Advertisement

Mangaluru: ಸಿಸಿ ಕೆಮರಾದ ಇಂಟರ್‌ನೆಟ್‌ಗೆ ರೀಚಾರ್ಜ್‌ ಮಾಡದ ಪಾಲಿಕೆ!

02:43 PM Sep 23, 2024 | Team Udayavani |

ಮಹಾನಗರ: ಮಂಗಳೂರು ನಗರದ ಸುಮಾರು 18 ಕಡೆಗಳಲ್ಲಿ  ಸೋಲಾರ್‌ ಆಧಾರಿತ ಸಿಸಿ ಕೆಮರಾಗಳಿವೆ ಆದೆ ಬಳಕೆಗಿಲ್ಲ. ಕೆಮರಾಗಳ ಮುಂದೆಯೇ ಕಸದ ರಾಶಿ ಬೀಳುತ್ತಿದ್ದು, ಪಾಲಿಕೆ ಲಕ್ಷಾಂತರ ರೂ. ಖರ್ಚು ಮಾಡಿದ ಹಣ ಉಪಯೋಗಕ್ಕೆ ಇಲ್ಲದಂತಾಗಿದೆ.

Advertisement

ನಾಲ್ಕು ವರ್ಷಗಳ ಹಿಂದೆ ನಗರದ ಸುಮಾರು 18 ಕಡೆ ಸಾರ್ವಜನಿಕ ರಸ್ತೆ ಪಕ್ಕದಲ್ಲಿ ಕಸ ಎಸೆಯುವುದನ್ನು ನಿಯಂತ್ರಿಸಲು  ಪಾಲಿಕೆಯು ಸೋಲಾರ್‌ ಪೋಲ್‌ ಕೆಮರಾಗಳನ್ನು ಅಳವಡಿಸಿತ್ತು. ಆರಂಭಿಕ ಹಂತದಲ್ಲಿ ಸಮರ್ಪಕವಾಗಿ ಕಾರ್ಯಾಚರಿಸುತ್ತಿದ್ದವು. ಅಪರೂಪಕ್ಕೆ ಕೆಲವರಿಗೆ ದಂಡ ವಿಧಿಸಲಾಗಿತ್ತು. ಆದರೆ ಇದೀಗ ಕೆಮರಾಗಳು ಕಾರ್ಯಾಚರಿಸುತ್ತಿಲ್ಲ ಎನ್ನುವುದಕ್ಕೆ ನಿತ್ಯ ಕೆಮರಾ ಮಂಭಾಗದಲ್ಲಿ ಬೀಳುತ್ತಿರುವ ಕಸದ ರಾಶಿಯೇ ಸಾಕ್ಷಿ!

ಸಿಮ್‌ ರೀಚಾರ್ಜ್‌ ಮಾಡದೆ ಕೆಮರಾ ಆಫ್‌!
ಸೋಲಾರ್‌ ಬೇಸ್ಡ್ ಪೋಲ್‌ ಕೆಮರಾಗಳನ್ನು ನಗರದ 18 ಕಡೆಗಳಲ್ಲಿ ಅಳವಡಿಸಲಾಗಿದೆ. ಇಂಟರ್‌ನೆಟ್‌ಗಾಗಿ ಸಿಮ್‌ ಅಳವಡಿಸಲಾಗಿದ್ದು, ಪ್ರತೀ ತಿಂಗಳು ಪಾಲಿಕೆ ಮೂಲಕ ಬಿಲ್‌ ಪಾವತಿಸಬೇಕಾಗುತ್ತದೆ. ಕಳೆದ ಮೂರು ತಿಂಗಳಿನಿಂದ ಬಿಲ್‌ ಪಾವತಿಯಾಗಿಲ್ಲ ಎನ್ನಲಾಗಿದ್ದು, ಇದರಿಂದಾಗಿ ಸಂಪರ್ಕ ಕಡಿತಗೊಳಿಸಲಾಗಿದೆ.

2 ಕೆಮರಾ ಕಳವು!
ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಲು ಅಳವಡಿಸಲಾಗಿದ್ದ ಕೆಮರಾಗಳ ಪೈಕಿ ಎರಡು ಕೆಮರಾಗಳು ಕಳವಾಗಿವೆ. ಸುರತ್ಕಲ್‌ ಹಾಗೂ ಕಾವೂರು ಸಮೀಪದಲ್ಲಿ ಅಳವಡಿಸಿದ್ದ ಕೆಮರಾ ಕಳವು ಮಾಡಲಾಗಿದೆ. ಈ ಬಗ್ಗೆ ಪಾಲಿಕೆ ಮೂಲಕ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿದೆ.

ಪ್ರತೀ ಕೆಮರಾ ಅಳವಡಿಕೆಗೆ ಪಾಲಿಕೆ ಸರಿಸುಮಾರು 60 ಸಾವಿರ ರೂ. ಖರ್ಚು ಮಾಡಿದ್ದು, ಒಟ್ಟು 10.80 ಲಕ್ಷ ರೂ. ವ್ಯಯಿಸಿದೆ.

Advertisement

ಬಂದಿ ನೇಮಿಸಲಾಗುವುದು
ಕೆಮರಾಗಳ ಸಿಮ್‌ಗಳಿಗೆ ಮಾಸಿಕವಾಗಿ ಬಿಲ್‌ ಪಾವತಿಸಲಾಗುತ್ತಿದೆ. ತಾಂತ್ರಿಕ ಕಾರಣಗಳಿಂದ ಬಿಲ್‌ ಪಾವತಿ ಬಿಳಂಬವಾಗಿದ್ದು, ಸಂಪರ್ಕ ಕಡಿತವಾಗಿದೆ. ಮುಂದಿನ ದಿನಗಳಲ್ಲಿ ವಾರ್ಷಿಕವಾಗಿ ಬಿಲ್‌ ಪಾವತಿಗೆ ಕ್ರಮವಹಿಸಲಾಗುವುದು. ವೀಡಿಯೋ ಮಾನಿಟರ್‌ ಮಾಡಲು ಸಿಬಂದಿ ನೇಮಿಸಲಾಗುವುದು.
ದಯಾನಂದ ಪೂಜಾರಿ ಪರಿಸರ ಅಭಿಯಂತ

ಸಾಂಕ್ರಾಮಿಕ ರೋಗ ಭೀತಿ
ಸಾರ್ವಜನಿಕ ಪ್ರದೇಶಗಳಲ್ಲಿ ಕಸ ರಾಶಿ ಹಾಕುವುದರಿಂದ ಪರಿಸರ ದುರ್ವಾಸನೆಯಿಂದ ಕೂಡುತ್ತದೆ. ಸಾಂಕ್ರಾಮಿಕ ರೋಗ ಭೀತಿಯೂ ಇದೆ. ನಿಗಾ ವಹಿಸಲು ಅಳವಡಿಸಲಾಗಿರುವ ಕೆಮರಾಗಳ ಮುಂದೆಯೇ ತ್ಯಾಜ್ಯ ಎಸೆಯುತ್ತಿರುವುದು ವಿಪರ್ಯಾಸ. ಪಾಲಿಕೆ ನಿರ್ಲಕ್ಷ್ಯ ವಹಿಸದೆ ಕ್ರಮಕೈಗೊಳ್ಳಬೇಕು.
ನಿತಿನ್‌ ಕುಮಾರ್‌, ಮಂಗಳೂರು ನಿವಾಸಿ

ಮಾನಿಟರಿಂಗ್‌ ತಂಡವಿಲ್ಲದೆ ನಿಷ್ಕ್ರಿಯ
ಬ್ಲ್ಯಾಕ್‌ ಸ್ಪಾಟ್‌ಗಳನ್ನು ಗುರುತಿಸಿ ಕಸ ಎಸೆಯುವವರಿಗೆ ದಂಡ ವಿಧಿಸುವ ಮೂಲಕ ಬೀದಿಯಲ್ಲಿ ಕಸ ಎಸೆಯುವುದನ್ನು ನಿಯಂತ್ರಿಸಲು ಪಾಲಿಕೆ ಒಂದು ಹಂತದಲ್ಲಿ ಕ್ರಮ ವಹಿಸಿದ್ದರೂ ಕೆಮರಾ ಅಳವಡಿಕೆಯ ಬಳಿಕ ತ್ಯಾಜ್ಯ ಎಸೆಯುವುದು ನಿಂತಿಲ್ಲ. ಪಾಲಿಕೆಯಿಂದ ದಂಡ ವಿಧಿಸುವ ಪ್ರಕ್ರಿಯೆಯೂ ನಡೆಯುತ್ತಿಲ್ಲ. ಪಾಲಿಕೆಯಲ್ಲಿ ಸಮರ್ಪಕವಾಗಿ ಮಾನಿಟರಿಂಗ್‌ ನಡೆಸಲು ತಂಡವಿಲ್ಲದ ಕಾರಣ ದಂಡ ವಿಧಿಸುವ ಕೆಲಸವಾಗುತ್ತಿಲ್ಲ.

ಪೌರ ಕಾರ್ಮಿಕರಿಂದ ತೆರವು
ಪ್ರತಿನಿತ್ಯ ಸಾರ್ವಜನಿಕರು ವಿವಿಧ ಕಾರಣಗಳನ್ನು ನೀಡಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ರಾಶಿ ಹಾಕುತ್ತಾರೆ. ಅಂತಹ ಬ್ಲ್ಯಾಕ್‌ ಸ್ಪಾಟ್‌ಗಳನ್ನು ಗುರುತಿಸಿ ಸಿಸಿ ಕೆಮರಾಗಳನ್ನು ಅಳವಡಿಸುವ ಕೆಲಸ ಪಾಲಿಕೆ ಮೂಲಕ ನಡೆಸಲಾಗಿದೆ. ಆದರೆ ಅವುಗಳ ಸುತ್ತ ಕಸ ರಾಶಿ ಹಾಕುತ್ತಿದ್ದು, ಸ್ವಚ್ಚತಾ ಕೆಲಸ ಮಾಡುವ ಪೌರ ಕಾರ್ಮಿಕರು ನಿತ್ಯ ಈ ರಾಶಿಯನ್ನು ತೆರವು ಮಾಡುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯಾವಂತರೇ ಕಸ ಎಸೆಯುತ್ತಿರುವುದು ವಿಪರ್ಯಾಸ.

ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next