Advertisement
ಹುಲಿ ವೇಷಧಾರಿ ಅಬ್ಬರಿಸಿ ಕುಣಿದಾಡ ಬೇಕಾದರೆ ‘ತಾಸೆ’ಯ ಶಬ್ದವೇ ಆಧಾರ. ತಾಸೆಯ ಪೆಟ್ಟಿನಿಂದ ಹೊರಬರುವ ಶಬ್ದದ ಸ್ವರ ಮತ್ತು ರಾಗಬದ್ಧವಾಗಿದ್ದರಷ್ಟೇ ಹುಲಿ ವೇಷಧಾರಿಗೆ ಅಬ್ಬರದ ಕುಣಿತ ಸಾಧ್ಯವಾಗುವುದು, ಹೀಗಾಗಿ ತಾಸೆಯ ಶಬ್ದವಿಲ್ಲದಿದ್ದರೆ ಹುಲಿ ವೇಷ ಪೂರ್ಣತ್ವ ಕಂಡುಕೊಳ್ಳುವುದಿಲ್ಲ. ಹುಲಿ ವೇಷಧಾರಿಗೆ ಮಾತ್ರವಲ್ಲ, ನೋಡುಗರ ಮನದಲ್ಲೂ ರೋಮಾಂಚನ ಮೂಡಲು, ನಿಂತಲ್ಲೇ ಕಾಲು ಕುಣಿಯಲು ತಾಸೆಯೇ ಬೇಕು!
Related Articles
ತಾಸೆ ಬಡಿಯುವುದು ಮನೆಯಲ್ಲಿ ಅಭ್ಯಾಸ ಮಾಡಿ ಕಲಿಯುವ ಪಾಠ. ಇದಕ್ಕೆ ಕೈ ಚಳಕ ಹಾಗೂ ಯುಕ್ತಿಯೇ ಆಧಾರ. ಕಳೆದ 40 ವರ್ಷದಿಂದ ತಾಸೆ ಬಡಿಯುವ ಸೇವೆಯಲ್ಲಿರುವ ರಮೇಶ್ ಮಿತ್ತನಡ್ಕ ಅವರ ಪ್ರಕಾರ, ಹುಲಿ ವೇಷ ಕುಣಿತಕ್ಕೆ ತಾಸೆಯ ಸದ್ದು ಬಹುಮುಖ್ಯ. ಹುಲಿ ವೇಷದ ಸಂದರ್ಭ ಹಿಂದೆ ಬಡಿಯುವ ಕ್ರಮ ಮತ್ತು ಈಗಿನ ಕ್ರಮದಲ್ಲಿ ಬದಲಾವಣೆ ಇದೆ.
Advertisement
ಹುಲಿ ಕುಣಿತಕ್ಕೆ ತಾಸೆಯ ಪೆಟ್ಟು ಬೇರೆ ಬೇರೆ ರೀತಿಯದ್ದಿದೆ. ಹುಲಿ ವೇಷ ಹೊರಡುವಾಗ, ಕುಣಿಯುವಾಗ, ಮಂಡೆ ಹಾಕುವಾಗ, ತೆಗೆಯುವಾಗ, ಹೊರಡುವಾಗ ಹೀಗೆ ವಿವಿಧ ಸಂದರ್ಭಕ್ಕೆ ಅನುಗುಣವಾಗಿ ಪ್ರತ್ಯೇಕ ತಾಸೆಯ ಸ್ವರಗಳಿರುತ್ತವೆ ಎನ್ನುತ್ತಾರೆ ರಮೇಶ್ ಮಿತ್ತನಡ್ಕ.
ಹುಲಿ ಕುಣಿದಷ್ಟೂ ಖುಷಿಹುಲಿ ವೇಷಧಾರಿ ಎಷ್ಟು ಆಸಕ್ತಿ ಹಾಗೂ ಶ್ರಮವಹಿಸಿ ಕುಣಿಯುತ್ತಾನೆಯೋ ಅಷ್ಟೇ ಆಸಕ್ತಿ ಶ್ರಮದಿಂದ ತಾಸೆಯವರು ಸಹಕಾರ ನೀಡುತ್ತಾರೆ. ಹುಲಿ ವೇಷ ಹಾಕಿದವರು ಉತ್ಸಾಹದಿಂದಿದ್ದರೆ ಆ ತಂಡವು ಹೆಚ್ಚು ಉತ್ಸಾಹದಲ್ಲಿರುತ್ತದೆ ಎನ್ನುತ್ತಾರೆ ಹುಲಿ ವೇಷದ ಐದಾರು ತಂಡಕ್ಕೆ ಕಳೆದ 10 ವರ್ಷದಿಂದ ತಾಸೆಯ ಕೆಲಸ ಮಾಡುವ ಪೃಥ್ವಿರಾಜ್ ಕಂಕನಾಡಿ. ಹುಲಿಗಳಿಗೆ ಪ್ರತ್ಯೇಕ ಸ್ಟೆಪ್ ಇದೆ
1980ರಿಂದ ತಾಸೆ ಕೆಲಸದಲ್ಲಿರುವ ಬಾಲಕೃಷ್ಣ ಮುಲ್ಲಕಾಡು ಅವರ ಪ್ರಕಾರ, “ಹಿಂದೆ ಹುಲಿ ವೇಷದ ಕುಣಿತ ವ್ಯಾಯಾಮ ಶಾಲೆಯ ತಾಲೀಮನ್ನು ಒಳಗೊಂಡಿತ್ತು. ಹುಲಿ ವೇಷಧಾರಿಯ ಕಾಲಿನ ಚಲನವಲನ ನೋಡಿ ಅದರಂತೆ ತಾಸೆಯಲ್ಲಿ ನಾವು ಕೈಚಳಕ ಮಾಡುತ್ತಿದ್ದೆವು. ಆಗ ಅದೊಂದು ಶಿಸ್ತು. ಆದರೆ, ಈಗ ಹುಲಿ ಕುಣಿತಕ್ಕೆ ಪ್ರತ್ಯೇಕ ಸ್ಟೆಪ್ ಜಾರಿಗೆ ಬಂದಿದೆ. 10ಕ್ಕೂ ಅಧಿಕ ಸ್ಟೆಪ್ ಹಾಕುವವರು ಇದ್ದಾರೆ. ನಾವೆಲ್ಲ ಕಷ್ಟಪಟ್ಟು ತಾಸೆ ಕಲಿತವರು. ಈಗ ಅದರ ಬಗ್ಗೆ ಏನೂ ತಿಳಿಯದ ಮಂದಿ ಕಮೆಂಟ್ ಮಾಡುವುದು ಬೇಸರ ತರಿಸುತ್ತದೆ” ಎನ್ನುತ್ತಾರೆ ಬಾಲಕೃಷ್ಣ. ಸಣ್ಣ ಗಾತ್ರದ ಚಿಮಿಣಿ ತಾಸೆ!
ಹಿಂದೆ ಚರ್ಮದ ತಾಸೆಯನ್ನೇ ಬಳಕೆ ಮಾಡುತ್ತಿದ್ದೆವು. ಚರ್ಮ ತಂದು ಅದನ್ನು ತಾಸೆಯ ಸ್ವರೂಪಕ್ಕೆ ತರಲು 5ರಿಂದ 8 ದಿನ ಬೇಕು. ಆದರೆ, ಈಗ ಅಷ್ಟು ಸಮಯ ಇಲ್ಲ. ಅದಕ್ಕಾಗಿ ಫೈಬರ್ ತಾಸೆ ಬಂದಿದೆ. ಇದನ್ನು ಸಿದ್ದಪಡಿಸಲು 2 ದಿನ ಸಾಕು. ಮೊದಲು 12 ಇಂಚಿನವರೆಗಿನ ತಾಸೆ ಇತ್ತು. ಈಗ ಸಣ್ಣ ಆಗಿ 8 ಇಂಚಿನ ‘ಚಿಮಿಣಿ ತಾಸೆ’ಯೂ ಬಂದಿದೆ. ಹಿಂದೆ ತಾಸೆಯ ಶಬ್ದ 1 ಮೈಲ್ ದೂರದವರೆಗೆ ಕೇಳುತ್ತಿತ್ತು. ಆದರೆ ಈಗಿನ ಶಬ್ದ ಹುಲಿ ವೇಷ ಕುಣಿಯುವ ವ್ಯಾಪ್ತಿಗೆ ಮಾತ್ರ ಕೇಳುತ್ತದೆ ಎನ್ನುತ್ತಾರೆ ರಮೇಶ್ ಮಿತ್ತನಡ್ಕ. –ದಿನೇಶ್ ಇರಾ