ಮಂಗಳೂರು: ಉದಯವಾಣಿ- ಮಲೈಕಾ ವಿಶ್ವಕಪ್ ಧಮಾಕ-2019 ಅದೃಷ್ಟಶಾಲಿ ವಿಜೇತರ ಬಹುಮಾನ ವಿತರಣೆ ಸಮಾರಂಭವು ನಗರದ ಕೊಡಿಯಾಲ್ ಬೈಲ್ ನ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣ ಶುಕ್ರವಾರದಂದು ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಐಡಿಯಲ್ ಐಸ್‌ಕ್ರೀಂ ಮಾಲಕರಾದ ಮುಕುಂದ್ ಕಾಮತ್ ಮಾತನಾಡುತ್ತಾ ಉದಯವಾಣಿ ಮತ್ತು ಮಲೈಕಾ ಸೇರಿಕೊಂಡು ಕ್ರಿಕೆಟ್ ಬಗ್ಗೆ ಜನರಲ್ಲಿ ಅಭಿರುಚಿ ಹೆಚ್ಚಿಸಲು ಪ್ರಯತ್ನ ಮಾಡಿದೆ. ಈ ಸ್ಪರ್ಧೆ ಏರ್ಪಡಿಸಿದ್ದು ಶ್ಲಾಘನೀಯ ಎಂದರು.
ಮಾಂಡ್ ಸೊಭಾಣ್ ಉಪಾಧ್ಯಕ್ಷ ಸ್ಟಾನಿ ಅಲ್ವಾರಿಸ್ ಮಾತನಾಡಿ ನನ್ನ ದಿನಚರಿ ಆರಂಭವಾಗುವುದು ಉದಯವಾಣಿಯಿಂದ. ಅದನ್ನು ಓದಿದರೆ ಸಮಾಧಾನ. ಇತ್ತೀಚೆಗೆ ಉದಯವಾಣಿ ಸಮಾಜಮುಖಿ ಕೆಲಸ ಮಾಡುತ್ತಿದೆ. ಅದನ್ನು ಇದೇ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಣಿಪಾಲ ಮೀಡಿಯಾ ನೆಟ್ ವರ್ಕ್ ಲಿ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೋದ್ ಕುಮಾರ್ ಮಾತನಾಡಿ ಕ್ರಿಕೆಟ್ ಜನರಿಗೆ ಉತ್ಸಾಹವಾಗಿದೆ. ಈ ಉತ್ಸಾಹವನ್ನು ಹೆಚ್ಚಿಸಲು ಉದಯವಾಣಿ ಮಲೈಕಾ ಜೊತೆ ಸೇರಿ ಬಹುಮಾನ ಯೋಜನೆಯನ್ನು ಹಮ್ಮಿಕೊಂಡಿತ್ತು. ಇದಕ್ಕೆ ನಿರೀಕ್ಷೆಗಿಂತಲೂ ಹೆಚ್ಚು ಸ್ಪಂದನೆ ವ್ಯಕ್ತವಾಗಿದ್ದು, ಅದಕ್ಕಾಗಿ ಎಲ್ಲ ಓದುಗರಿಗೂ, ವಿಜೇತರಿಗೂ ಅಭಿನಂದನೆಗಳು ಎಂದರು.
ಮಲೈಕಾ ಸಂಸ್ಥೆಯ ಆಪರೇಷನ್ಸ್ ಹೆಡ್ ರೀನಾ ಜೋಷ್ ಉಪಸ್ಥಿತರಿದ್ದರು.
ವಿಜೇತರ ಪರವಾಗಿ ಸುಬ್ರಹ್ಮಣ್ಯ ಎನ್ ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಉದಯವಾಣಿ’ ಮಂಗಳೂರು ಮಾರುಕಟ್ಟೆ ವಿಭಾಗ ಮುಖ್ಯಸ್ಥ ರಾಮಚಂದ್ರ ಮಿಜಾರ್ ಬಹುಮಾನಿತರ ಪಟ್ಟಿಯನ್ನು ವಾಚಿಸಿದರು.
ಉದಯವಾಣಿಯ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಸ್ವಾಗತಿಸಿದರು, ಮಾರುಕಟ್ಟೆ ವಿಭಾಗದ ಹಿರಿಯ ವ್ಯವಸ್ಥಾಪಕ ಸತೀಶ್ ಮಂಜೇಶ್ವರ ವಂದಿಸಿದರು. ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.