Advertisement

Mangaluru physiocon 2023; ರಾಜ್ಯದಲ್ಲಿ ಅವಿರೋಧ ಜಾರಿಗೆ ಪ್ರಯತ್ನ: ಬಸವರಾಜ ಹೊರಟ್ಟಿ

11:18 PM Sep 10, 2023 | Team Udayavani |

ಮಂಗಳೂರು: ಫಿಸಿಯೋಥೆರಪಿ ಕ್ಷೇತ್ರಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಜಾರಿಗೆ ತಂದಿರುವ ನ್ಯಾಶನಲ್‌ ಕಮಿಷನ್‌ ಫಾರ್‌ ಅಲೈಡ್‌ ಆ್ಯಂಡ್‌ ಹೆಲ್ತ್‌ಕೇರ್‌ ಪ್ರೊಫೆಶನ್ಸ್‌ ಆ್ಯಕ್ಟ್ (ಆರೋಗ್ಯ ಕ್ಷೇತ್ರದ ವೃತ್ತಿಪರರ ರಾಷ್ಟ್ರೀಯ ಆಯೋಗ ಕಾಯ್ದೆ) 2021 ಅನ್ನು ರಾಜ್ಯದಲ್ಲಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿದ್ದು ಅವಿರೋಧವಾಗಿ ಜಾರಿಯಾಗುವಂತೆ ಪ್ರಯತ್ನಿಸುತ್ತೇನೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

Advertisement

ನಗರದಲ್ಲಿ ದ.ಕ.ಫಿಸಿಯೋಥೆರಪಿ ಶಿಕ್ಷಕರ ಸಂಘದ ವತಿಯಿಂದ ನಡೆದ ಮಂಗಳೂರು ಫಿಸಿಯೋಕಾನ್‌ 2023 – ಅಂತಾರಾಷ್ಟ್ರೀಯ ಫಿಸಿಯೋಥೆರಪಿ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು.
ಪ್ರತಿ ಆಸ್ಪತ್ರೆಯಲ್ಲೂ ಫಿಸಿ ಯೋಥೆರಪಿ ವಿಭಾಗವನ್ನು ಆರಂಭಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವರೊಂದಿಗೆ ಮಾತನಾಡುತ್ತೇನೆ. ಇಂದು ವೈದ್ಯರಷ್ಟೇ ಪ್ರಾಧಾನ್ಯತೆ ಫಿಸಿಯೋಥೆರಪಿಸ್ಟ್‌ಗಳಿಗೂ ಇದೆ. ಕೆಲವು ಶಸ್ತ್ರಚಿಕಿತ್ಸೆಯ ಬಳಿಕ ವ್ಯಕ್ತಿ ಸಹಜ ಜೀವನ ನಡೆಸುವಲ್ಲಿ ನೆರವಾಗುವುದು ಫಿಸಿಯೋಥೆರಪಿಸ್ಟ್‌
ಗಳು ಎಂದರು.

ಸ್ವಂತ ಅನುಭವ ಹೊಂದಿದ್ದೇನೆ
ಎರಡು ವರ್ಷಗಳ ಹಿಂದೆ ಮಂಡಿನೋವಿನಿಂದ ಸಾಕಷ್ಟು ಹಿಂಸೆ ಅನುಭವಿಸಿದ್ದೆ. ಹಲವರು ಹಲವು ಸಲಹೆಗಳನ್ನು ನೀಡಿದ್ದರು. ಮಂಡಿಚಿಪ್ಪು ಬದಲಾವಣೆಯ ಬಗ್ಗೆಯೂ ಆಲೋಚಿಸಿದ್ದೆ. ಆದರೆ ಫಿಸಿಯೋಥೆರಪಿ ಕಡೆಗೆ ಒಲವು ತೋರಿಸಿ ಚಿಕಿತ್ಸೆ ಪಡೆದು ಗುಣವಾಗಿದೆ. ಪರಿಣಾಮ ಇಂದು ಯಾವುದೇ ಕಾರ್ಯಕ್ರಮದಲ್ಲಿ ಗಂಟೆಗಟ್ಟಲೆ ನಿಂತು ಮಾತನಾಡಲು ಸಾಧ್ಯವಾಗಿದೆ ಎಂದು ತಮ್ಮ ಅನುಭವ ತಿಳಿಸಿದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ. ಕುಲಸಚಿವ (ಮೌಲ್ಯಮಾಪನ) ಡಾ| ರಿಯಾಝ್ ಬಾಷಾ ಎಸ್‌. ಅವರು, ಫಿಸಿಯೋಥೆರಪಿಸ್ಟ್‌ಗಳದ್ದು ನೋವು ಗುಣಪಡಿಸುವಂತಹ ಕೆಲಸವಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿರುವಂತೆ ಕೆಲವು ವಿಭಾಗಗಳಲ್ಲಿ ಸ್ಪೆಷಲಿಸ್ಟ್‌ಗಳಾಗುವ ಅಗತ್ಯವಿದೆ ಎಂದರು.

ತೇಜಸ್ವಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಡಾ| ಎಂ. ಶಾಂತಾರಾಮ ಶೆಟ್ಟಿ ಅವರು ಮಾತನಾಡಿ, ಫಿಸಿಯೋಥೆರಪಿ ವೈದ್ಯಕೀಯ ಕ್ಷೇತ್ರ ದಲ್ಲಿ ಅಗತ್ಯದ ವಿಭಾಗವಾಗಿದ್ದು, ರೋಗಿಗಳನ್ನು ಸಹಜ ಸ್ಥಿತಿಗೆ ತರುವಲ್ಲಿ ಅವರ ಪಾತ್ರ ಮಹತ್ತರವಾದುದು. ರೊಬೊಟಿಕ್‌, ಕೃತಕ ಬುದ್ಧಿಮತ್ತೆಯಿಂದ ಆರೋಗ್ಯ ಕ್ಷೇತ್ರದಲ್ಲಿ ಹೊಸ ಬದಲಾವಣೆಯಾಗಿದೆ ಎಂದರು.

Advertisement

ಪ್ರಶಸ್ತಿ ಪ್ರದಾನ
ಪುಣೆಯ ಸ್ನೇಹಲ್‌ ದೇಶಪಾಂಡೆ ಅವರಿಗೆ ಫಿಸಿಯೋ ರತ್ನ, ಡಾ| ಮಧುಲಿಕಾ ಹೊರಟ್ಟಿ ಅವರಿಗೆ ಬೆಸ್ಟ್‌ ಕ್ಲಿನಿಕಲಿಸ್ಟ್‌ ಮತ್ತು ಡಾ| ಚಂದ್ರಶೇಖರ್‌ ಕೊಡಬಗಿ ಅವರಿಗೆ ಜೀವಮಾನ ಸಾಧನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಂದಿನ ವರ್ಷದ ಸಮ್ಮೇಳನ‌ 2024ರ ಫೆ.16-17ರಂದು ಹುಬ್ಬಳ್ಳಿ-ಧಾರವಾಡದ ಡಿವಿಎಚ್‌ ಕಲಾಕ್ಷೇತ್ರದಲ್ಲಿ ಆಯೋಜಿಸಲು ತೀರ್ಮಾನಿಸಲಾಯಿತು.

ಭಾರತೀಯ ಫಿಸಿಯೋಥೆರಪಿ ಸಂಘದ ಉಪಾಧ್ಯಕ್ಷ ಡಾ| ಸುರೇಶ್‌ ಬಾಬು ರೆಡ್ಡಿ, ಅಂತಾರಾಷ್ಟ್ರೀಯ ಉಪನ್ಯಾಸಕಾರ ಸಿಂಗಾಪುರದ ಡಾ| ಸೆಂಗ್‌ ಕ್ವೀ ವೀ, ಬೆಂಗಳೂರು ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿ.ವಿ. ಸೆನೆಟ್‌ ಸದಸ್ಯರಾದ ಡಾ| ಸಾಯಿ ಕುಮಾರ್‌, ಡಾ| ಶಿವ ಶರಣ್‌ ಶೆಟ್ಟಿ, ಡಾ| ಶರಣ್‌ ಶೆಟ್ಟಿ, ಸಿಂಡಿಕೇಟ್‌ ಸದಸ್ಯ ಡಾ| ಕೆ.ವೆಂಕಟಗಿರಿ, ಸಂಘಟನ ಸಮಿತಿ ಅಧ್ಯಕ್ಷ ಡಾ| ಯು.ಟಿ. ಇಫ್ತಿಕರ್‌ ಆಲಿ ಉಪಸ್ಥಿತರಿದ್ದರು.
ಡಾ| ಭರತ್‌ ಕೆ.ಎಚ್‌. ಪ್ರಶಸ್ತಿ ಪುರಸ್ಕೃತರ ಪಟ್ಟಿ ವಾಚಿಸಿದರು. ಜಂಟಿ ಕಾರ್ಯದರ್ಶಿ ಡಾ| ಸಜೇಶ್‌ ರಘುನಾಥನ್‌ ಸ್ವಾಗತಿಸಿದರು. ಸಂಚಾಲಕಿ ಪ್ರೊ| ವೈಶಾಲಿ ನಿರೂಪಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next