Advertisement

ಸಂಶೋಧನ ಕಾರ್ಯಕ್ಕೆ ಅನುದಾನದ ಹೊಡೆತ; ಮಂಗಳೂರು ವಿ.ವಿ. ಅಧ್ಯಯನ ಕೇಂದ್ರ, ಪೀಠ

12:38 AM Oct 17, 2022 | Team Udayavani |

ಉಡುಪಿ: ಮಂಗಳೂರು ವಿಶ್ವವಿದ್ಯಾ ನಿಲಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಮೀಸಲಿರುವ ವಿಭಾಗ ಗಳನ್ನು ಹೊರತುಪಡಿಸಿ ವಿವಿಧ ಕ್ಷೇತ್ರಗಳ ಬಗ್ಗೆ ಉನ್ನತ ಅಧ್ಯಯನ, ಸ್ಥಳೀಯ ವಿಷಯವಾಗಿ ವಿಶೇಷ ಅಧ್ಯಯನ ಅಥವಾ ಸಂಶೋಧನೆಗೆ ಪೂರಕವಾಗುವಂತೆ ಕೆಲವು ಸಂಶೋಧನ ಪೀಠ, ಅಧ್ಯಯನ ಕೇಂದ್ರಗಳನ್ನು ಆರಂಭಿಸಲಾಗಿದೆ.

Advertisement

ಅನುದಾನದ ಕೊರತೆ ಅಥವಾ ಮೂಲ ಅನುದಾನದ ಬಡ್ಡಿ ಮೊತ್ತದಲ್ಲಿ ಪೂರ್ಣ ಪ್ರಮಾಣದಲ್ಲಿ ಉದ್ದೇಶ ಪೂರೈಸಲಾಗದೆ ಬಹುತೇಕ ಕೇಂದ್ರ, ಪೀಠಗಳು ಸೊರಗುತ್ತಿವೆ.

ಅಧ್ಯಯನ ಪೀಠ ಅಥವಾ ಅಧ್ಯಯನ ಕೇಂದ್ರ ಸ್ಥಾಪನೆಗೆ ಸರಕಾರದಿಂದ ಅನುದಾನ ಬರುತ್ತದೆ. ವಿ.ವಿ.ಯಲ್ಲಿ 9 ಅಧ್ಯಯನ ಪೀಠಗಳನ್ನು ಸರಕಾರದ ಅನುದಾನ ಇಲ್ಲದೆ ನಡೆಸ ಲಾಗುತ್ತಿದೆ. ಇತ್ತೀಚೆಗಿನ ವರ್ಷಗಳಲ್ಲಿ ಎಲ್ಲ ವಿ.ವಿ. ಗಳಲ್ಲೂ ಅಧ್ಯಯನ ಕೇಂದ್ರ, ಅಧ್ಯ ಯನ ಪೀಠಗಳು ಬಾಹ್ಯ, ಆಂತರಿಕ ಒತ್ತಡ ದಿಂದಲೇ ಆರಂಭವಾಗುತ್ತಿವೆ.

ಆದರೆ ಇದಕ್ಕೆ ಸರಕಾರದಿಂದ ಅವಶ್ಯ ಪ್ರಮಾಣದಷ್ಟು ಅನುದಾನ ಬರುತ್ತಿಲ್ಲ. ಕುಂದಗನ್ನಡ ಹಾಗೂ ಅರೆಭಾಷೆ ಅಧ್ಯಯನ ಪೀಠದ ಬೇಡಿಕೆಯೂ ಮುಂದಿದೆ.

ಅಧ್ಯಯನ ಕೇಂದ್ರ ಮತ್ತು ಪೀಠ
ಅಧ್ಯಯನ ಕೇಂದ್ರದಲ್ಲಿ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಉನ್ನತ ಸಂಶೋಧನೆಗಳು ನಡೆಯುತ್ತವೆ. ಸಂಶೋಧನ ಅಭ್ಯರ್ಥಿಗಳು ಹಾಗೂ ಪ್ರಾಧ್ಯಾಪಕರು, ಸಹ, ಸಹಾಯಕ ಪ್ರಾಧ್ಯಾಪಕರು, ಸಿಬಂದಿ ಹೀಗೆ ದೊಡ್ಡ ವ್ಯವಸ್ಥೆ ಇರುತ್ತದೆ. ಗಾಂಧಿ, ನೆಹರೂ, ಯಕ್ಷಗಾನ ಅಧ್ಯಯನ ಕೇಂದ್ರಗಳಲ್ಲಿ ನಿರ್ದಿಷ್ಟ ಚಿಂತನೆಗಳ ಮೇಲೆ ಸಂಶೋಧನೆಗಳು ನಡೆಯುತ್ತಿರುತ್ತವೆ. ಈ ಕೇಂದ್ರದ ಆರಂಭಕ್ಕೆ ಸರಕಾರದ ಅನುದಾನವೂ ಬಂದಿರುತ್ತದೆ. ಯುಜಿಸಿಯಿಂದಲೂ ಅನುದಾನ ಸಿಗುತ್ತದೆ.

Advertisement

ಪೀಠಗಳ ಸ್ಥಾಪನೆ ಸರಕಾರದ ಘೋಷಣೆಯಿಂದಾದರೆ ಅನುದಾನ ಬರುತ್ತದೆ. ವಿ.ವಿ. ಸ್ಥಾಪಿಸಿದ್ದರೆ ವಿ.ವಿ.ಯೇ ನಿರ್ದಿಷ್ಟ ಅನುದಾನ ಮೀಸ ಲಿಡಬೇಕಾಗುತ್ತದೆ. ಮಂಗಳೂರು ವಿ.ವಿ. ಯ ಬಹುತೇಕ ಅಧ್ಯಯನ ಪೀಠಗಳಿ ವಿ.ವಿ.ಯೇ ಅನುದಾನ ಮೀಸಲಿಟ್ಟಿದೆ.

ಕಾರ್ಯಕ್ರಮಕ್ಕೆ ಸೀಮಿತ
ಅಧ್ಯಯನ ಕೇಂದ್ರಗಳಲ್ಲಿ ಸಂಶೋಧನ ಚಟುವಟಿಕೆ ನಡೆಯುತ್ತಿದೆ. ಅಧ್ಯಯನ ಪೀಠಗಳಲ್ಲಿ ಸಂಶೋಧನೆಯ ಜತೆಗೆ ಕ್ಷೇತ್ರ ಪರಿವೀಕ್ಷಣೆ ಇತ್ಯಾದಿ ಚಟುವಟಿಕೆಗಳೂ ನಡೆಯಬೇಕಿದ್ದು, ಅನುದಾನದ ಕೊರತೆಯಿಂದ ಅದು ಕಡಿಮೆಯಾಗುತ್ತಿದೆ. ಸದ್ಯ ಲಭ್ಯವಿರುವ ಅನುದಾನದಲ್ಲಿ ವಾರ್ಷಿಕ ಒಂದು ಅಥವಾ ಎರಡು ಕಾರ್ಯಕ್ರಮಗಳನ್ನಷ್ಟೇ ಆಯೋಜಿಸಬಹುದು. ಅಧ್ಯಯನ ಕೇಂದ್ರಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲು ಕನಿಷ್ಠ 2 ಕೋ.ರೂ. ಅಗತ್ಯವಿದೆ. ಹಾಗೆಯೇ ಅಧ್ಯಯನ ಪೀಠಗಳಿಗೆ ಕನಿಷ್ಠ 25 ಲಕ್ಷ ರೂ.ಗಳಿಗಿಂತಲೂ ಹೆಚ್ಚು ಹಣ ಬೇಕಾಗುತ್ತದೆ. ಆಗ ನಿರ್ವಹಣೆಯ ಜತೆಗೆ ಸಂಶೋಧನ ಕಾರ್ಯ ನಡೆಸಲು ಸಾಧ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಅನುದಾನ ಎಷ್ಟಿದೆ?
ಇತ್ತೀಚಿನ ವರ್ಷಗಳಲ್ಲಿ ಆರಂಭವಾದ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠಕ್ಕೆ ಯಾವುದೇ ಅನುದಾನ ಲಭಿಸಿಲ್ಲ. ತುಳುಪೀಠದಲ್ಲಿ 20 ಲಕ್ಷ ರೂ., ಶಿವರಾಮ ಕಾರಂತ ಪೀಠದಲ್ಲಿ 6 ಲಕ್ಷ, ಕನಕದಾಸ ಪೀಠದಲ್ಲಿ 10 ಲಕ್ಷ, ಕನಕದಾಸ ಸಂಶೋಧನ ಕೇಂದ್ರ, ರತ್ನಾಕರವರ್ಣಿ ಅಧ್ಯಯನ ಪೀಠ, ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದಲ್ಲಿ ತಲಾ 1 ಕೋ.ರೂ., ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠದಲ್ಲಿ 32.50 ಲಕ್ಷ, ಅಂಬಿಗರ ಚೌಡಯ್ಯ ಪೀಠದಲ್ಲಿ 80 ಲಕ್ಷ, ಕೊಂಕಣಿ ಅಧ್ಯಯನ ಪೀಠದಲ್ಲಿ 2 ಕೋಟಿ, ನೆಹರೂ ಚಿಂತನ ಕೇಂದ್ರದಲ್ಲಿ 3 ಕೋಟಿ, ಬ್ಯಾಂಕ್‌ ಆಫ್ ಬರೋಡ ಪೀಠದಲ್ಲಿ 1.50 ಲಕ್ಷ, ಯೂನಿಯನ್‌ ಬ್ಯಾಂಕ್‌ ಪೀಠದಲ್ಲಿ 14 ಲಕ್ಷ, ಎಂ.ವಿ. ಶಾಸ್ತ್ರೀ ಪೀಠದಲ್ಲಿ 10 ಲಕ್ಷ, ಕ್ರಿಶ್ಚಿಯಾನಿಟಿ ಪೀಠದಲ್ಲಿ 41 ಲಕ್ಷ, ಡಾ| ಪಿ. ದಯಾನಂದ ಪೈ, ಪಿ. ಸತೀಶ್‌ ಪೈ ಯಕ್ಷಗಾನ ಅಧ್ಯ ಯನ ಕೇಂದ್ರದಲ್ಲಿ 1 ಕೋ.ರೂ. ಇದೆ. ರಾಣಿ ಅಬ್ಬಕ್ಕ ಅಧ್ಯಯನ ಪೀಠಕ್ಕೆ 1 ಕೋ.ರೂ. ಪ್ರಸ್ತಾವನೆ ಸರಕಾರಕ್ಕೆ ಕಳುಹಿಸಲಾಗಿದೆ.

ಅಧ್ಯಯನ ಕೇಂದ್ರ ಮತ್ತು ಸ್ಥಾಪನೆ ವರ್ಷ
– ಕನಕದಾಸ ಸಂಶೋಧನ ಕೇಂದ್ರ-2005
– ಮಹಿಳಾ ಅಧ್ಯಯನ ಕೇಂದ್ರ- 2005
– ಡಾ| ಬಿ.ಆರ್‌. ಅಂಬೇಡ್ಕರ್‌ ಅಧ್ಯಯನ ಕೇಂದ್ರ-2005
-ಗಾಂಧಿ ಅಧ್ಯಯನ ಕೇಂದ್ರ-2005
– ಯಕ್ಷಗಾನ ಅಧ್ಯಯನ ಕೇಂದ್ರ-2009
– ಬೌದ್ಧ ಅಧ್ಯಯನ ಕೇಂದ್ರ-2010
– ನೆಹರೂ ಚಿಂತನ ಕೇಂದ್ರ-2012

ಅಧ್ಯಯನ ಪೀಠ ಮತ್ತು ಸ್ಥಾಪನೆ ವರ್ಷ
-ಧರ್ಮನಿಧಿ ಯೋಗ ಪೀಠ-1983
-ಆಯುರ್ವೇದ ಭೂಷಣ ಎಂ.ವಿ. ಶಾಸ್ತ್ರಿ ಸ್ಮಾರಕ ಪೀಠ-1984
– ಮಂಗಳೂರು ಧರ್ಮಪ್ರಾಂತದ ಕ್ರಿಶ್ಚಿಯಾನಿಟಿ ಪೀಠ-1986
– ಬ್ಯಾಂಕ್‌ ಆಫ್ ಬರೋಡ (ವಿಜಯ ಬ್ಯಾಂಕ್‌) ಪೀಠ-1988
– ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ-1991
– ಯೂನಿಯನ್‌ ಬ್ಯಾಂಕ್‌ (ಕಾರ್ಪೊರೇಶನ್‌ ಬ್ಯಾಂಕ್‌) ಪೀಠ-1992
– ಡಾ| ಶಿವರಾಮ ಕಾರಂತ ಪೀಠ-1993
– ಕೆನರಾ ಬ್ಯಾಂಕ್‌ ಪೀಠ (ಗ್ರಾಮೀಣ ಬ್ಯಾಂಕಿಂಗ್‌ ಮತ್ತು ವ್ಯವಸ್ಥಾಪನ ಪೀಠ)-1995
-ಎನ್‌.ಜಿ. ಪಾವಂಜೆ ಲಲಿತಕಲಾ ಪೀಠ-1998
– ಕನಕದಾಸ ಪೀಠ-2003
– ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ-2008
– ಅಂಬಿಗರ ಚೌಡಯ್ಯ ಅಧ್ಯಯನ ಪೀಠ-2008
– ಡಾ| ದಯಾನಂದ ಪೈ ಮತ್ತು ಪಿ. ಸತೀಶ್‌ ಪೈ ಯಕ್ಷಗಾನ ಅಧ್ಯಯನ ಪೀಠ-2009
– ಮಹಾಕವಿ ರತ್ನಾಕರ ವರ್ಣಿ ಅಧ್ಯಯನಪೀಠ-2014
-ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ-2015
– ರಾಣಿ ಅಬ್ಬಕ್ಕ ಅಧ್ಯಯನ ಪೀಠ-2015 -ಕೊಂಕಣ ಅಧ್ಯಯನ ಪೀಠ-2016
– ಬ್ಯಾರಿ ಅಧ್ಯಯನ ಪೀಠ-2017
-ಸ್ವಾಮಿ ವಿವೇಕಾನಂದ ಅಧ್ಯಯನ ಪೀಠ-2021

ಅಧ್ಯಯನ ಪೀಠದಿಂದ ವಾರ್ಷಿಕ ನಿರ್ದಿಷ್ಟ ವಿಷಯದ ಕೆಲವು ಕಾರ್ಯಕ್ರಮಗಳನ್ನು ನಡೆಸಬಹುದೇ ವಿನಾ ಸಂಶೋಧನ ಕಾರ್ಯಕ್ಕೆ ಬೇಕಾ ದಷ್ಟು ಅನುದಾನ ಲಭ್ಯವಿಲ್ಲ. ಸರಕಾರದ ಅನುದಾನ ಹಾಗೂ ವಿ.ವಿ. ನೀಡಿರುವ ಅನುದಾನದಲ್ಲಿ ಸಂಶೋಧನೆಗಳು ನಡೆಯುತ್ತವೆ.
– ಡಾ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ,
ಕುಲಪತಿ. ಮಂ.ವಿ.ವಿ.

- ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next