ಮಂಗಳೂರು: ಬಜಾಲ್‌ನ ಜೆ.ಎಂ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯಿಂದ 16 ಗ್ರಾಂ ತೂಕದ ಚಿನ್ನದ ಸರವನ್ನು ಸುಲಿಗೆ ಮಾಡಿದ್ದ ಆರೋಪಿಗಳನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 90,000 ರೂ. ಮೌಲ್ಯದ ಚಿನ್ನದ ಸರವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಮೂಲತಃ ಕಾಸರಗೋಡು ಚೆರ್ಕಳದವನಾಗಿದ್ದು ಬಂಟ್ವಾಳ ಬಿ.ಮೂಡ ಗ್ರಾಮದಲ್ಲಿ ವಾಸವಾಗಿರುವ ಮೊಹಮ್ಮದ್ ಅಲಿ ಆಲಿಯಾಸ್ ಅಶ್ರು (32) ಮತ್ತು ಬಿ.ಮೂಡ ಗ್ರಾಮದ ಜುಬೇರ್ (32) ಬಂಧಿತರು.
ಮೊಹಮ್ಮದ್ ಅಲಿ ವಿರುದ್ಧ ಕೇರಳದ ಬದಿಯಡ್ಕ, ಮಂಜೇಶ್ವರ, ದ.ಕ.ಜಿಲ್ಲೆಯ ಬಂಟ್ವಾಳ ನಗರ ಠಾಣೆ, ವಿಟ್ಲ, ಬಂಟ್ವಾಳ ಗ್ರಾಮಾಂತರ, ಬರ್ಕೆ ಪೊಲೀಸ್ ಠಾಣೆಗಳ ವ್ಯಾಪ್ತಿಯ ಮನೆಗಳಲ್ಲಿ ಕಳವು, ಸುಲಿಗೆ, ಜೈಲಿನಲ್ಲಿ ಹೊಡೆದಾಟ ಸೇರಿದಂತೆ 15 ಪ್ರಕರಣಗಳು ದಾಖಲಾಗಿವೆ.
ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್, ದಿನೇಶ್ ಕುಮಾರ್, ಎಸಿಪಿ ಧನ್ಯಾ ನಾಯಕ್ ನಿರ್ದೇಶನದಂತೆ ಕಂಕನಾಡಿ ನಗರ ಠಾಣೆಯ ನಿರೀಕ್ಷಕ ಟಿ.ಡಿ. ನಾಗರಾಜ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.
ಪಿಎಸ್‌ಐ ಶಿವ ಕುಮಾರ್, ಪಿಎಸ್‌ಐ ಅನಿತಾ ನಿಕ್ಕಂ, ಎಎಸ್‌ಐಗಳಾದ ವೆಂಕಟೇಶ್, ಚಂದ್ರಶೇಖರ, ಸಿಬಂದಿ ಜಯಾನಂದ, ಕುಶಾಲ್ ಹೆಗ್ಡೆ, ದೀಪಕ್ ಕೋಟ್ಯಾನ್, ರಾಜೇಶ್ ಕೆ.ಎನ್., ರಾಘವೇಂದ್ರ, ಸಂತೋಷ್ ಮಾದರ್, ಪ್ರವೀಣ್ ಪಾಲ್ಗೊಂಡಿದ್ದರು.