ಮಂಗಳೂರು: 1991 ರ “ಪೂಜಾ ಸ್ಥಳಗಳ ಕಾಯಿದೆ”ಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಎಸ್‌ಡಿಪಿಐ ದ.ಕ ಜಿಲ್ಲಾ ಸಮಿತಿ ವತಿಯಿಂದ “ಒಳ ನುಸುಳುವಿಕೆ ಮತ್ತು ಅತಿಕ್ರಮಣ ಅಪಾಯಕಾರಿ” ಎಂಬ ಘೋಷಣೆಯೊಂದಿಗೆ ಶುಕ್ರವಾರ ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗ ಪ್ರತಿಭಟನೆ ನಡೆಯಿತು.
ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಆರಾಧನಾಲಯಗಳು ಯಾವ ರೂಪದಲ್ಲಿ ಇತ್ತೋ ಅದೇ ರೀತಿಯಲ್ಲಿ ಮುಂದುವರೆಯಬೇಕು ಎಂದು ಕಾಯಿದೆ ಹೇಳಿದೆ. ಆದರೆ ಬಿಜೆಪಿ ಸರಕಾರ ಮಸೀದಿಗಳಲ್ಲಿ ಮಂದಿರ ಹುಡುಕುತ್ತಿದೆ. ಅಪಪ್ರಚಾರದ ಮೂಲಕ ವಿಭಜನೆಯ ರಾಜಕೀಯ ಮಾಡುತ್ತಿದೆ. ಕರಾಳ ಕಾನೂನು ತರುವ ಮೂಲಕ ಸಂಸ್ಕೃತಿ, ಧಾರ್ಮಿಕ ಕುರುಹುಗಳನ್ನು ನಾಶಗೊಳಿಸಲು ಯತ್ನಿಸುತ್ತಿದೆ.ಈ ಬಗ್ಗೆ ಕಾಂಗ್ರೆಸ್ ಅದರ ನಿಲುವನ್ನು ಸ್ಪಷ್ಟಪಡಿಸಬೇಕು. ಫ್ಯಾಸಿಸಂನ ಕರಾಳ ಬಾಹುಗಳು ಪ್ರಜಾಪ್ರಭುತ್ವವನ್ನು ಅಲುಗಾಡಿಸುತ್ತಿದೆ ಎಂದರು.
ಮುಖ್ಯ ಭಾಷಣಕಾರರಾಗಿದ್ದ ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಮಾತನಾಡಿ, ಬಿಜೆಪಿ ಹತ್ತು ವರ್ಷಗಳ ಆಡಳಿತ ನಡೆಸಿ ಬೇರೆ ಅಜೆಂಡಾ ಇಲ್ಲದೆ ಕೋಮುವಾದ ಅಜೆಂಡಾ ಮುದಿಟ್ಟು ಧರ್ಮಗಳನ್ನು ಎತ್ತಿ ಕಟ್ಟಿ ಲಾಭ ಪಡೆಯಲು ಯತ್ನಿಸುತ್ತಿದೆ. ಜ್ಞಾನ ವ್ಯಾಪಿ ಮಸೀದಿ ವಿಚಾರದಲ್ಲಿ ನ್ಯಾಯಾಲಯದ ತೀರ್ಪಿನಿಂದ ಒಂದು ವರ್ಗಕ್ಕೆ ನ್ಯಾಯ ಸಿಕ್ಕಿಲ್ಲ. ನ್ಯಾಯಾಧೀಶರು ಮಸೀದಿಯಲ್ಲಿ ಪೂಜೆ ಮಾಡಲು ಅನುವು ಮಾಡಿಕೊಟ್ಟದ್ದು ಈ ದೇಶದ ಸಂವಿಧಾನ, ಕಾನೂನಿಗೆ ವಿರುದ್ದವಾದುದು. 1991 ರ ಪೂಜಾ ಸ್ಥಳಗಳ ಕಾಯಿದೆಗೆ ಯಾವುದೇ ಬೆಲೆ ನೀಡುತ್ತಿಲ್ಲ ಎಂದರು.
ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ, ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಪ್ರದಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಮೊದಲಾದವರು ಪಾಲ್ಗೊಂಡಿದ್ದರು.