Advertisement

Mangaluru: ಮ್ಯಾನ್‌ಹೋಲ್‌ ನಿರ್ವಹಣೆಗೆ ತಾಂತ್ರಿಕ ಸಲಹೆಗಾರರ ನೇಮಕ

04:26 PM Dec 03, 2024 | Team Udayavani |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಸ್‌ಟಿಪಿ, ವೆಟ್‌ವೆಲ್‌, ಒಳಚರಂಡಿ ಕೊಳವೆಯ ಎಲ್ಲ ಮ್ಯಾನ್‌ಹೋಲ್‌ ಕಾಮಗಾರಿಗಳ ಮೇಲ್ವಿಚಾರಣೆ, ಉಸ್ತುವಾರಿ ನೋಡಿಕೊ ಳ್ಳಲು ತಾಂತ್ರಿಕ ಸಲಹೆಗಾರರ (ಕನ್ಸಲ್ಟೆಂಟ್‌) ನೇಮಕಕ್ಕೆ ಪಾಲಿಕೆ ಮುಂದಾಗಿದೆ.

Advertisement

ಸದ್ಯ ಪಾಲಿಕೆಯಿಂದಲೇ ಒಳಚರಂಡಿ ಜಾಲದ ನಿರ್ವಹಣೆ ಕೆಲಸ ನಡೆಯುತ್ತಿದೆ. ಕೊಳವೆ ಸಾಮರ್ಥ್ಯ, ಸಾಧಕ-ಬಾಧಕ ಕುರಿತು ಅವರು ಯೋಜನಾಬದ್ಧವಾಗಿ ನಿರ್ಮಾಣ ಮಾಡದ ಪರಿಣಾಮ, ಮತ್ತೆ ಮತ್ತೆ ರಸ್ತೆ ಅಗೆಯಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ಮಳೆಗಾಲದಲ್ಲಿ ಭಾರೀ ಸಮಸ್ಯೆಯಾಗುತ್ತಿದ್ದು, ಇದರ ಕೆಲಸಕ್ಕೆಂದೇ ಜನರ ತೆರಿಗೆ ಹಣ ಪೋಲಾಗುತ್ತಿದೆ. ಈ ನಿಟ್ಟಿನಲ್ಲಿ ಸಮಗ್ರ ಅಧ್ಯಯನಕ್ಕೆ, ಅರ್ಹತೆ ಇರುವ ಕನ್ಸಲ್ಟೆಂಟ್‌ನವರನ್ನು ನೇಮಕ ಮಾಡಿ, ಅವರ ಉಸ್ತುವಾರಿಯಲ್ಲಿಯೇ ಕೆಲಸ ನಡೆಸಲು ಕ್ರಮ ಕೈಗೊಳ್ಳಲಾಗಿದೆ.

ಒಳಚರಂಡಿ ನಿರ್ವಹಣೆಯಲ್ಲಿ ಸುಧಾರಣೆ ತರುವ ಅಗತ್ಯವಿದೆ. ಈಗ ಕೇವಲ ಒಳಚರಂಡಿ ನಿರ್ವಹಣೆಗೇ ಕೋಟಿಗಟ್ಟಲೆ ಹಣ ಖರ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೂರ್ವಾನುಮತಿ ನೀಡುವ ಮೊದಲು ಸೂಕ್ತ ಕನ್ಸಲ್ಟೆಂಟ್‌ಗಳ ಸಲಹೆ-ಸೂಚನೆ ಪಡೆದುಕೊಳ್ಳಬೇಕಾದ ಆವಶ್ಯಕತೆ ಇದೆ ಎಂದು ಪಾಲಿಕೆ ಸದಸ್ಯರಿಂದ ಈ ಹಿಂದಿನಿಂದಲೇ ಆಗ್ರಹ ಕೇಳಿಬಂದಿತ್ತು.

ಕನ್ಸಲ್ಟೆಂಟ್‌ ಕೆಲಸವೇನು?
ಒಳಚರಂಡಿ ವ್ಯವಸ್ಥೆಯ ಎಲ್ಲ ಕಾಮಗಾರಿಗಳ ಪ್ರಸ್ತಾವನೆಯನ್ನು ಪರಿಶೀಲಿಸಿ, ಕಾರ್ಯ ಸಾಧ್ಯತೆ ವರದಿ, ವಿವರವಾದ ಅಂದಾಜು ಪಟ್ಟಿ, ನಕ್ಷೆ ಯನ್ನು ತಯಾರಿಸುವುದು, ಎಲ್ಲ ಕಾಮಗಾರಿಗಳ ಗುಣಮಟ್ಟ ನಿಯಂತ್ರಣ ಮಾಡುವುದು, ಕಾಮಗಾರಿಗಳನ್ನು ಕಾಲ ಕಾಲಕ್ಕೆ ಮೇಲ್ವಿಚಾರಣೆ ಮಾಡುವುದು, ಕಾಮಗಾರಿಗಳ ಮುಕ್ತಾಯದ ಬಳಿಕ ಜಂಟಿ ಅಳತೆ/ ಮಾಪನ ಮಾಡುವುದು, ಕಾಮಗಾರಿಗಳಿಗೆ ಗುಣಮಟ್ಟದ ಪ್ರಮಾಣ ಪತ್ರ ನೀಡುವುದು, ಯಾವುದೇ ಹೊಸ ಯೋಜನೆ ಬೇರೆ ಇಲಾಖೆಗಳಿಂದ ಬಂದಾಗ ಆ ಇಲಾಖೆಗಳೊಂದಿಗೆ ಸಮನ್ವಯತೆಯಿಂದ ಅವರಿಗೆ ಮಾರ್ಗದರ್ಶನ ನೀಡುವುದು, ಹಾಲಿ ಇರುವ ವ್ಯವಸ್ಥೆಯ ಬಗ್ಗೆ ಮೇಲ್ವಿಚಾರಣೆ, ಕಾಲ ಕಾಲಕ್ಕೆ ಅಗತ್ಯವಿರುವ ಪ್ರಸ್ತಾವನೆ ಸಲ್ಲಿಕೆ, ಎಲ್ಲ ಎಸ್‌ಟಿಪಿ ಮತ್ತು ವೆಟ್‌ವೆಲ್‌, ಒಳಚರಂಡಿ ಕೊಳವೆಗಳಿಗೆ ಸಂಬಂಧಿಸಿದಂತೆ ಕಾಮಗಾರಿಗಳ ಮೇಲ್ವಿಚಾರಣೆ, ಗುಣಮಟ್ಟ ನಿಯಂತ್ರಣ, ನಕ್ಷೆ ತಯಾರಿಸುವುದು ಸಹಿತ ಇನ್ನಿತರ ಕೆಲಸವನ್ನು ತಾಂತ್ರಿಕ ಸಲಹೆಗಾರರಿಗೆ ವಹಿಸಿಲು ಮನಪಾ ಮುಂದಾಗಿದೆ.

ನೇಮಕಕ್ಕೆ ಪೂರಕ ಕ್ರಮ
ಒಳಚರಂಡಿ ಜಾಲ ನಿರ್ವಹಣೆಗೆ ತಾಂತ್ರಿಕ ಸಲಹೆಗಾರರ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕಾರ್ಯಸೂಚಿ ಮಂಡಿಸಲಾಗಿತ್ತು. ಕನ್ಸಲ್ಟೆಂಟ್‌ ನೇಮಕಕ್ಕೆ ಸಂಬಂಧಿಸಿ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಟೆಂಡರ್‌ ಕರೆಯುವ ಮೂಲಕ ನೇಮಕ ಮಾಡಲು ನಿರ್ಧರಿಸಲಾಗಿದೆ.
– ಪ್ರೇಮಾನಂದ ಶೆಟ್ಟಿ, ಪಾಲಿಕೆ ಮುಖ್ಯಸಚೇತಕ

Advertisement

22 ಸಾವಿರಕ್ಕೂ ಅಧಿಕ ಆಳುಗುಂಡಿ !
ನಗರ ಬೆಳೆದಂತೆ ಅಗತ್ಯಕ್ಕೆ ಅನುಗುಣವಾಗಿ ಒಳಚರಂಡಿ ಜಾಲ, ಕೊಳವೆ ಮಾರ್ಗ ವಿಸ್ತರಣೆ ಮಾಡಲಾಗಿದೆ. ಇದರ ಪ್ರಕಾರ ಪಾಲಿಕೆಯು ಸುಮಾರು 245 ಕಿ.ಮೀ.ಗ ಳಷ್ಟು ಮತ್ತು 8,000 ಆಳುಗುಂಡಿ (ಮ್ಯಾನ್‌ಹೋಲ್‌) ಗಳನ್ನು ನಿರ್ಮಿಸಿದೆ. ಈ ಮಧ್ಯೆ ಪಾಲಿಕೆ ವ್ಯಾಪ್ತಿಯಲ್ಲಿ 2009ರ ಸಾಲಿನಲ್ಲಿ ಕುಡ್ಸೆಂಪ್‌ ಯೋಜನೆಯಡಿ ಸುಮಾರು 355 ಕಿ.ಮೀ. ಕೊಳವೆ ಮಾರ್ಗ ಮತ್ತು 14,815 ಆಳುಗುಂಡಿ ಯನ್ನು ನಗರದ ವ್ಯಾಪ್ತಿಗೆ ಬಹುತೇಕ ಹೊಸದಾಗಿ, ಭಾಗಶಃ ಹಳೆಯ ಮುನ್ಸಿಪಲ್‌ ವ್ಯಾಪ್ತಿ ಪ್ರದೇಶದಲ್ಲಿ ಹಾಕಿದೆ. ಇದರ ನಿರ್ವಹಣೆಯನ್ನು ಪಾಲಿಕೆಯು 1992ರಿಂದ ಕೈಗೆತ್ತಿಕೊಂಡಿದೆ.

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next