ಅನಂತರವೇ ಅವುಗಳನ್ನು ನಮ್ಮ ನಿಯಂತ್ರಣಕ್ಕೆ ಪಡೆದುಕೊಳ್ಳುತ್ತೇವೆ. ಪ್ರಸ್ತುತ ಯಾವೆಲ್ಲ ಜಂಕ್ಷನ್‌ಗಳಲ್ಲಿ ಕಾರ್ಯಚರಣೆ ಆಗುತ್ತಿದೆಯೋ ಅದು ಮಾತ್ರ ಸಂಚಾರ ಪೊಲೀಸ್‌ ವಿಭಾಗದ ನಿಯಂತ್ರಣದಲ್ಲಿದೆ.
– ದಿನೇಶ್‌ ಕುಮಾರ್‌ ಬಿ.ಪಿ. ಡಿಸಿಪಿ, ಸಂಚಾರ ಮತ್ತು ಅಪರಾಧ

-ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next