Advertisement

ಉಪ್ಪಿನಂಗಡಿ ಪ್ರಕರಣ: ಪಿಎಫ್‌ಐ , ಎಸ್‌ಡಿಪಿಐ ಪ್ರತಿಭಟನೆ

02:11 AM Dec 18, 2021 | Team Udayavani |

ಮಂಗಳೂರು: ಉಪ್ಪಿನಂಗಡಿಯ ಪೊಲೀಸ್‌ ಲಾಠಿ ಚಾರ್ಜ್‌ ಘಟನೆಯನ್ನು ಖಂಡಿಸಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಮತ್ತು ಎಸ್‌ಡಿಪಿಐ ಸಂಘಟನೆಗಳ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

Advertisement

ಎಸ್‌ಪಿ ಕಚೇರಿ ಚಲೋ ನಡೆಸಲು ಸಂಘಟನೆಗಳು ಉದ್ದೇಶಿಸಿದ್ದರೂ ಅದಕ್ಕೆ ಅವಕಾಶ ನೀಡಲಿಲ್ಲ. ಬದಲಾಗಿ ತಾಲೂಕು ಕಚೇರಿ ಎದುರು ಪ್ರತಿಭಟನೆಗೆ ಮಾತ್ರ ನಗರ ಪೊಲೀಸ್‌ ಆಯುಕ್ತರು ಅನುಮತಿ ನೀಡಿದರು. ಆದರೆ ಸಂಘಟನೆಗಳ ಕಾರ್ಯಕರ್ತರು ಹಂಪನಕಟ್ಟೆ ಸಿಗ್ನಲ್‌ ಜಂಕ್ಷನ್‌ ಬಳಿಯಿಂದ ಮೆರವಣಿಗೆ ಯಲ್ಲಿ ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಾ ಕ್ಲಾಕ್‌ಟವರ್‌ ಜಂಕ್ಷನ್‌ ದಾಟಿ ಮುಂದೆ ಸಾಗಿದಾಗ ಪೊಲೀಸರು ಬ್ಯಾರಿಕೇಡ್‌ ಹಾಕಿ ತಡೆದರು.

ಪ್ರತಿಭಟನ ನಿರತ ಮುಖಂಡರ ಜತೆ ದಕ್ಷಿಣ ಉಪ ವಿಭಾಗದ ಎಸಿಪಿ ಪಿ.ಎ. ಹೆಗಡೆ ಮಾತುಕತೆ ನಡೆಸಿ ಎಸ್‌ಪಿ ಕಚೇರಿ ಚಲೋಗೆ ಅವಕಾಶ ಇಲ್ಲ ಎಂದು ತಿಳಿಸಿದರು. ಸಂಘಟನೆಯ ಮುಖಂಡ ಎ.ಕೆ. ಅಶ್ರಫ್‌ ಮತ್ತಿತರರು ಅವಕಾಶಕ್ಕೆ ಆಗ್ರಹಿಸಿ ಅಂಡರ್‌ಪಾಸ್‌ ಬಳಿಯ ಇನ್ನೊಂದು ಬ್ಯಾರಿಕೇಡ್‌ವರೆಗೆ ಸಾಗಿದರು. ಮುಂದೆ ಸಾಗಲು ಅನುಮತಿ ನಿರಾಕರಿಸಿದ್ದರಿಂದ ಅಲ್ಲೇ ಪ್ರತಿಭಟನ ಸಭೆ ನಡೆಸಿದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ಎಸ್‌ಡಿಪಿಐ ಮುಖಂಡ ಶಾಫಿ ಬೆಳ್ಳಾರೆ ಮತ್ತು ಪಿಎಫ್‌ಐ ರಾಜ್ಯ ಉಪಾಧ್ಯಕ್ಷ ಆಯೂಬ್‌ ಅಗ್ನಾಡಿ ಮಾತನಾಡಿದರು.

ಪೊಲೀಸರು ಪ್ರಕರಣಗಳನ್ನು ನಿಭಾಯಿಸುವಾಗ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಶಾಫಿ ಬೆಳ್ಳಾರೆ ಆರೋಪಿಸಿದರು.

Advertisement

ಆಯೂಬ್‌ ಅಗ್ನಾಡಿ ಮಾತನಾಡಿ, ಲಾಠಿ ಚಾರ್ಜ್‌ ನಡೆಸಿದ ಅಧಿಕಾರಿ ಮತ್ತು ಸಿಬಂದಿಯನ್ನು ಅಮಾನತು ಮಾಡಬೇಕು, ಪ್ರತಿಭಟನಕಾರರ ವಿರುದ್ಧ ದಾಖಲಿಸಿದ ಕೇಸು ಹಿಂಪಡೆ ಯಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ಎಸ್ಪಿ ಹೃಷಿಕೇಶ್‌ ಭಗವಾನ್‌ ಸೋನಾವಣೆ ಅಹವಾಲು ಸ್ವೀಕರಿಸಿದರು. ಪತ್ರಕರ್ತರ ಜತೆ ಮಾತನಾಡಿ, 3 ಎಫ್ಐಆರ್‌ ದಾಖಲಿಸಲಾಗಿದ್ದು, 10 ಮಂದಿಯನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಗುರುತಿಸಲಾಗಿದೆ. ಪ್ರಕರಣದ ಸಮಗ್ರ ತನಿಖೆ ನಡೆಸಿ ಸಾಕ್ಷ್ಯಾಧಾರಗಳೊಂದಿಗೆ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿ ತಿಳಿಸಿದರು.

ಇದನ್ನೂ ಓದಿ:ನೆರೆ ಪರಿಹಾರಕ್ಕೆ ಕೇಂದ್ರದಿಂದ ಹೆಚ್ಚು ಹಣ ಬಿಡುಗಡೆ ಮಾಡಿಸಿ : ಎಸ್ ಆರ್ ಪಾಟೀಲ್ ಆಗ್ರಹ

ಉಪ್ಪಿನಂಗಡಿ ಠಾಣೆಯ ಎದುರು ಪ್ರತಿಭಟನೆ ನಡೆಸು ತ್ತಿದ್ದವರನ್ನು ಅಲ್ಲಿಂದ ಚದುರುವಂತೆ ಹಲವು ಬಾರಿ ಮನವಿ ಮಾಡಲಾಗಿತ್ತು. ಸ್ಪಂದಿಸದಿದ್ದಾಗ ಲಾಠಿ ಚಾರ್ಜ್‌ ಮಾಡುವುದು ಅನಿವಾರ್ಯವಾಯಿತು ಎಂದರು.

ಉಪ್ಪಿನಂಗಡಿಯಲ್ಲಿ ಸೆ. 144 ಅನ್ವಯ ನಿರ್ಬಂಧಕಾಜ್ಞೆ ಮುಕ್ತಾಯವಾಗಿದ್ದು, ಮುಂದೆ ಪರಿಸ್ಥಿತಿ ಆಧರಿಸಿ ತೀರ್ಮಾನಿಸಲಾಗುವುದು ಎಂದರು.

ಆಯುಕ್ತ ಎನ್‌. ಶಶಿಕುಮಾರ್‌, ಡಿಸಿಪಿಗಳಾದ ಹರಿರಾಂ ಶಂಕರ್‌, ದಿನೇಶ್‌ ಕುಮಾರ್‌, ಎಸಿಪಿ ರಂಜಿತ್‌ ಬಂಡಾರು ಬಂದೋಬಸ್ತ್ ಕೈಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next