ಮಂಗಳೂರು: ನಗರದ ಪಿಎಫ್ಐ ಮತ್ತು ಸಿಎಫ್ಐ ಸಂಘಟನೆಗಳಿಗೆ ಸೇರಿದ ಕಚೇರಿಗಳಲ್ಲಿ ಬುಧವಾರ ಪೊಲೀಸರು ತಪಾಸಣೆ ನಡೆಸಿ ಕಚೇರಿಗಳಿಗೆ ಬೀಗ ಮುದ್ರೆ ಹಾಕಿದ್ದಾರೆ.
ಪಿಎಫ್ಐ ಮತ್ತು ಅದರ ಹಲವು ಸಹವರ್ತಿ ಸಂಘಟನೆಗಳನ್ನು ಕೇಂದ್ರ ಸರಕಾರ ನಿಷೇಧಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಆದೇಶದಂತೆ ಪೊಲೀಸರು ಕಾರ್ಯಾಚರಣೆ ನಡೆಸಿದರು.
ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿಗಳಾದ ಅನ್ಸುಕುಮಾರ್ ಮತ್ತು ದಿನೇಶ್ ಕುಮಾರ್ ನೇತೃತ್ವದ ಪೊಲೀಸ್ ತಂಡಗಳು ಸ್ಥಳೀಯ ಅಧಿಕಾರಿಗಳ ಪಾಲ್ಗೊಳ್ಳುವಿಕೆಯಲ್ಲಿ ಬಿಗಿ ಭದ್ರತೆಯೊಂದಿಗೆ ಬುಧವಾರ ಸಂಜೆ ವೇಳೆಗೆ ಕಾರ್ಯಾಚರಣೆ ನಡೆಸಿದವು.
ಸ್ಟೇಟ್‌ಬ್ಯಾಂಕ್ ಸಮೀಪದ ನೆಲ್ಲಿಕಾಯಿ ರಸ್ತೆಯಲ್ಲಿದ್ದ ಪಿಎಫ್ಐ ಕಚೇರಿ, ಬಂದರು ಅಜೀಜುದ್ದೀನ್ ರಸೆೆ¤ಯಲ್ಲಿರುವ ಸಿಎಫ್ಐ ಕಚೇರಿಗೆ ಬೀಗಮುದ್ರೆ ಹಾಕಲಾಯಿತು. ಪಿಎಫ್ಐ ಕಚೇರಿಗೆ ಪೊಲೀಸರು ತೆರಳಿದಾಗ ಪ್ರವೇಶದ ಮುಖ್ಯ ಗೇಟ್‌ಗೆ ಬೀಗ ಹಾಕಲಾಗಿತ್ತು. ಒಳಗಡೆ ಸಂಘಟನೆಗಳ ಕಾರ್ಯಕರ್ತರು ಇರಲಿಲ್ಲ. ಕಟ್ಟರ್ ಸಹಾಯದಿಂದ ಬೀಗ ಮುರಿದು ಒಳಪ್ರವೇಶಿಸಿದ ಪೊಲೀಸರು, ಸರಕಾರಿ ಪಂಚರ ಸಮಕ್ಷಮದಲ್ಲಿ ಒಳಗಿದ್ದ ದಾಖಲೆ ಪತ್ರಗಳು ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಿ ಕಚೇರಿ ಬಾಗಿಲಿಗೆ ಬೀಗ ಹಾಕಿದರು. ಸರಕಾರದ ಆದೇಶದಂತೆ ನಿಷೇಧಿತ ಸಂಘಟನೆಗಳಿಗೆ ಸೇರಿದ ಕಚೇರಿಗಳಲ್ಲಿ ತಪಾಸಣೆ ನಡೆಸಿ ಬೀಗ ಮುದ್ರೆ ಹಾಕಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಬಂಧಿತರಿಗೆ ನ್ಯಾಯಾಂಗ ಬಂಧನ
ಸೋಮವಾರ ಬಂಧಿಸಲ್ಪಟ್ಟಿರುವ ಪಿಎಫ್ಐನ 10 ಮಂದಿಯನ್ನು ತಾಲೂಕು ದಂಡಾಧಿಕಾರಿಗಳ ಮುಂದೆ ಹಾಜರುಪಡಿಸಲಾಗಿದ್ದು, ಬಂಧಿತರಿಗೆ 7 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿರುವ ಪಿಎಫ್ಐ ಹಾಗೂ ನಿಷೇಧಿತ ಇತರ ಸಂಘಟನೆಗಳ ಕಚೇರಿಗಳಿಗೆ ಬೀಗ ಹಾಕುವ ಪೂರ್ವಭಾವಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಶೀಘ್ರ ಬೀಗ ಜಡಿಯಲಾಗುವುದು. ಬಂಧಿತ ಪಿಎಫ್ಐ ಮುಖಂಡರಿಗೆ ಒಂದು ವಾರ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಭಗವಾನ್ ಸೋನಾವಣೆ ತಿಳಿಸಿದ್ದಾರೆ.