Advertisement

Mangaluru: ಬೀಚ್‌ನಲ್ಲಿ ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋದ ಮೂವರು ಯುವಕರು

01:18 AM Mar 04, 2024 | Team Udayavani |

ಮಂಗಳೂರು/ಪಣಂಬೂರು: ತೂಫಾನ್‌ ರೀತಿಯ ಬಲ ವಾದ ಗಾಳಿಯಿಂದ ಪ್ರಕ್ಷುಬ್ಧಗೊಂಡಿದ್ದ ಕಡಲ ಅಲೆಗಳ ಹೊಡೆತಕ್ಕೆ ಸಿಲುಕಿ ಪಿಯುಸಿ ವಿದ್ಯಾರ್ಥಿ ಸಹಿತ ಮೂವರು ಯುವಕರು ಸಮುದ್ರಪಾಲಾದ ಘಟನೆ ಪಣಂಬೂರಿನಲ್ಲಿ ರವಿವಾರ ಸಂಜೆ ಸಂಭವಿಸಿದೆ.

Advertisement

ಕೈಕಂಬ ರೋಸಾ ಮಿಸ್ತಿಕಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಲಿಖಿತ್‌ (18), ಖಾಸಗಿ ಸಂಸ್ಥೆಯೊಂದರಲ್ಲಿ ಡೆಲಿವರಿ ಕೆಲಸ ಮಾಡುತ್ತಿದ್ದ ಮಿಲನ್‌ (20) ಹಾಗೂ ಬೈಕಂಪಾಡಿ ಮುಂಗಾರು ಜಂಕ್ಷನ್‌ನಲ್ಲಿರುವ ಎಂಎಂಆರ್‌ ಕಂಪೆನಿಯಲ್ಲಿ ಮೇಲ್ವಿಚಾರಕರಾಗಿದ್ದ ನಾಗರಾಜ್‌ (24) ನೀರುಪಾಲಾದವರು.

ಸ್ನೇಹಿತರಾಗಿದ್ದ ಯುವಕರು ರಜಾ ದಿನವಾದ ಕಾರಣ ರವಿವಾರ ವಿಹಾರಕ್ಕೆಂದು ಪಣಂಬೂರು ಬೀಚ್‌ಗೆ ಬಂದಿದ್ದರು. ಸಂಜೆ ನೀರಿನಲ್ಲಿ ಆಟವಾಡುತ್ತಿದ್ದಾಗ ಬೃಹತ್‌ ಗಾತ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ.

ಎಚ್ಚರಿಕೆ ನಿರ್ಲಕ್ಷಿಸಿದರೇ?
ಸಮುದ್ರ ತೀರದಲ್ಲಿ ತೂಫಾನ್‌ ರೀತಿಯಲ್ಲಿ ಭಾರೀ ಗಾಳಿ ಬೀಸುತ್ತಿದ್ದು, ಬೃಹತ್‌ ಗಾತ್ರದ ಅಲೆಗಳು ಏಳುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರವಿವಾರ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಕೂಡ ಸಮುದ್ರ ತೀರಕ್ಕೆ ಆಗಮಿಸಿದ್ದು, ರಕ್ಷಣ ಸಿಬಂದಿ ಕಡಿಮೆ ಸಂಖ್ಯೆಯಲ್ಲಿದ್ದರು. ಬೀಚ್‌ನಲ್ಲಿ ಮೂರು ದಿನದಿಂದ ಕಡಲೋತ್ಸವ ಆಯೋಜನೆ ಗೊಂಡಿದ್ದು, ಈ ಹಿನ್ನೆಲೆಯಲ್ಲಿಯೂ ಜನಸಂದಣಿ ಹೆಚ್ಚಿತ್ತು.

ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿ ಸೈರನ್‌ ಮೊಳಗಿಸಲಾಗಿತ್ತು. ಆದರೆ ಈ ಯುವಕರು ರಕ್ಷಕ ಸಿಬಂದಿಯ ಕಣ್ಣು ತಪ್ಪಿಸಿ ಸಮುದ್ರಕ್ಕೆ ಈಜಾಡಲು ಹಾರಿದ್ದು, ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾದರು ಎಂದು ತಿಳಿದುಬಂದಿದೆ.

Advertisement

ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಪಣಂಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಮುದ್ರಪಾಲಾಗಿರುವ ಮೂವರು ಸೇರಿದಂತೆ ಒಟ್ಟು ಐದು ಮಂದಿ ಜತೆಯಾಗಿ ಪಣಂಬೂರು ಬೀಚ್‌ಗೆ
ತೆರಳಿದ್ದರು ಎನ್ನಲಾಗಿದೆ. ಇವರೆಲ್ಲರೂ ಅಂಬೇಡ್ಕರ್‌ ಕಾಲನಿ ನಿವಾಸಿಗಳಾಗಿದ್ದಾರೆ. ಸಮುದ್ರ ಪಾಲಾಗಿರುವ ಲಿಖೀತ್‌ ಪ್ರತಿಭಾವಂತ ವಿದ್ಯಾರ್ಥಿ. ಮೂಲತಃ ತಮಿಳುನಾಡಿನವರಾಗಿದ್ದು, ಕಳೆದ ಸುಮಾರು ಎರಡು ದಶಕಗಳಿಂದ ಈತನ ತಂದೆ -ತಾಯಿ ಪೊರ್ಕೊಡಿಯ ಅಂಬೇಡ್ಕರ್‌ ನಗರ ಕಾಲೊನಿಯಲ್ಲಿ ವಾಸಿಸುತ್ತಿದ್ದಾರೆ. ತಂದೆ ಮಣಿಕಂಠ ಟೈಲ್ಸ್‌ ಕೆಲಸ ಮಾಡುತ್ತಾರೆ. ತಾಯಿ ಗೃಹಿಣಿ.

9 ದಿನ, ಮೂರು ದುರಂತ
ಪಣಂಬೂರು ಬೀಚ್‌ನಲ್ಲಿ ಫೆ. 24ರಂದು ಮಧ್ಯಾಹ್ನ ಬೃಹತ್‌ ಅಲೆಗೆ ಸಿಲುಕಿ 7ನೇ ತರಗತಿ ವಿದ್ಯಾರ್ಥಿ ತುಕಾರಾಮ (13) ಕೊಚ್ಚಿಹೋಗಿದ್ದ. ಆತನ ಮೃತದೇಹ ರವಿವಾರ ಮುಂಜಾನೆ ತಣ್ಣೀರು ಬಾವಿ ಬಳಿ ಪತ್ತೆಯಾಗಿತ್ತು.

ಫೆ. 27ರಂದು ಹಳೆಯಂಗಡಿಯ ಕೊಪ್ಪಳ ಅಣೆಕಟ್ಟಿನಲ್ಲಿ ಮುಳುಗಿ ನಾಲ್ವರು ಎಸೆಸೆಲ್ಸಿ ವಿದ್ಯಾರ್ಥಿ ಗಳು ಮೃತಪಟ್ಟ ದುರ್ಘ‌ಟನೆ ಸಂಭವಿಸಿತ್ತು. ಸುರತ್ಕಲ್‌ನ ಖಾಸಗಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಎಸೆಸೆಲ್ಸಿ ಪೂರ್ವಸಿದ್ಧತೆ ಪರೀಕ್ಷೆ ಮುಗಿಸಿದ ಬಳಿಕ ನಾಪತ್ತೆಯಾಗಿದ್ದರು. ಬಳಿಕ ಮೃತದೇಹಗಳು ಕೊಪ್ಪಳ ಅಣೆಕಟ್ಟಿನ ರೈಲ್ವೇ ಸೇತುವೆ ಕೆಳಭಾಗದ ನದಿಯಲ್ಲಿ ತಡರಾತ್ರಿ ಪತ್ತೆಯಾಗಿದ್ದವು. ಇವರೆಲ್ಲರೂ 15 ವರ್ಷ ವಯಸ್ಸಿನವರಾಗಿದ್ದು, ಸಹಪಾಠಿಗಳಾಗಿದ್ದರು.

ಈ ಎರಡು ದುರ್ಘ‌ಟನೆಗಳ ಕಹಿ ನೆನಪು ಮಾಸುವ ಮುನ್ನವೇ ಪರಿಸರದ ಪಣಂಬೂರು ಬೀಚ್‌ನಲ್ಲಿ ಈಗ ಮತ್ತೊಂದು ದುರಂತ ಘಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next