Advertisement

Mangaluru ಪ್ರತ್ಯೇಕ ರೈಲ್ವೇ ವಿಭಾಗಕ್ಕೆ ಅಭಿಯಾನ ಆರಂಭ

12:27 AM Jul 04, 2024 | Team Udayavani |

ಮಂಗಳೂರು: ನೈಋತ್ಯ ರೈಲ್ವೆ, ದಕ್ಷಿಣ ರೈಲ್ವೆ ಮತ್ತು ಕೊಂಕಣ ರೈಲು ನಿಗಮದ ಮಧ್ಯೆ ಹಂಚಿ ಹೋಗಿರುವುದರಿಂದ ರೈಲ್ವೇ ಮೂಲಸೌ ಲಭ್ಯಗಳಿಂದ ವಂಚಿತ ವಾಗಿರುವ ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಬೇಕು ಎನ್ನುವ ಅಭಿಯಾನ ಮತ್ತೆ ಚುರುಕುಗೊಂಡಿದೆ.

Advertisement

ಇದಕ್ಕಾಗಿಯೇ ರೈಲು ಪ್ರಯಾಣಿಕರು, ಸಂಘಟನೆಗಳೂ ಸೇರಿಕೊಂಡು ದಕ್ಷಿಣ ಕನ್ನಡ ಜಿಲ್ಲಾ ರೈಲ್ವೇ ಬಳಕೆದಾರರ ಸಮಿತಿ ನೇತೃತ್ವದಲ್ಲಿ ಸಹಿ ಅಭಿಯಾನವನ್ನು ಕೈಗೊಂಡಿದ್ದು, ಆಗಸ್ಟ್‌ 2ರ ವರೆಗೂ ಮುಂದುವರಿಯಲಿದೆ.

ಮಮತಾ ಬ್ಯಾನರ್ಜಿ ಅವರು ರೈಲು ಸಚಿವರಾಗಿದ್ದ ಸಂದರ್ಭದಲ್ಲಿ ಕೇಳಿ ಬಂದಿದ್ದ ಈ ಬೇಡಿಕೆ ಡಿ.ವಿ.ಸದಾನಂದ ಗೌಡ ಇದ್ದಾಗಲೂ ಪ್ರಬಲವಾಗಿ ಕೇಳಿಬಂದಿತ್ತು. ಆದರೆ ಬೇಡಿಕೆ ಈಡೇರಿರಲಿಲ್ಲ. ಹಿಂದಿನ ಸಂಸದ ನಳಿನ್‌ ಕುಮಾರ್‌ ಕಟೀಲು ಹಲವು ಬಾರಿ ಈ ಬೇಡಿಕೆ ಪ್ರಸ್ತಾವಿಸಿದ್ದರೂ ಕಾರ್ಯಗತಗೊಂಡಿಲ್ಲ.

ಹಲವು ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ರೈಲ್ವೇ ಮಂಡಳಿ ಈ ಬೇಡಿಕೆಗೆ ಮಣಿದಿಲ್ಲ. ಈಗ ಹೊಸದಾಗಿ ಚೇಂಜ್‌.ಒಆರ್‌ಜಿ ವೆಬ್‌ಸೈಟ್‌ ಮೂಲಕ ಇದಕ್ಕಾಗಿಯೇ ರೈಲ್ವೇ ಆಸಕ್ತರು ಸಹಿ ಅಭಿಯಾನ ಪ್ರಾರಂಭಿಸಿದ್ದಾರೆ.

ರಸ್ತೆ, ರೈಲ್ವೇ, ವಿಮಾನಯಾನ, ಜಲಸಾರಿಗೆ ಎಂಬ ಎಲ್ಲ ನಾಲ್ಕು ವಿವಿಗಳ ಸಂಪರ್ಕಗಳನ್ನು ಹೊಂದಿದ ಏಕೈಕ ನಗರವಾಗಿದೆ. ಪ್ರಮುಖ ಕೈಗಾರಿಕೆ ಸಂಸ್ಥೆಗಳಾದ ಎಂ.ಸಿ.ಎಫ್‌, ಕುದುರೆಮುಖ ಕಬ್ಬಿಣದ ಅದಿರು ಕಂಪೆನಿ, ಎಂ.ಆರ್‌.ಪಿ.ಎಲ್‌, ಕ್ಯಾಂಪ್ಕೋ ಸೇರಿ ಹಲವಾರು ಸಂಸ್ಥೆಗಳ ಕೇಂದ್ರ ಸ್ಥಾನ, ಫ್ಯಾಕ್ಟರಿಗಳು ಮಂಗಳೂರಿನಲ್ಲಿವೆ.

Advertisement

ಮಂಗಳೂರಿನ ನವಬಂದರಿನ ಮೂಲಕ ದಕ್ಷಿಣ ಭಾರತದಿಂದ ಹಲವಾರು ಉತ್ಪನ್ನಗಳು ರಫ್ತುಗೊಳ್ಳುತ್ತದೆ. ಕಚ್ಚಾತೈಲ ಸಹಿತ ಹಲವಾರು ಉತ್ಪನ್ನಗಳು ನವಮಂಗಳೂರು ಬಂದರಿನ ಮೂಲಕ ಆಮದುಗೊಳ್ಳುತ್ತದೆ.

ಎನ್‌.ಐ.ಟಿ.ಕೆ. ಮಂಗಳೂರು ಸಹಿತ ಹಲವು ಎಂಜಿನಿಯರಿಂಗ್‌ ಕಾಲೇಜು, ಮೆಡಿಕಲ್‌ ಕಾಲೇಜುಗಳು ಇಲ್ಲಿವೆ. ಆದರೆ ರೈಲ್ವೇ ವಿಷಯದಲ್ಲಿ ಮಂಗಳೂರು ಬೇರೆ ಪ್ರಮುಖ ನಗರಗಳಿಂದ ಹಿಂದೆ ಬಿದ್ದಿದೆ. ಪ್ರತ್ಯೇಕ ರೈಲ್ವೇ ವಿಭಾಗವಿಲ್ಲದೆ, ದಕ್ಷಿಣ ರೈಲ್ವೇ ವಲಯದ ಪಾಲಕ್ಕಾಡ್‌ ವಿಭಾಗ, ನೈಋತ್ಯ ರೈಲ್ವೇ ವಲಯದ ಮೈಸೂರು ವಿಭಾಗ ಹಾಗೂ ಕೊಂಕಣ ರೈಲ್ವೆ ನಿಗಮದ ಮಧ್ಯೆ ಮಂಗಳೂರಿನ ರೈಲ್ವೇ ಜಾಲ ಹಂಚಿ ಹೋಗಿದೆ. ಇದರಿಂದ ಮಂಗಳೂರಿಗೆ ಸಿಗಬೇಕಾದ ಸೌಕರ್ಯ ಗಳು, ರೈಲ್ವೇ ಸೇವೆಗಳು ಇಲ್ಲವಾಗಿದೆ ಎನ್ನುವುದು ಸಮಿತಿಯ ಅನಿಸಿಕೆ.

ಪ್ರತ್ಯೇಕ ವಿಭಾಗವಾಗಲಿ
ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಮಂಗಳೂರು ಸೆಂಟ್ರಲ್‌ ಹಾಗೂ ಜಂಕ್ಷನ್‌ ಅನ್ನು ಪ್ರಮುಖ ರೈಲ್ವೆ ಕೇಂದ್ರವಾಗಿ ಅಭಿವೃದ್ಧಿಪಡಿಸಲು, ರಾಜ್ಯದ ಹಲವಾರು ನಗರಗಳಿಗೆ ಮಂಗ ಳೂರು ಸೆಂಟ್ರಲಿನಿಂದ ರೈಲು ಸೇವೆ ಆರಂಭಿಸಲು, ಅದನ್ನು ವಿಶ್ವ ದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿಪಡಿಸಲು ಮಂಗಳೂರಿನಲ್ಲಿ ಪ್ರತ್ಯೇಕ ರೈಲ್ವೆ ವಿಭಾಗದ ನಿರ್ದೇಶಕ ಆಗಬೇಕಾಗಿದೆ. ಮಂಗಳೂರಿನಿಂದ ಮಡಗಾಂವ್‌ ತನಕ ಹಾಗೂ ಮಂಗಳೂರಿನಿಂದ ಸಕಲೇಶಪುರ/ಹಾಸನ ತನಕದ ರೈಲ್ವೇ ಜಾಲವನ್ನು ಸೇರಿಸಿ ಮಂಗಳೂರು ಸೆಂಟ್ರಲ್‌ ಅನ್ನು ಕೇಂದ್ರ ಸ್ಥಾನವಾಗಿ ಮಾಡಿ ಪ್ರತ್ಯೇಕ ರೈಲ್ವೇ ವಿಭಾಗದ ನಿರ್ಮಾಣವಾಗಬೇಕು ಎನ್ನುವ ಬೇಡಿಕೆ ವ್ಯಕ್ತವಾಗಿದೆ. ಸಹಿ ಅಭಿಯಾನಕ್ಕೆ ಬೆಂಬಲಿಸುವವರಿಗೆ ಲಿಂಕ್‌:https://chng.it/BPBQBkfdC9

Advertisement

Udayavani is now on Telegram. Click here to join our channel and stay updated with the latest news.

Next