Advertisement

Mangaluru ಪ್ರತ್ಯೇಕ ರಸ್ತೆ ಅಪಘಾತ; ಇಬ್ಬರು ಮೃತ್ಯು

09:12 PM Oct 24, 2023 | Team Udayavani |

ಬಸ್ಸು ಢಿಕ್ಕಿಯಾಗಿ ಮೂವರಿಗೆ ಗಾಯ
ಮಂಗಳೂರು: ಸರ್ಕೀಟ್‌ ಹೌಸ್‌ ಬಳಿಯ ಬಟ್ಟಗುಡ್ಡ ಜಂಕ್ಷನ್‌ನಲ್ಲಿ ಬಸ್ಸು ಢಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ದಂಪತಿ ಹಾಗೂ ಪುತ್ರ ಗಾಯಗೊಂಡಿದ್ದಾರೆ.

Advertisement

ಶಕ್ತಿನಗರದಿಂದ ಕೆಪಿಟಿ ಮಾರ್ಗವಾಗಿ ಕುದ್ರೋಳಿ ಕಡೆಗೆ ತೆರಳುತ್ತಿದ್ದಾಗ ಬಟ್ಟಗುಡ್ಡೆ ಜಂಕ್ಷನ್‌ ಹಂಪ್‌ ಬಳಿ ಹಿಂದಿನಿಂದ ಬಂದ ಬಸ್ಸು ಢಿಕ್ಕಿಯಾಗಿದೆ. ಸ್ಕೂಟರ್‌ ಸವಾರ ದಿನೇಶ್‌ ಶರ್ಮಾ, ಅವರ ಪತ್ನಿ ಮೋಹಿನಿ ಶರ್ಮಾ ಹಾಗೂ ಪುತ್ರ ವಿನಾಯಕ್‌ ಶರ್ಮಾ ಗಾಯಗೊಂಡಿದ್ದಾರೆ.

ಮೋಹಿನಿ ಅವರ ಸೊಂಟಕ್ಕೆ ಬಲವಾದ ಏಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಬಸ್ಸು ಚಾಲಕನ ಆಜಾಗರೂಕತೆ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣವೆಂದು ಆರೋಪಿಸಲಾಗಿದ್ದು, ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಢಿಕ್ಕಿ; ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
ಮಂಗಳೂರು: ಕೊಟ್ಟಾರ ಲೋಹಿತ್‌ ನಗರದಲ್ಲಿ ಸೋಮವಾರ ರಾತ್ರಿ ಕಾರು ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಕಾವೂರು ನಿವಾಸಿಯೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕೊಟ್ಟಾರದ ಕಾರು ಶೋರೂಂವೊಂದರಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ ಕಾವೂರಿನ ಹರೀಶ್‌ ದೇವಾಡಿಗ (45) ಮೃತಪಟ್ಟವರು. ರಸ್ತೆ ದಾಟುತ್ತಿದ್ದ ವೇಳೆ ಅವರಿಗೆ ಕಾರು ಢಿಕ್ಕಿಯಾಗಿದೆ. ಅವರನ್ನು ತತ್‌ಕ್ಷಣ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

Advertisement

ಮೃತರು ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪಶ್ಚಿಮ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ಸಿನಡಿಗೆ ಬಿದ್ದು ಅಪರಿಚಿತ ವ್ಯಕ್ತಿ ಸಾವು
ಮಂಗಳೂರು: ಸ್ಟೇಟ್‌ಬ್ಯಾಂಕ್‌ ಬಳಿಯ ರಾವ್‌ ಆ್ಯಂಡ್‌ ರಾವ್‌ ಸರ್ಕಲ್‌ನಲ್ಲಿ ಸಿಟಿ ಬಸ್‌ನಡಿಗೆ ಬಿದ್ದು ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಸಿಟಿ ಬಸ್ಸು ನಿಲ್ದಾಣದಿಂದ ಸೋಮವಾರ ರಾತ್ರಿ ಕೊಣಾಜೆ ಕಡೆಗೆ ತೆರಳುತ್ತಿದ್ದ ಬಸ್‌ ರಾವ್‌ಆ್ಯಂಡ್‌ ರಾವ್‌ ವೃತ್ತದ ಬಳಿ ತಿರುವು ಪಡೆಯುತ್ತಿದ್ದಂತೆ ವ್ಯಕ್ತಿಯೊಬ್ಬರು ಅಡ್ಡ ಬಂದಿದ್ದು, ಬಸ್ಸಿನ ಮುಂದಿನ ಚಕ್ರದಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ಸಿನ ಚಕ್ರಗಳು ವ್ಯಕ್ತಿಯ ತಲೆಯ ಮೇಲೆ ಹರಿದ ಪರಿಣಾಮ ತಲೆ ಛಿದ್ರಗೊಂಡಿದ್ದು, ಮುಖ ಪರಿಚಯ ಸಿಗರ ಕಾರಣ ಯಾರೆಂದು ಪತ್ತೆಯಾಗಿಲ್ಲ. ಸುಮಾರು 40-42 ವರ್ಷ ವಯಸ್ಸಿನವರೆಂದು ಅಂದಾಜಿಸಲಾಗಿದ್ದು, ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಲಕನ ವಿರುದ್ಧ ಮಂಗಳೂರು ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ವೆನ್ಲಾಕ್‌ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ವಾರಸುದಾರರು ಯಾರಾದರೂ ಇದ್ದಲ್ಲಿ ಪಶ್ಚಿಮ ಸಂಚಾರ ಠಾಣೆಯನ್ನು ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಕೂಟರ್‌ಗೆ ಕಾರು ಢಿಕ್ಕಿ; ವೃದ್ಧ ದಂಪತಿಗೆ ಗಾಯ
ಮಂಗಳೂರು: ಕೆಪಿಟಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳವಾರ ಸ್ಕೂಟರ್‌ಗೆ ಕಾರು ಢಿಕ್ಕಿಯಾಗಿ ವೃದ್ಧ ದಂಪತಿ ಗಾಯಗೊಂಡಿದ್ದಾರೆ.

ಕದ್ರಿ ಕಂಬಳ ನಿವಾಸಿಗಳಾದ ಸೂರ್ಯನಾರಾಯಣ ರಾವ್‌ (65) ಹಾಗೂ ಅವರ ಪತ್ನಿ ಸವಿತಾ (61) ಗಾಯಗೊಂಡವರು. ಸ್ಕೂಟರ್‌ನಲ್ಲಿ ಕದ್ರಿ ಕೆಪಿಟಿ ವೃತ್ತದಿಂದ ಮುಂದೆ ಬಂದು ಹೆದ್ದಾರಿಯಲ್ಲಿ ಎಸ್‌ಕೆಎಸ್‌ ಪ್ಲಾನೆಟ್‌ ಅಪಾರ್ಟ್‌ಮೆಂಟ್‌ ಎದುರಿನಲ್ಲಿ ಯು ಟರ್ನ್ ಮಾಡುತ್ತಿದ್ದ ಸಂದರ್ಭ ಕುಂಟಿಕಾನ ಕಡೆಯಿಂದ ವೇಗವಾಗಿ ಬಂದ ಕಾರು ಸ್ಕೂಟರಿಗೆ ಹಿಂದಿನಿಂದ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟರಿನಲ್ಲಿದ್ದ ದಂಪತಿಗಳಿಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.

ಘಟನೆಯಲ್ಲಿ ಸೂರ್ಯನಾರಾಯಣ ರಾವ್‌ ಅವರ ತಲೆಗೆ ಗಂಭಿರ ಏಟು ಬಿದ್ದಿದ್ದು, ಅವರ ಪತ್ನಿ ಕೈ ಕಾಲುಗಳಿಗೆ ಗಾಯವಾಗಿದೆ. ಅವರನ್ನು ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next