Advertisement

Mangaluru; ಕಡಲಿಗೆ ಕಲ್ಲು ಹಾಕುವುದು ಅರ್ಧಕ್ಕೇ ಸ್ಥಗಿತ!

12:08 AM Aug 31, 2023 | Team Udayavani |

ಮಂಗಳೂರು: ಕಡಲ್ಕೊರೆತದ ತಾಣಗಳು ಮಳೆಗಾಲ ಬರುವಾಗ ಜನಪ್ರತಿನಿಧಿಗಳು ಸರದಿಯಲ್ಲಿ ಹೋಗಿ ನೋಡಿ ಬರುವುದಕ್ಕಷ್ಟೇ ಸೀಮಿತಗೊಂಡಿವೆ. ಈ ಬಾರಿಯ ಮಳೆಗಾಲವೂ ಅರೆಬರೆ, ಕಡಲೂ ಸದ್ಯಕ್ಕೆ ತೆಪ್ಪಗಾಗಿದೆ. ಹಾಗಾಗಿ ಕಾಮಗಾರಿಯೂ ಅರ್ಧಕ್ಕೇ ನಿಂತಿದೆ.

Advertisement

ಹಿಂದಿನ ಸರಕಾರದ ವೇಳೆ ಉಳ್ಳಾಲದ ಬಟ್ಟಪಾಡಿಯಲ್ಲಿ ತೀವ್ರ ಕಡಲ್ಕೊರೆತದಿಂದ ತೀರ ಕೊಚ್ಚಿ ಹೋಗಿದ್ದು ಕಾಸರಗೋಡಿನ ನೆಲ್ಲಿಕುನ್ನು ಮಾದರಿಯ ಸೀವೇವ್‌ ಬ್ರೇಕರ್‌ ನಿರ್ಮಾಣ ಮಾಡುವುದಾಗಿ ಹೇಳಿ ಕೊನೆಯಲ್ಲಿ ಸಾಕಷ್ಟು ಅಧ್ಯಯನ ಬಳಿಕ ಅದನ್ನು ಬಹುತೇಕ ಕೈಬಿಡಲಾಗಿದೆ. ಸದ್ಯ ಶಾಶ್ವತ ಪರಿಹಾರ ಅಸಾಧ್ಯ, ತುರ್ತಾಗಿ ಕಡಲಿಗೆ ಕಲ್ಲು ಹಾಕುವ ಮೂಲಕ ಪರಿಹಾರ ಕಂಡುಕೊಳ್ಳುವಂತೆ ಸ್ಥಳೀಯ ಶಾಸಕರು, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಹಾಗೂ ಆ ಬಳಿಕ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಸೂಚಿಸಿದ್ದರು.

ಅದರಂತೆ ಬಂದರು ಇಲಾಖೆ ಯವರೂ ಕೆಲವು ಗುತ್ತಿಗೆದಾರರನ್ನು ವ್ಯವಸ್ಥೆ ಮಾಡಿದ್ದರು. ಒಟ್ಟು 1.6 ಕೋಟಿ ರೂ. ಅಂದಾಜು ಮೊತ್ತಕ್ಕೆ ಉಳ್ಳಾಲದ ಸೀಗ್ರೌಂಡ್ಸ್‌ ಹಾಗೂ ಬಟ್ಟಪಾಡಿಯಲ್ಲಿ ಕಡಲ ತೀರಕ್ಕೆ ಕಲ್ಲು ಹಾಕುವ ಕೆಲಸವನ್ನು ಗುತ್ತಿಗೆದಾರರಿಗೆ ನೀಡಲಾಗಿತ್ತು. ಅದರಲ್ಲಿ ಸುಮಾರು ಶೇ. 50ರಷ್ಟು ಕೆಲಸವಾದರೂ ಇಲಾಖೆಯಿಂದ ಹಣ ಬರುವ ಸಾಧ್ಯತೆ ಕಾಣದಾದಾಗ ಗುತ್ತಿಗೆದಾರರು ಇದು “ಹಿಂದಿನ ಅನುಭವ’ ಎಂದು ಅಲ್ಲಿಗೇ ಕೆಲಸ ಸ್ಥಗಿತಗೊಳಿಸಿ ಹೋಗಿದ್ದಾರೆ.

ಆ ಮೂಲಕ ಕಳೆದ 5 ವರ್ಷಗಳಿಂದ ಆಗುತ್ತಿದ್ದ ಸಂಪ್ರದಾಯ ಈ ವರ್ಷವೂ ಮುಂದುವರಿದಂತಾಗಿದೆ. ಗುತ್ತಿಗೆದಾರರಿಗೆ ಬರಬೇಕಾದ ಮೊತ್ತ 25.14 ಕೋಟಿ ರೂ.ಗೆ ಏರಿಕೆಯಾಗಿದೆ. 2018-19ರಲ್ಲಿ ಸೋಮೇಶ್ವರ ಭಾಗ ದಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿ ತತ್‌ಕ್ಷಣಕ್ಕೆ ಬೇಕಾದ ಸುಮಾರು 2.3 ಕಿ.ಮೀ ಭಾಗಕ್ಕೆ ಕಲ್ಲು ಹಾಕಲಾಗಿತ್ತು. ಆದರೆ ಇದಕ್ಕೆ ಸರಕಾರದಿಂದ ಅನುಮೋದನೆ ಸಿಗದೆ ಈ ಮೊತ್ತ ಹಾಗೆಯೇ ಬಾಕಿಯಾಗಿತ್ತು. ಅದಕ್ಕೆ ಅನಂತರದ ವರ್ಷಗಳಲ್ಲಿ ಮೊತ್ತ ಸೇರ್ಪಡೆಯಾಗುತ್ತಲೇ ಹೋಗಿದೆ.

ಈ ಬಾರಿ ಬಾಕಿ ಹಿನ್ನೆಲೆ
ಈ ವರ್ಷ ಬಟ್ಟಪಾಡಿ ಹಾಗೂ ಸೀಗ್ರೌಂಡ್‌ನ‌ಲ್ಲಿ ತೀವ್ರ ಕಡಲ್ಕೊರೆತ ಇದ್ದ ಹಿನ್ನೆಲೆಯಲ್ಲಿ ತಲಾ 110 ಮೀಟರ್‌ ಹಾಗೂ 400 ಮೀಟರ್‌ಗೆ 75 ಲಕ್ಷ ರೂ. ಹಾಗೂ 85 ಲಕ್ಷ ರೂ. ಮೊತ್ತದಲ್ಲಿ ಕಲ್ಲು ಹಾಕಲು ಪ್ರಸ್ತಾವಿಸಲಾಗಿತ್ತು. ಆರಂಭದಲ್ಲಿ ತುರ್ತಾಗಿ ಆಗಬೇಕಾದ್ದರಿಂದ ಜಿಲ್ಲಾಧಿಕಾರಿಗಳ ಪ್ರಾಕೃತಿಕ ವಿಕೋಪ ನಿಧಿಯಿಂದ ಕೊಡುವಂತೆ ಮೀನುಗಾರಿಕೆ ಮತ್ತು ಬಂದರು ಸಚಿವರು ಸೂಚಿಸಿದ್ದರು. ಆದರೆ ಅದಕ್ಕೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ನಿಯಮಾವಳಿ ಬದಲಾವಣೆ ಮಾಡಬೇಕಾಗುತ್ತದೆ ಎಂದು ಸರಕಾರಕ್ಕೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ. ಆದರೆ ಕಾರ್ಯಗತ ಆಗಿಲ್ಲ.

Advertisement

ಈ ಬಾರಿ ತಾತ್ಕಾಲಿಕ ಕ್ರಮವಾಗಿ ಕಡಲ್ಕೊರೆತ ತಡೆ ಕೆಲಸಕ್ಕಾಗಿ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಪ್ರಾಕೃತಿಕ ವಿಕೋಪದಡಿಯಲ್ಲಿ ಕಡಲ್ಕೊರೆತವನ್ನು ಪರಿಗಣಿಸಿ ಅನುಮೋದನೆ ನೀಡುವುದು ಕೇಂದ್ರದ ಮಾರ್ಗಸೂಚಿಯಡಿ ಬರುತ್ತದೆ. ಅನುಮೋದನೆಯ ನಿರೀಕ್ಷೆಯಲ್ಲಿದ್ದೇವೆ.
– ಮುಲ್ಲೈ ಮುಗಿಲನ್‌, ದ.ಕ. ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next