ಮಂಗಳೂರು: ಮಣಿಪುರದಲ್ಲಿ ಕ್ರೈಸ್ತರ ಮೇಲಿನ ದಾಳಿಯನ್ನು ಖಂಡಿಸಿ ಕರ್ನಾಟಕ ಸೀರೋ ಮಲಬಾರ್ ಅಸೋಸಿಯೇಶನ್ ವತಿಯಿಂದ ಶನಿವಾರ ಮಂಗಳೂರಿನ ಮಿನಿ ವಿಧಾನ ಸೌಧದ ಬಳಿ ಪ್ರತಿಭಟನೆ ನಡೆಯಿತು.
ಕೇಂದ್ರ ಸರಕಾರ ಮಣಿಪುರ ಹಿಂಸಾಚಾರವನ್ನು ತಡೆಯಬೇಕು, ಪ್ರಧಾನಿಯವರು ಮಣಿಪುರಕ್ಕೆ ಭೇಟಿ ನೀಡಿ ಶಾಂತಿ ಸುವ್ಯವಸ್ಥೆ ನೆಲೆಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮಣಿಪುರ ರಾಜ್ಯ ಸರಕಾರನ್ನು ವಜಾಗೊಳಿಸುವಂತೆಯೂ ಆಗ್ರಹಿಸಿದರು.
ಮಾಜಿ ಶಾಸಕ ಜೆ.ಆರ್.ಲೋಬೋ, ಕೆಎಸ್‌ಎಂಸಿಎ ಕೇಂದ್ರೀಯ ನಿರ್ದೇಶಕ ಫಾಣ ಶಾಜಿ ವಿ.ಜೆ., ಅಧ್ಯಕ್ಷ ಬೆಟ್ಟಿ ನೆಡುನಿಲಮ್, ಕಾರ್ಯದರ್ಶಿ ಸೆಬೆಸ್ಟಿಯನ್ ಎಂ.ಜೆ., ಖಜಾಂಚಿ ಜಿಮ್ಸನ್, ಕೆಎಸ್‌ಎಂಸಿಎ ಜಾಗತಿಕ ಸಮಿತಿ ಕಾರ್ಯದರ್ಶಿ ಬೆನ್ನಿ ಆ್ಯಂಟನಿ, ಆಲ್ ಇಂಡಿಯಾ ಕೆಥೋಲಿಕ್ ಯೂನಿಯನ್ ರಾಜ್ಯಾಧ್ಯಕ್ಷ ಕ್ಸೇವಿಯರ್ ಪಾಲೇಲಿ, ಪ್ರ.ಕಾರ್ಯದರ್ಶಿ ಆ್ಯಂಟನಿ ವಿಲ್ಸನ್, ಕೆಎಸ್‌ಎಂಸಿಎ ಮಾಜಿ ಅಧ್ಯಕ್ಷ ಸೆಬಾಸ್ಟಿಯನ್ ಕೆ.ಕೆ., ಸೆಬಾಸ್ಟಿಯನ್ ಪಿ.ಪಿ. ಮಾಧ್ಯಮ ಸಂಯೋಜನಕ ಎಲಿಯಾಸ್ ಫೆರ್ನಾಂಡಿಸ್, ಬೆಳ್ತಂಗಡಿ ಧರ್ಮಪ್ರಾಂತ್ಯದ ವಿವಿಧ ಧರ್ಮಗುರುಗಳು, ಧರ್ಮ ಭಗಿನಿಯರು, ಪ್ರಾದೇಶಿಕ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.