Advertisement
ಕುಲಶೇಖರ ಶಕ್ತಿನಗರ ರಸ್ತೆಯ ಕ್ಯಾಸ್ತಲಿನೋ ಕಾಲನಿ, ಪಿಂಟೊ ಕಾಲನಿ, ಕಕ್ಕೆಬೆಟ್ಟು, ಕೊಂಗೂರು ರಸ್ತೆ ಸಹಿತ ಸುತ್ತಮುತ್ತಲಿನಲ್ಲಿ ಎರಡು ತಿಂಗಳ ಹಿಂದೆ ಕಳ್ಳರ ಕರಾಮತ್ತು ಜೋರಾಗಿತ್ತು. ಇಲ್ಲಿ 300ಕ್ಕೂ ಅಧಿಕ ಮನೆ ಇದೆ. ರಾತ್ರಿಯಾದರೆ ಕಳ್ಳರು ಹೊಂಚು ಹಾಕುವುದು, ಮೊಬೈಲ್ ಕದಿಯುವುದು ಸಾಮಾನ್ಯವಾಗಿತ್ತು. ಇದರಿಂದ ನಲುಗಿದ ಸ್ಥಳೀಯರು ಪ್ರತ್ಯೇಕ ತಂಡ ರಚಿಸಿ ರಾತ್ರಿ ಕಾವಲಿಗೆ ಮುಂದಾದರು. ಈ ಕಾವಲಿನ ಉಸ್ತುವಾರಿಯನ್ನು ಹೋರಾಟಗಾರ್ತಿ ಮೀನಾ ಟೆಲ್ಲಿಸ್ ವಹಿಸಿದ್ದರು.
ಈ ತಂಡದ ಸದಸ್ಯರು ರಾತ್ರಿ ಸಮಯದಲ್ಲಿ ಪ್ರತ್ಯೇಕವಾಗಿ ವಿವಿಧ ಕಡೆಗಳಲ್ಲಿ ನಿಂತು ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸುತ್ತಿದ್ದರು. ಒಂದು ತಿಂಗಳ ಕಾಲ ರಾತ್ರಿ 9ರಿಂದ ಮುಂಜಾನೆ 4ರವರೆಗೆ ಕಾವಲು ನಿಂತಿದ್ದರು. ಈ ವ್ಯಾಪ್ತಿಯ ಯಾವುದೇ ಜಾಗದಲ್ಲಿ ಅನುಮಾನಾಸ್ಪದ ವ್ಯಕ್ತಿಗಳನ್ನು ಕಂಡರೆ, ಶಂಕಾಸ್ಪದ ಘಟನೆಗಳು ಆದರೆ ತತ್‌ಕ್ಷಣವೇ ಮೀನಾ ಟೆಲ್ಲಿಸ್ ನೇತೃತ್ವದ ಟೀಮ್‌ಗೆ ಈ ಮಾಹಿತಿ ಲಭ್ಯವಾಗುತ್ತದೆ. ಆಗ ವಾಟ್ಸಾಪ್ ಗ್ರೂಪ್‌ನಲ್ಲಿ ಸಂದೇಶ ಹೋಗುತ್ತದೆ. ಸದಸ್ಯರು ಆಲರ್ಟ್ ಆಗಿ ಎಲ್ಲರೂ ಜತೆಗೂಡಿ ಪೊಲೀಸರಿಗೆ ಮಾಹಿತಿ ನೀಡಿ ಮುನ್ನೆಚ್ಚರಿಕೆ ವಹಿಸುತ್ತಿದ್ದರು.
Related Articles
2, 3 ಬಾರಿ ನಾವು ಕಳ್ಳರ ಬೆನ್ನಟ್ಟಿದ್ದೇವೆ. ಕೊನೆಯ ಕ್ಷಣದಲ್ಲಿ ಅವರು ತಪ್ಪಿಸಿಕೊಂಡ ಘಟನೆಯೂ ನಡೆದಿದೆ. ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನದಲ್ಲಿ ತಪ್ಪಿಸಿದ್ದರು. ಒಂದು ತಿಂಗಳು ನಿತ್ಯ ರಾತ್ರಿ ನಿಲ್ಲುತ್ತಿದ್ದೆವು. ಪೊಲೀಸರು ನಮಗೆ ಪೂರ್ಣ ಸಹಕಾರ ನೀಡಿದ್ದಾರೆ. ಈಗಲೂ ನಾವು ಅಲರ್ಟ್ ಆಗಿದ್ದೇವೆ.
-ಮೀನಾ ಟೆಲ್ಲಿಸ್, ಕಾವಲು ತಂಡದ ಪ್ರಮುಖರು
Advertisement
ಕುಲಶೇಖರ ಕ್ಯಾಸ್ತಲಿನೊ ಪರಿಸರದಲ್ಲಿ ಕಳ್ಳರ ಹಾವಳಿ ಇತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಲ್ಲಿನ ಸ್ಥಳೀಯರ ತಂಡ ರಾತ್ರಿ ತಂಡವಾಗಿ ಊರಲ್ಲಿ ಕಾವಲು ನಿಲ್ಲುತ್ತಿದ್ದರು. ಪೊಲೀಸರಿಗೆ ಪೂರ್ಣ ಮಾಹಿತಿ ನೀಡುತ್ತಿದ್ದರು. ಬಳಿಕ ಬೀಟ್ ಪೊಲೀಸರನ್ನು ಅಲ್ಲಿಗೆ ಹೆಚ್ಚುವರಿ ನಿಯೋಜಿಸಲಾಗಿದೆ.-ಟಿ.ಡಿ. ನಾಗರಾಜ್, ಇನ್ಸ್‌ಪೆಕ್ಟರ್, ಕಂಕನಾಡಿ ಪೊಲೀಸ್ ಠಾಣೆ ಕಳವಿಗೆ ನಿರಂತರ ಹೊಂಚು
- ತಾಯಿ ಮಾತ್ರ ವಾಸವಾಗಿದ್ದ ಮನೆಯೊಂದರ ಹೊರಭಾಗದಲ್ಲಿ ರಾತ್ರಿ 9ರ ಸುಮಾರಿಗೆ ಕಳ್ಳನೊಬ್ಬ ಹೊಂಚು ಹಾಕುತ್ತಿದ್ದ. ಈ ದೃಶ್ಯವನ್ನು ಸಿಸಿಟಿವಿ ಮೂಲಕ ವಿದೇಶದಲ್ಲಿದ್ದ ಮಗ ಗಮನಿಸಿದ. ತತ್‌ಕ್ಷಣವೇ ತಾಯಿ ಕಿಟಕಿಯಲ್ಲಿ ನೋಡುವುದನ್ನು ಕಂಡಾಗ ಕಳ್ಳ ತಪ್ಪಿಸಿಕೊಂಡಿದ್ದಾನೆ.
- ಒಂದು ದಿನ ಇಲ್ಲಿನ ಒಂದು ಮನೆಗೆ ಕಳ್ಳ ಬಂದಿರುವ ಸುಳಿವು ಸಿಕ್ಕಿತು. ಮನೆಯ ತಗಡು ಶೀಟು ಹಾರಿ ಆತ ತಪ್ಪಿಸಿದ್ದು ಗೊತ್ತಾಗಿ ಊರವರು ಎಲ್ಲ ಸೇರಿ ಹುಡುಕಾಡಿದ್ದರು.
- ಒಂದು ಮನೆಯ ಕಿಟಕಿಯ ಬದಿಯಲ್ಲಿ ಚಾರ್ಜ್‌ಗೆ ಇಟ್ಟಿದ್ದ ಮೊಬೈಲ್ ಅನ್ನು ಕಳ್ಳರು ಎಗರಿಸಿದ್ದರು.
- ಕಳ್ಳತನಕ್ಕೆ ಮಹಡಿಯೊಂದನ್ನು ಹತ್ತಿ ಕಳ್ಳ ಪರಾರಿಯಾದ ಘಟನೆಯೂ ಈ ಪರಿಸರದಲ್ಲಿ ನಡೆದಿತ್ತು.