ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದಲ್ಲಿ 2025ರ ಜುಬಿಲಿ ವರ್ಷಕ್ಕೆ ಪವಿತ್ರ ಕುಟುಂಬದ ಮಹೋತ್ಸವದ ದಿನವಾದ ರವಿವಾರದಂದು ನಗರದ ರೊಸಾರಿಯೋ ಕೆಥೆಡ್ರಲ್‌ನಲ್ಲಿ ಚಾಲನೆ ನೀಡಲಾಯಿತು.
ರೋಮ್‌ನಲ್ಲಿ ಪೋಪ್ ಫ್ರಾನ್ಸಿಸ್ ಅವರು ಡಿ. 24ರಂದು ಜುಬಿಲಿ-2025 ವರ್ಷವನ್ನು ಉದ್ಘಾಟಿಸಿದ್ದು, 2025 ಅನ್ನು ಭರವಸೆಯ ವರ್ಷವೆಂದು ಘೋಷಿಸಿದ್ದರು.
ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದಲ್ಲಿ ಬಿಷಪ್ ಅ| ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಈ ಮಹತ್ವದ ವರ್ಷವನ್ನು ಉದ್ಘಾಟಿಸಿದರು. ಬಳಿಕ ಪವಿತ್ರ ಶಿಲುಬೆಯ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭ ಧರ್ಮಗುರುಗಳು, ಧರ್ಮ ಭಗಿನಿಯರು ಮತ್ತು ಭಕ್ತರೊಂದಿಗೆ ರೊಸಾರಿಯೊ ಕೆಥೆಡ್ರಲ್‌ಗೆ ಮೆರವಣಿಗೆ ನಡೆಯಿತು.
ಅನಂತರ ಜ್ಞಾನದೀಕ್ಷೆಯ (ಬ್ಯಾಪ್ಟಿಸಂ) ಕೊಳವನ್ನು ಆಶೀರ್ವದಿಸಿ, ಜ್ಞಾನದೀಕ್ಷೆಯ ಭರವಸೆಗಳನ್ನು ನವೀಕರಿಸಿದರು.
ಧರ್ಮಪ್ರಾಂತ್ಯದ ಶ್ರೇಷ್ಠ ಗುರು ವಂ| ಮ್ಯಾಕ್ಸಿಮ್ ನೊರೊನ್ಹಾ, ವಂ| ನವೀನ್ ಪಿಂಟೊ, ವಂ| ಬೋನವೆಂಚರ್ ನಜರೆತ್, ಫಾ| ಜೆ.ಬಿ. ಕ್ರಾಸ್ತಾ, ಫಾ| ವಾಲ್ಟರ್ ಡಿ’ಸೋಜಾ, ಮಂಗಳೂರಿನ ಮಂಗಳ ಜ್ಯೋತಿಯ ಸಹಾಯಕ ನಿರ್ದೇಶಕ ಡಾ| ವಿನ್ಸೆಂಟ್ ಸಿಕ್ವೇರಾ, ರೊಸಾರಿಯೊ ಕೆಥೆಡ್ರಲ್‌ನ ಧರ್ಮಗುರು ವಂ| ಆಲ್ಫೆ†ಡ್ ಪಿಂಟೊ ಮೊದಲಾದವರು ಉಪಸ್ಥಿತರಿದ್ದರು.
ಪುಣ್ಯಕ್ಷೇತ್ರಗಳ ಭೇಟಿಗೆ ಸೂಚನೆ
2025ರ ಜುಬಿಲಿ ವರ್ಷವನ್ನು ಕ್ರೈಸ್ತ ನಿಷ್ಠಾವಂತರಿಗೆ ಆಧ್ಯಾತ್ಮಿಕ ನವೀಕರಣ, ಸಮನ್ವಯ ಮತ್ತು ಪುಣ್ಯಕ್ಷೇತ್ರಗಳ ವಿಶೇಷ ವರ್ಷವನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ರೊಸಾರಿಯೊ ಕೆಥೆಡ್ರಲ್ ಮಂಗಳೂರು, ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬೋಂದೆಲ್, ಪೊಂಪೈ ಮಾತೆ ಪುಣ್ಯಕ್ಷೇತ್ರ ಉರ್ವ, ಸಂತ ಅಂತೋನಿ ಆಶ್ರಮ ಜಪ್ಪು, ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರ ಮುಡಿಪು, ಸಂತ ಜೂಡ್ ಪುಣ್ಯಕ್ಷೇತ್ರ ಪಕ್ಷಿಕೆರೆ, ಬಾಲಯೇಸು ಇಗರ್ಜಿ ಬಂಟ್ವಾಳ ಹಾಗೂ ಶೋಕಮಾತಾ ಪುಣ್ಯಕ್ಷೇತ್ರ ಬೇಳ ಕಾಸರಗೋಡು ಇಲ್ಲಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವಂತೆ ಸೂಚಿಸಲಾಯಿತು.
ಉಡುಪಿ: ಏಸು ಕ್ರಿಸ್ತರು ಹುಟ್ಟಿ 2025 ವರ್ಷಗಳಾಗಿದ್ದು ಅದನ್ನು ಸಾಮಾನ್ಯ ಜುಬಿಲಿ ವರ್ಷವನ್ನಾಗಿ ಆಚರಿಸಲಾಗುತ್ತಿದೆ. ಉಡುಪಿ ಧರ್ಮಪ್ರಾಂತದಲ್ಲಿ ರವಿವಾರ ಮಿಲಾಗ್ರಿಸ್ ಕೆಥೆಡ್ರಲ್‌ನ ಮುಖ್ಯ ದ್ವಾರವನ್ನು ತೆರೆದು ಉಡುಪಿ ಧರ್ಮಾಧ್ಯಕ್ಷರಾದ ರೆ| ಡಾ| ಜೆರಾಲ್ಡ… ಐಸಾಕ್ ಲೋಬೊ ಚಾಲನೆ ನೀಡಿದರು.
ಜುಬಿಲಿ ಎಂದರೆ ಪಂಚ “ಸ’ ಗಳ ಸುಮ ಧುರ ಸಮ್ಮಿಲನವಾಗಿದೆ. ಸ್ಮರಣೆ, ಸಂತಾಪ, ಸಂಧಾನ, ಸನ್ಮಾರ್ಗ ಮತ್ತು ಸಂಭ್ರಮ. ನಮ್ಮ ದೈನಂದಿನ ಜೀವನದಲ್ಲಿ ದೇವರ ಪ್ರೀತಿ ಯನ್ನು ಸ್ಮರಿಸುವುದರ ಮೂಲಕ ದೇವರು ಮತ್ತು ಸಮಾಜದೊಂದಿಗೆ ಸಂಧಾನ ಮತ್ತು ಸಾಮರಸ್ಯದ ಮೂಲಕ ಸನ್ಮಾರ್ಗದಲ್ಲಿ ಬದುಕ ಬೇಕೆಂಬುದು ಇದರ ಉದ್ದೇಶ ಎಂದರು.
ವರ್ಷವಿಡೀ ಧರ್ಮಪ್ರಾಂತ್ಯದ ಚರ್ಚ್ ಗಳ ಪ್ರತಿಯೊಂದು ಕುಟುಂಬಗಳಿಗೆ ಪವಿತ್ರ ಶಿಲುಬೆಯ ಮೆರವಣಿಗೆ ಜರಗಲಿದೆ ಎಂದು ಅವರು ಹೇಳಿದರು.
ಪವಿತ್ರ ಬಲಿಪೂಜೆಯಲ್ಲಿ ಉಡುಪಿ ಧರ್ಮ ಪ್ರಾಂತದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ರೆ| ಡಾ| ರೋಶನ್ ಡಿ’ಸೋಜಾ, ಅನುಗ್ರಹ ಪಾಲನ ಕೇಂದ್ರದ ನಿರ್ದೇಶಕ ರೆ| ವಿನ್ಸೆಂಟ್ ಕ್ರಾಸ್ತಾ, ಸಂಪದ ನಿರ್ದೇಶಕ ರೆ| ರೆಜಿನಾಲ್ಡ್ ಪಿಂಟೋ, ಧಾರ್ಮಿಕ ಆಯೋಗಳಗಳ ರೆ| ಸಿರಿಲ್ ಲೋಬೊ, ರೆ| ವಿಲ್ಸನ್ ಡಿ’ಸೋಜಾ, ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್ ಸಹಾಯಕ ಧರ್ಮಗುರು ರೆ| ಪ್ರದೀಪ್ ಕಾಡೋìಜಾ, ರೆ| ಡಾ| ಜೆನ್ಸಿಲ್ ಆಳ್ವ, ಅತಿಥಿ ಧರ್ಮಗುರುಗಳಾದ ರೆ| ರೋನ್ಸನ್ ಡಿ’ಸೋಜಾ, ರೆ| ಮನೋಜ್ ಫುರ್ಟಾಡೊ, ರೆ| ವಲೇರಿಯನ್ ಕ್ಯಾಸ್ತಲಿನೋ, ರೆ| ವಿನ್ಸೆಂಟ್ ಲೋಬೋ ಉಪಸ್ಥಿತರಿದ್ದರು.
ಜುಬಿಲಿ ವರ್ಷಕ್ಕೆ ಡಿ.24ರಂದು ವ್ಯಾಟಿಕನ್‌ನಲ್ಲಿ ಪೋಪ್ ಫ್ರಾನ್ಸಿಸ್ ಅವರು ಸೈಂಟ್ ಪೀಟರ್ ಬೆಸಿಲಿಕಾದ ಮುಖ್ಯ ದ್ವಾರ ತೆರೆಯುವ ಮೂಲಕ ಉದ್ಘಾಟಿಸಿದ್ದು, ಅದರ ದ್ಯೋತಕವಾಗಿ ವಿಶ್ವದ ಎಲ್ಲ ಕೆಥೋಲಿಕ್ ಧರ್ಮಪ್ರಾಂತ್ಯದಲ್ಲಿ ಡಿ.29ರಂದು ಆಯಾ ಕೆಥೆಡ್ರಲ್‌ಗಳ ಮುಖ್ಯ ದ್ವಾರವನ್ನು ತೆರೆದು ಚಾಲನೆ ನೀಡಲಾಯಿತು.