Advertisement
ಯೇಸು ಕ್ರಿಸ್ತರ ಜನನದ ಹಬ್ಬ ಕ್ರಿಸ್ಮಸ್. ಇದನ್ನು ಡಿ. 25ರಂದು ಆಚರಿಸುತ್ತಾರೆ. ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್. ಇದನ್ನು ಸಾಮಾನ್ಯವಾಗಿ ಮಾರ್ಚ್ ಕೊನೆಯ ವಾರ ಅಥವಾ ಎಪ್ರಿಲ್ ಮೊದಲ ವಾರದಲ್ಲಿ ಆಚರಿಸಲಾಗುತ್ತಿದೆ. ಈ ಹಬ್ಬಕ್ಕೆ ನಿಗದಿತ ದಿನಾಂಕ ಇರುವುದಿಲ್ಲ. ಪ್ರತಿ ವರ್ಷ ಹದಿನೈದು ದಿನ ಆಚೀಚೆ ಆಗುತ್ತದೆ. ಆದರೆ ರವಿವಾರ ದಿನವೇ ಆಚರಿಸಲಾಗುತ್ತದೆ.
Related Articles
Advertisement
ಜನನದ ಹಿನ್ನೆಲೆಯೇಸುಕ್ರಿಸ್ತರ ತಂದೆ ಜೋಸೆಫ್ ಜನಗಣತಿಯ ಸಂದರ್ಭ ತನ್ನ ಹೆಸರನ್ನು ನೋಂದಾಣಿಗಾಗಿ ಬೆತ್ಲೆಹೇಮಿಗೆ ಗರ್ಭಿಣಿ ಮಡದಿ ಮರಿಯಾ ಜತೆ ಹೋಗುತ್ತಾರೆ. ಅಲ್ಲಿ ಮರಿಯಾಳಿಗೆ ಹೆರಿಗೆಯ ಬೇನೆ ಕಾಣಿಸಿಕೊಳ್ಳುತ್ತದೆ. ಹೆರಿಗೆಗೆ ಜಾಗವಿಲ್ಲ, ಜನಗಣತಿಗಾಗಿ ಬಂದ ಜನರಿಂದ ಬೆತ್ಲೆಹೇಮ್ ತುಂಬಿತ್ತು. ಬಂದವರೆಲ್ಲ ತಮ್ಮ ಬಂಧು ಬಾಂಧವರ, ಮಿತ್ರರ ಮನೆಗಳಲ್ಲಿ ಆಶ್ರಯ ಪಡೆದಿದ್ದರು. ಅತಿಥಿಗಳಿದ್ದ ಛತ್ರಗಳು ಭರ್ತಿಯಾಗಿದ್ದವು. ಜೋಸೆಫ್ ಅವರಿಗೆ ಹೇಳಿ ಕೇಳಿ ಆ ಊರಲ್ಲಿ ಯಾರೂ ನೆಂಟರಿರಲಿಲ್ಲ. ಗೆಳೆಯರಂತೂ ಇರಲೇ ಇಲ್ಲ. ಬೇರೆ ದಾರಿಯಿಲ್ಲದೆ ಜೋಸೆಫ್ ಗರ್ಭಿಣಿ ಮರಿಯಳ ಜತೆ ಜಾನುವಾರುಗಳ ಹಟ್ಟಿಯಲ್ಲಿ ಆಶ್ರಯ. ಮರಿಯಾ ಅವರು ಹಟ್ಟಿಯಲ್ಲಿಯೇ (ಗೋದಲಿ) ಯೇಸು ಕ್ರಿಸ್ತರಿಗೆ ಜನ್ಮ ನೀಡಿದರು. ಹುಲ್ಲಿನ ಹಾಸಿಗೆ ಯೇಸು ಕಂದನ ಮೃದುವಾದ ದೇಹಕ್ಕೆ ಬೆಚ್ಚನೆಯ ರಕ್ಷಣೆಯನ್ನು ನೀಡಿತು. ಹರುಕು ಮುರುಕು ಚಿಂದಿಬಟ್ಟೆಯೇ ಬಾಲಯೇಸುವಿನ ಮೈ ಮುಚ್ಚುವ ದಿವ್ಯ ವಸ್ತ್ರವಾಯಿತು. ಮುದ್ದು ಮಗುವಿನ ಮುಖದ ದಿವ್ಯಕಳೆಯೇ ಹಟ್ಟಿಯ ಗೋದಲಿಯಲ್ಲಿ ಬೆಳಕಾಯಿತು ಎಂಬುದಾಗಿ ಬೈಬಲ್ ತಿಳಿಸುತ್ತದೆ. ಜಾನುವಾರುಗಳ ಹಟ್ಟಿಯಲ್ಲಿ ಯೇಸುಕ್ರಿಸ್ತರು ಜನಿಸಿದರ ಸಂಕೇತವಾಗಿ ಕ್ರಿಸ್ಮಸ್ ಸಂದರ್ಭ ಕ್ರೈಸ್ತರು ಮನೆ, ಚರ್ಚ್‌ಗಳಲ್ಲಿ ಗೋದಲಿ ನಿರ್ಮಿಸುತ್ತಾರೆ. ಗೋದಲಿಗಳಿಗೆ ಹಳ್ಳಿಯ ವಾತಾವರಣದಲ್ಲಿ ಆಕರ್ಷಕವಾಗಿ ರಚನೆ ಮಾಡುತ್ತಾರೆ. ಕ್ರಿಸ್ಮಸ್‌ಗಾಗಿ ನಗರದ ಮಳಿಗೆ, ಚರ್ಚ್‌ಗಳು ವಿದ್ಯುತ್‌ದೀಪಗಳಿಂದ ಆಕರ್ಷಕವಾಗಿ ಕಂಗೊಳಿಸುತ್ತವೆ. ಆಚರಣೆ
ಯೇಸು ಕ್ರಿಸ್ತರು ಡಿ. 25ರಂದು ಜನಿಸಿದರು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಹಬ್ಬದ ಮುಂಚಿನ ದಿನ ಡಿ. 24ರಂದು ರಾತ್ರಿ ಚರ್ಚ್‌ಗಳಲ್ಲಿ ವಿಶೇಷ ಸಂಭ್ರಮದ ಬಲಿ ಪೂಜೆ ನಡೆಯುತ್ತದೆ. ಬಳಿಕ ಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳಿರುತ್ತವೆ. ಡಿ. 25ರಂದು ಚರ್ಚ್‌ಗಳಲ್ಲಿ ಬಲಿ ಪೂಜೆ, ಬಳಿಕ ಮಧ್ಯಾಹ್ನ ಹಬ್ಬದ ಸವಿಯೂಟ ಇರುತ್ತದೆ. ಸಾಂತಾಕ್ಲಾಸ್
ಗೋದಲಿಯ ಜತೆಗೆ ಕ್ರಿಸ್ಮಸ್ ಶುಭಾಶಯ ವಿನಿಮಯ ಮಾಡಿಕೊಳ್ಳಲು ಕ್ರಿಸ್ಮಸ್ ಗ್ರೀಟಿಂಗ್ ಕಾರ್ಡುಗಳು, ಸಂತಸವನ್ನು ಪರರಲ್ಲಿ ಹಂಚಿಕೊಳ್ಳಲು ಕ್ರಿಸ್ಮಸ್ ವಿಶೇಷ ತಿಂಡಿ ತಿನಿಸುಗಳಾದ ಕುಸ್ವಾರ್ ಹಂಚುವಿಕೆ, ಎಲ್ಲೆಲ್ಲೂ ಮಿನುಗುವ ನಕ್ಷತ್ರಗಳ ಸಾಲು, ಕ್ರಿಸ್ಮಸ್ ಟ್ರೀ ಹಾಗೂ ಪ್ರತಿಯೊಂದು ಕ್ರಿಸ್ಮಸ್ ಕಾರ್ಯಕ್ರಮದಲ್ಲಿ ಆನಂದದಿಂದ ಹೆಜ್ಜೆ ಹಾಕುತ್ತಾ, ಎಲ್ಲರನ್ನು ಪ್ರತ್ಯೇಕವಾಗಿ ಪುಟಾಣಿಗಳನ್ನು ರಂಜಿಸುವ, ‘ಸಾಂತಾಕ್ಲಾಸ್’- ಇವೆಲ್ಲವೂ ಕಣ್ಣಿಗೆ ಹಬ್ಬವನ್ನು ನೀಡುತ್ತವೆ. ‘ಸಾಂತಾಕ್ಲಾಸ್’ ಎಂಬ ವ್ಯಕ್ತಿ 4ನೇ ಶತಮಾನದಲ್ಲಿ ಜೀವಿಸಿದ ಟರ್ಕಿಯ ವಿೂರ ಪ್ರಾಂತ್ಯದ ಧರ್ಮಾಧ್ಯಕ್ಷರಾಗಿದ್ದ ನಿಕೊಲಾಸ್ ಅವರು ಎಂಬ ಉಲ್ಲೇಖ ಚರಿತ್ರೆಯಲ್ಲಿದೆ. ಅವರಿಗೆ ಬಡಬಗ್ಗರ ಮೇಲೆ ಅತಿಯಾದ ಕಾಳಜಿ. ಹೆಣ್ಮಕ್ಕಳಿಗೆ ಮದುವೆ ಮಾಡಲು ಸಾಧ್ಯವಿಲ್ಲದೆ ಬಡತನದಿಂದ ಕೊರಗುವ, ಅನೇಕ ಹೆತ್ತವರಿಗೆ ತಮ್ಮ ಕೈಲಾದ ಸಹಾಯ ಹಸ್ತವನ್ನು ನೀಡುವುದಕ್ಕಾಗಿ ನಿಕೊಲಾಸ್ ಅವರು ರಾತ್ರಿಯ ಸಮಯದಲ್ಲಿ ಅವರ ಮನೆಯ ಕಿಟಿಕಿಗಳ ಎಡೆಯಲ್ಲಿ ರಹಸ್ಯವಾಗಿ ಬಂಗಾರ ಹಾಗೂ ಇತರ ಒಡವೆಗಳನ್ನು ಇಟ್ಟು ಹೋಗುತ್ತಿದ್ದರು. ಬಡವರಲ್ಲಿ ಕಾಳಜಿಯಿದ್ದ ನಿಕೊಲಾಸ್ ಅವರನ್ನು ಅವರ ಮರಣದ ಅನಂತರ ಕ್ರೈಸ್ತ ಧರ್ಮಸಭೆ ಸಂತರೆಂದು ಘೋಷಿಸಿದೆ. ಆದರೆ ಈಗ ಕ್ರಿಸ್ಮಸ್ ಸಂಭ್ರಮದ ಕಾರ್ಯ ಕ್ರಮಗಳಲ್ಲಿ ಎಲ್ಲೆಲ್ಲೂ ‘ಸಾಂತಾಕ್ಲಾಸ್’ ನನ್ನು ಮನೋರಂಜನೆಯ ವ್ಯಕ್ತಿಯಾಗಿ ಬಿಂಬಿಸಲಾಗಿದೆ. ಹಿಲರಿ ಕ್ರಾಸ್ತಾ