ಕದ್ರಿಕಂಬಳ: ಹಲವು ವರ್ಷಗಳ ಹಿಂದೆ ಮನೆ ಮನೆಗಳಲ್ಲಿ ಗೋ ಶಾಲೆಗಳಿದ್ದವು. ಆದರೆ ಕಾಲದ ಪ್ರಭಾವದಿಂದ ನಮ್ಮ ಪರಿಸರದಲ್ಲಿ ಗೋ ಶಾಲೆಗಳ ಸಂಖ್ಯೆ ಕ್ಷೀಣಿಸುತ್ತಿದೆ. ಗೋವುಗಳು ತಾಯಿಗೆ ಸಮಾನ. ಅವುಗಳ ಪೋಷಣೆ ನಿರಂತರವಾಗಿ ನಡೆಯುತ್ತಿರಲಿ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಹೇಳಿದರು.
ಹರಿಪಾದಗೈದಿರುವ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸ್ಮರಣೆ ಯೊಂದಿಗೆ, ಪೇಜಾವರ ಶ್ರೀಗಳ ಷಷ್ಟ್ಯಬ್ಧ ಪೂರ್ತಿ ಸರಣಿ ಕಾರ್ಯಕ್ರಮದ ಪ್ರಯುಕ್ತ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಕದ್ರಿಕಂಬಳದ ಮಂಜುಪ್ರಾಸಾದದಲ್ಲಿ ಗುರುವಾರ ಹಮ್ಮಿಕೊಂಡ ಸಾರ್ವಜನಿಕ ಗೋಪೂಜಾ ಉತ್ಸವದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.
ಆಸ್ತಿಕರಾದ ನಾವು ತಂದೆ- ತಾಯಿಯನ್ನು ಭಗವಂತನ ರೂಪ ದಲ್ಲಿ ಪೂಜಿಸುತ್ತೇವೆ. ಅದೇ ರೀತಿ, ಗೋವು ಗಳಿಗೂ ಮೊದಲ ಸ್ಥಾನವಿದೆ. ಒಂದಲ್ಲಾ ಒಂದು ವಿಚಾರದಲ್ಲಿ ನಾವು ಗೋವುಗಳನ್ನು ಅವಲಂಭಿತರಾಗಿದ್ದೇವೆ. ಗೋವುಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಆಗ ಬೇಕು. ಅದಕ್ಕೆ ಗೋಪೂಜೆಯಂತಹ ಕಾರ್ಯಕ್ರಮಗಳು ಮತ್ತಷ್ಟು ಕಡೆಗಳಲ್ಲಿ ನಡೆಯಬೇಕು ಎಂದು ತಿಳಿಸಿದರು.
ಗೋವು ಸಂಪದ್ಭರಿತ ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜೀ ಆಶೀರ್ವಚನ ನೀಡಿ, ಗೋಪೂಜೆಗೈದರೆ ಎಲ್ಲ ದೇವಾನುದೇವತೆಗಳಿಗೂ ಸಂತೃಪ್ತಿಯಾಗುತ್ತದೆ. ಗೋವು ಸಂಪದ್ಭರಿತ. ಈ ಹಿಂದೆ ಪ್ರತೀ ಮನೆಗಳಲ್ಲೂ ಗೋವುಗಳನ್ನು
ಸಾಕುತ್ತಿದ್ದರು. ಮನುಷ್ಯನ ಜೀವನಶೈಲಿ ಬದಲಾದಂತೆ ಗೋವು ಸಾಕುವ ಪದ್ಧತಿಯೂ ಕ್ಷೀಣಗೊಂಡಿದೆ. ಗೋವಿಗೆ ಉನ್ನತ ಸ್ಥಾನವಿದ್ದು, ದೇವತೆಗೆ ಸಮಾನ ಎಂದು ಹೇಳಿದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಸ್ತಾವಿಸಿದರು. ಕದ್ರಿ ನವನೀತ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ಶ್ರೀ ಕ್ಷೇತ್ರ ಶರವಿನ ಶಿಲೆ ಶಿಲೆ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರೀ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ| ಹರಿಕೃಷ್ಣ ಪುನರೂರು, ಮಂಗಳೂರು ನಗರ ಟ್ರಾಫಿಕ್ ಡಿಸಿಪಿ ಗೀತಾ ಕುಲಕರ್ಣಿ, ಪ್ರಮುಖರಾದ ಡಾ| ಎಂ.ಬಿ. ಪುರಾಣಿಕ್, ಡಾ| ಪ್ರಭಾಕರ ಜೋಶಿ, ಸುಧಾಕರ ರಾವ್ ಪೇಜಾವರ, ರಾಮಕೃಷ್ಣ ರಾವ್, ಪ್ರಭಾಕರ ರಾವ್ ಪೇಜಾವರ, ಚಂದ್ರಶೇಖರ ಮಯ್ಯ,
ಜನಾರ್ದನ ಹಂದೆ, ವಿಜಯಲಕ್ಷ್ಮೀ ಶೆಟ್ಟಿ, ಪೂರ್ಣಿಮಾ ಪೇಜಾವರ, ವಂದನಾ ಸುರೇಶ್, ರಮಾಮಣಿ, ಗಣೇಶ ಹೆಬ್ಬಾರ್, ಶಶಿಪ್ರಭ, ತಾರಾನಾಥ ಹೊಳ್ಳ, ಮಾಧವ ಜೋಗಿತ್ತಾಯ, ಡಾ| ಸತ್ಯಕೃಷ್ಣ ಭಟ್, ಶ್ರೀರಂಗ ಐತಾಳ್, ರವಿ ಭಟ್, ವಿನೋದ ಕಲ್ಕೂರ ಮತ್ತಿತರರಿದ್ದರು.
ಗೋವಿನ ಬಗ್ಗೆ ಶ್ರದ್ಧೆ, ಜಾಗೃತಿ ಅವಶ್ಯ
ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದಸರಸ್ವತಿ ಸ್ವಾಮೀಜಿ ಅವ ರು ಆಶೀರ್ವಚನ ನೀಡಿ, ಗೋವಿನ ಬಗ್ಗೆ ಶ್ರದ್ಧೆ, ಜಾಗೃತಿ ಅವಶ್ಯ. ಗೋವಿನ ಸೇವೆ ಮಾಡಿದರೆ ಗೋಮಾತೆ ನಮ್ಮನ್ನು ರಕ್ಷಿಸುತ್ತಾಳೆ. ನಡೆದಾಡುವ ದೇವಾಲಯ ಗೋಮಾತೆ ಮನೆಯಲ್ಲಿದ್ದರೆ ಯಾವುದೇ ಪ್ರಕೃತಿ ಚಿಕಿತ್ಸೆಗೆ ಹೊರಗೆ ಹೋಗಬೇಕೆಂದಿಲ್ಲ ಎಂದು ಹೇಳಿದರು.