Advertisement

Mangaluru university ಆಳ್ವಾಸ್‌, ಪೂರ್ಣಪ್ರಜ್ಞ, ವಿಸಿಗೆ ಸ್ವಾಯತ್ತ ಸ್ಥಾನಮಾನ

12:50 AM Oct 05, 2023 | Team Udayavani |

ಮಂಗಳೂರು: ಮೂಡು ಬಿದಿರೆಯ ಆಳ್ವಾಸ್‌ ಕಾಲೇಜು, ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜುಗಳಿಗೆ ಸ್ವಾಯತ್ತ ಸ್ಥಾನಮಾನವನ್ನು ನೀಡಲು ಮಂಗಳೂರು ವಿಶ್ವವಿದ್ಯಾನಿಲಯವು ಒಪ್ಪಿಗೆ ನೀಡಿದ್ದು, ವರದಿಯನ್ನು ಸರಕಾರಕ್ಕೆ ಮಂಡಿಸಲು ಅನುಮೋದನೆ ದೊರೆತಿದೆ.

Advertisement

ಬುಧವಾರ ನಡೆದ ಮಂಗಳೂರು ವಿ.ವಿ.ಯ ಶೈಕ್ಷಣಿಕ ಮಂಡಳಿಯ 2023-24ನೇ ಸಾಲಿನ ದ್ವಿತೀಯ ಸಾಮಾನ್ಯ ಸಭೆಯಲ್ಲಿ ಅವಿಭಜಿತ ಜಿಲ್ಲೆಯ 3 ಕಾಲೇಜುಗಳಿಗೆ ಸ್ವಾಯತ್ತ ಸ್ಥಾನಮಾನ ನೀಡುವ ಮಹತ್ವದ ನಿರ್ಧಾರವನ್ನು ಪ್ರಕಟಿಸಲಾಯಿತು.

ಕುಲಪತಿ (ಪ್ರಭಾರ) ಪ್ರೊ| ಜಯರಾಜ್‌ ಅಮೀನ್‌ ಮಾತನಾಡಿ, ಮಂಗಳೂರು ವಿ.ವಿ. ಸಂಯೋಜಿತ 3 ಕಾಲೇಜುಗಳಿಗೆ ಸ್ವಾಯತ್ತ ಸ್ಥಾನಮಾನಕ್ಕೆ ಯುಜಿಸಿಯಿಂದ ಅನುಮತಿ ದೊರೆತಿದೆ. ಮುಂದುವರಿದ ಭಾಗವಾಗಿ ವಿ.ವಿ.ಯಿಂದ ರಚಿಸಲಾದ ಸ್ಥಾಯೀ ಸಮಿತಿಯು 3 ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸ್ವಾಯತ್ತ ಸ್ಥಾನಮಾನದ ಬಗ್ಗೆ ಪೂರಕ ವರದಿಯನ್ನೂ ನೀಡಿದೆ. ವರದಿಯನ್ನು ಸಿಂಡಿಕೇಟ್‌ ಸದಸ್ಯರಿಗೆ ರವಾನಿಸಲಾಗಿದ್ದು, ಇಬ್ಬರು ಸದಸ್ಯರಿಂದ ಮಾತ್ರ ವಿವರ ರಹಿತ ಆಕ್ಷೇಪಣೆ ಬಂದಿದೆ. ಉಳಿದ ಸದಸ್ಯರಿಂದ ಯಾವುದೇ ಅಭಿಪ್ರಾಯ ಬಾರದ ಹಿನ್ನೆಲೆಯಲ್ಲಿ ವರದಿ ಅನುಮೋದಿಸಿ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ. ಅ. 12ರಂದು ಸಿಂಡಿಕೇಟ್‌ ಸಭೆಯಲ್ಲಿ ಇದನ್ನು ಮಂಡಿಸಲಾಗುತ್ತದೆ. ಬಳಿಕ ಸರಕಾರಕ್ಕೆ ವರದಿ ಕಳುಹಿಸಿ ಅನುಮತಿ ದೊರೆಯಬೇಕಿದೆ ಎಂದು ಹೇಳಿದರು.

ನಕಲು ಮಾಡಿದರೆ ದಂಡ
ಪರೀಕ್ಷಾ ಅವ್ಯವಹಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿ.ವಿ.ಯ ಸಮಿತಿ ರಚಿಸಿರುವ ಪರಿಷ್ಕೃತ ನಿರ್ದೇಶನಗಳಿಗೆ ಅನುಮೋದನೆ ನೀಡಲಾಯಿತು. ಈಗ ಇರುವ ನಿಯಮಾವಳಿ ಜತೆಗೆ ಇನ್ನು ಮುಂದೆ ಪರೀಕ್ಷೆಯಲ್ಲಿ ನಕಲು ಮಾಡಿದರೆ ಅಂತಹ ವಿದ್ಯಾರ್ಥಿಗೆ ದಂಡ ವಿಧಿಸಲಾಗುತ್ತದೆ.

ಪಿಜಿಗೆ ಕೇಂದ್ರೀಕೃತ ಪ್ರವೇಶ
ಪಿಜಿಯಲ್ಲಿ ಯೋಗ ವಿಜ್ಞಾನ, ಗಣಿತಶಾಸ್ತ್ರ ಹಾಗೂ ಎಲೆಕ್ಟ್ರಾನಿಕ್ಸ್‌ ಕಾರ್ಯಕ್ರಮಗಳ ವಿದ್ಯಾರ್ಥಿ ಪ್ರವೇಶಾತಿ ಪ್ರಕ್ರಿಯೆಯನ್ನು ಕೇಂದ್ರೀಕೃತ ಪ್ರವೇಶಾತಿ ಮೂಲಕ ಕೈಗೊಳ್ಳುವ ಶಿಫಾರಸ್ಸಿನ ಬಗ್ಗೆ ಪರಿಶೀಲಿಸಲು ಹೊಸ ಕಮಿಟಿ ರಚಿಸಲು ತೀರ್ಮಾನಿಸಲಾಯಿತು. ಜತೆಗೆ ಉಳಿದ ನಿಕಾಯಯಗಳಡಿಯ ವಿಭಾಗಗಳಿಂದ ಪ್ರಸ್ತಾವನೆ ಸ್ವೀಕರಿಸಲು ನಿರ್ಧರಿಸಲಾಯಿತು.

Advertisement

ಕುಲಸಚಿವ (ಆಡಳಿತ) ರಾಜು ಕೆ., ಕುಲಸಚಿವ (ಪರೀಕ್ಷಾಂಗ) ರಾಜು ಕೃಷ್ಣ ಚಲ್ಲಣ್ಣನವರ್‌, ಹಣಕಾಸು ಅಧಿಕಾರಿ ಡಾ| ಸಂಗಪ್ಪ ಉಪಸ್ಥಿತರಿದ್ದರು.

ವಿದ್ಯಾರ್ಥಿ ಸ್ನೇಹಿ ಪರಿಕಲ್ಪನೆಗೆ ಸಲಹೆ
ಮಂಗಳೂರು ವಿ.ವಿ. ಶೈಕ್ಷಣಿಕ ಮಂಡಳಿಯ ನೂತನ ಸದಸ್ಯರಾಗಿ ಆಯ್ಕೆ ಯಾಗಿರುವ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಹಾಗೂ ಮಡಿಕೇರಿ ಶಾಸಕ ಡಾ| ಮಂತರ್‌ ಗೌಡ ಸಭೆಯಲ್ಲಿ ಭಾಗವಹಿಸಿದ್ದರು.

ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ, ಪದವಿ ಶಿಕ್ಷಣದಲ್ಲಿ ಪಠ್ಯದ ಜತೆಗೆ ಮಕ್ಕಳಿಗೆ ಸ್ಕಿಲ್‌ ಡೆವಲಪ್‌ಮೆಂಟ್‌ ಬಗ್ಗೆಯೂ ಆದ್ಯತೆ ನೀಡುವತ್ತ ವಿ.ವಿ. ಕ್ರಮ ಕೈಗೊಳ್ಳಬೇಕು. ಈ ಮೂಲಕ ಮಕ್ಕಳ ಭವಿಷ್ಯಕ್ಕೆ ಆಧಾರವಾಗಬೇಕು ಎಂದರು. ಶಾಸಕ ಡಾ| ಮಂತರ್‌ ಗೌಡ ಮಾತನಾಡಿ, ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ಕೋರ್ಸ್‌ ಕಲಿಯಲು ಬೇಕಾಗುವಂತಹ ವಾತಾವರಣವನ್ನು ಕಲ್ಪಿಸಬೇಕು ಎಂದರು.

ಕುಲಪತಿ ಪ್ರೊ| ಜಯರಾಜ್‌ ಅಮೀನ್‌ ಮಾತನಾಡಿ, ಸರಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರ ಕೊರತೆ ಇದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಶಾಸಕರು ಸರಕಾರದ ಗಮನಸೆಳೆಯಬೇಕು ಎಂದರು. ಶಾಸಕರು ಪರಿಶೀಲಿಸುವ ಭರವಸೆ ನೀಡಿದರು.

-ಅ. 12ರಿಂದ ಸ್ನಾತಕೋತ್ತರ ಪದವಿ ತರಗತಿ ಆರಂಭ
-ಸ್ನಾತಕೋತ್ತರ ವಿಭಾಗದ ವಿವಿಧ ವಿಷಯಗಳ ಪರಿಷ್ಕೃತ ಪಠ್ಯಕ್ರಮಕ್ಕೆ ಅಸ್ತು
-ಗಣಿತಶಾಸ್ತ್ರ ಪಿಎಚ್‌ಡಿ ಕೋರ್ಸ್‌ವರ್ಕ್‌ನ ಪರೀಕ್ಷಾ ಕಾರ್ಯಯೋಜನೆ ಸರಿಪಡಿಸಲು ಒಪ್ಪಿಗೆ
-ಎನ್‌ಇಪಿ ಪದವಿ/ಕೋರ್‌ ಕೋರ್ಸ್‌ಗಳ 5-6ನೇ ಸೆಮಿಸ್ಟರ್‌/ಕೌಶಲವರ್ಧಕ ಕೋರ್ಸ್‌ ಪಠ್ಯಕ್ರಮಕ್ಕೆ ಅನುಮೋದನೆ

ವಿದೇಶಿ ವಿದ್ಯಾರ್ಥಿಗಳು
ಮಂಗಳೂರು ವಿ.ವಿ.ಯಲ್ಲಿ ಈ ಬಾರಿಯ ವಿವಿಧ ಸ್ನಾತಕ/ಸ್ನಾತಕೋತ್ತರ/ಪಿಎಚ್‌ಡಿ ಕಾರ್ಯಕ್ರಮದ ಪ್ರವೇಶಾತಿಗೆ 33 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಉಗಾಂಡ, ಥೈಲ್ಯಾಂಡ್‌, ಬಾಂಗ್ಲಾದೇಶ, ಶ್ರೀಲಂಕಾ, ಯೆಮನ್‌, ನಮೀಬಿಯ ದೇಶದವರಿದ್ದಾರೆ. ವಿ.ವಿ.ಯಲ್ಲಿ ಒಟ್ಟು 130 ವಿದೇಶಿ ವಿದ್ಯಾರ್ಥಿಗಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next