ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ನ.17ರಂದು ನಿಗದಿಯಾಗಿದ್ದ ಬಹು ನಿರೀಕ್ಷಿತ ಪಿಲಿಕುಳ “ನೇತ್ರಾವತಿ- ಫಲ್ಗುಣಿ’ ಜೋಡುಕರೆ ಕಂಬಳವನ್ನು ಮುಂದೂಡಲು ದ.ಕ. ಜಿಲ್ಲಾಡಳಿತ ಸೋಮವಾರ ತೀರ್ಮಾನಿಸಿದೆ.
ರಾಜ್ಯಾದ್ಯಂತ ವಿವಿಧ ಗ್ರಾಮ ಪಂಚಾಯತ್‌ಗಳಿಗೆ ಉಪಚುನಾವಣೆ ಘೋಷಣೆಯಾಗಿ ನೀತಿಸಂಹಿತೆ ಜಾರಿಯಲ್ಲಿರುವ ಕಾರಣದಿಂದಾಗಿ ಪಿಲಿಕುಳ ಸರಕಾರಿ ಪ್ರಾಯೋಜಿತ ಕಂಬಳ ಆಯೋಜನೆಗೆ ತೊಡಕುಂಟಾಗಿದೆ. ಅದರಲ್ಲೂ ಪಿಲಿಕುಳ ಕಂಬಳ ನಡೆಯುವ ಪ್ರದೇಶದಲ್ಲಿರುವ ಮೂಡುಶೆಡ್ಡೆ ಪಂಚಾಯತ್‌ನಲ್ಲಿ ಉಪಚುನಾವಣೆ ಇರುವ ಕಾರಣದಿಂದ ಕಂಬಳ ನಡೆಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ನ.17ರ ದಿನಾಂಕವನ್ನು ಮುಂದೂಡಲು ತೀರ್ಮಾನಿಸಲಾಗಿದೆ.
“ಉದಯವಾಣಿ’ ಜತೆ ಮಾತನಾಡಿದ ದ.ಕ. ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, “ನ.26ರ ವರೆಗೆ ಚುನಾವಣೆ ನೀತಿಸಂಹಿತೆ ಇರುವ ಕಾರಣದಿಂದ ಪಿಲಿಕುಳ ಕಂಬಳವನ್ನು ಮುಂದೂಡುವ ತೀರ್ಮಾನವನ್ನು ಸೋಮವಾರ ಕೈಗೊಳ್ಳಲಾಗಿದೆ. ನೀತಿಸಂಹಿತೆ ಮುಗಿದ ಬಳಿಕ ಕಂಬಳ ದಿನಾಂಕವನ್ನು ಜಿಲ್ಲಾಡಳಿತ ತೀರ್ಮಾನಿಸಲಿದೆ’ ಎಂದು ಹೇಳಿದರು.
ನ. 17ರಂದೇ ಕುದಿ
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವೀಪ್ರಸಾದ್ ಶೆಟ್ಟಿ ಉದಯವಾಣಿಗೆ ಪ್ರತಿಕ್ರಿಯಿಸಿ, “ನ.17ರ ಪಿಲಿಕುಳ ಕಂಬಳಕ್ಕೆ ಕರೆ ನಿರ್ಮಾಣ ಸಹಿತ ಸರ್ವ ತಯಾರಿ ನಡೆಸಲಾಗಿತ್ತು. ಆದರೆ ಚುನಾವಣೆ ನೀತಿಸಂಹಿತೆ ಕಾರಣದಿಂದ ಕಂಬಳವನ್ನು ಮುಂದೂಡಲಾಗಿದೆ. ಜಿಲ್ಲಾಡಳಿತವೇ ಕಂಬಳ ಆಯೋಜಿಸುವ ಕಾರಣದಿಂದ ನೀತಿಸಂಹಿತೆ ಅನುಷ್ಠಾನ ಅನಿವಾರ್ಯವಾಗಿದೆ. ಆದರೆ ನ.17ರಂದು ಸಂಪ್ರದಾಯ ಪ್ರಕಾರ ಕುದಿ ನಡೆಸಲಾಗುವುದು.
ಮುಂದಿನ ಕಂಬಳ ದಿನಾಂಕದ ಬಗ್ಗೆ ಸಮಿತಿಯು ಆ ದಿನದಂದೇ ಚರ್ಚೆ ನಡೆಸಲಿದೆ. ನೀತಿಸಂಹಿತೆ ಮುಗಿದ ಬಳಿಕ ಈಗಾಗಲೇ ನಿಗದಿಯಾದ ಕಂಬಳದಲ್ಲಿ ಕೊಂಚ ಬದಲಾವಣೆ ಸಾಧ್ಯತೆ ಇದ್ದರೆ ನಡೆಸಿಕೊಂಡು ಆಗ ಪಿಲಿಕುಳ ಕಂಬಳ ಆಯೋಜಿಸುತ್ತೇವೆ. ಇಲ್ಲವಾದರೆ ವಾರದ ಮಧ್ಯೆ ಕಂಬಳ ಆಯೋಜನೆ ಬಗ್ಗೆಯೂ ಚಿಂತನೆ ನಡೆಸಲಾಗುವುದು’ ಎಂದು ಹೇಳಿದರು. ನೀತಿಸಂಹಿತೆ ಕಾರಣದಿಂದ “ಪಿಲಿಕುಳ ಕಂಬಳ ಮುಂದೂಡಿಕೆ ಸಾಧ್ಯತೆ’ ಎಂಬ ಶೀರ್ಷಿಕೆಯಲ್ಲಿ “ಉದಯವಾಣಿ’ಯು ನ.11ರಂದೇ ವರದಿ ಪ್ರಕಟಿಸಿತ್ತು.