Advertisement

Mangaluru: ಪಡೀಲ್‌-ಪಂಪ್‌ವೆಲ್‌ ಕಾಂಕ್ರೀಟ್‌ ರಸ್ತೆಗೆ ಹಲವು ವಿಘ್ನ

05:49 PM Sep 14, 2023 | Team Udayavani |

ಮಹಾನಗರ: ಮಂಗಳೂರು ನಗರಕ್ಕೆ ಪ್ರವೇಶ ಕಲ್ಪಿಸುವ ಪಡೀಲ್‌ -ಪಂಪ್‌ವೆಲ್‌ ನಾಲ್ಕು ಪಥದ ಕಾಂಕ್ರೀಟ್‌ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಈವರೆಗೆ ಶೇ. 50ರಷ್ಟೂ ಕೆಲಸ ಪೂರ್ಣಗೊಂಡಿಲ್ಲ. ಅರೆಬರೆ ಕಾಮಗಾರಿಯಿಂದಾಗಿ ವಾಹನ ಸವಾರಿಗೆ ತ್ರಾಸದಾಯಕವಾಗಿ ಪರಿಣಮಿಸಿದೆ. ಕಾಮಗಾರಿ ಮುಕ್ತಾಯಕ್ಕೆ ಎರಡು ವರ್ಷಗಳ ಅವಧಿ ನಿಗದಿಪಡಿಸಲಾಗಿತ್ತು.

Advertisement

ಇನ್ನೂ ಅಲ್ಲಲ್ಲಿ ಕಾಮಗಾರಿ ಬಾಕಿ ಇದ್ದು, ಪೂರ್ಣಗೊಳ್ಳಲು ಅಂದಾಜು ಆರು ತಿಂಗಳುಗಳಾದರೂ ಬೇಕು. ಇದೀಗ ಕೆಲಸಕ್ಕೆ ಮತ್ತೆ ವೇಗ ನೀಡಲು ಸ್ಮಾರ್ಟ್‌ಸಿಟಿ ನಿರ್ಧರಿಸಿದೆ. ಸುಮಾರು 2.8 ಕಿ.ಮೀ. ರಸ್ತೆ ಇದಾಗಿದ್ದು, 24 ಮೀ. ಅಗಲದ ಚತುಷ್ಪಥ ಕಾಂಕ್ರೀಟ್‌ ರಸ್ತೆ ಯಾಗಿ ಪರಿವರ್ತನೆಯಾಗಲಿದೆ. ಇದರಲ್ಲಿ 3.50 ಮೀ. ಅಗಲದ 4 ಲೇನ್‌ ಕಾಂಕ್ರೀಟ್‌ ವೇ, ರಸ್ತೆ ಇಕ್ಕೆಲದಲ್ಲಿ 3 ಮೀ. ಅಗಲದ ಇಂಟರ್‌ಲಾಕ್‌ ಅಳವಡಿಸಲಾಗುತ್ತದೆ. ರಸ್ತೆ ಇಕ್ಕೆಲದಲ್ಲಿ ಫುಟ್‌ ಪಾತ್‌, ಚರಂಡಿ, ಯುಟಿಲಿಟಿ ಡಕ್ಟ್, ರಸ್ತೆ ಮಧ್ಯೆ ಮೀಡಿಯನ್‌ ಜತೆಗೆ ದಾರಿ ದೀಪ ವ್ಯವಸ್ಥೆ ಇರುತ್ತದೆ. ಆದರೆ ಕಾಮಗಾರಿಗೆ ಪರಿಕರಗಳ ಸ್ಥಳಾಂತರವೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಜನಪ್ರತಿನಿಧಿ, ಇಲಾಖೆಗಳ ನಡುವೆ ಸಮನ್ವಯದ ಕೊರತೆಯೂ ಕಾಮಗಾರಿ ವಿಳಂಬಕ್ಕೆ ಕಾರಣ ಎಂದು ಸಾರ್ವಜನಿಕರು ದೂರುತ್ತದ್ದಾರೆ. ಯೋಜಿತ ರೀತಿಯಲ್ಲಿ ಕಾಮಗಾರಿ ನಡೆಯಲು ಹಲವಾರು ಅಡೆತಡೆಗಳು ಎದುರಾಗಿದೆ. ನಗರಕ್ಕೆ ಕುಡಿಯುವ ನೀರಿನ ಪೈಪ್‌ಲೈನ್‌ ಸ್ಥಳಾಂತರ ಯೋಜನೆ‌ಗೆ ಹಿನ್ನಡೆ ಉಂಟಾಗಿತ್ತು. ಇದಕ್ಕಾಗಿ ವಿನ್ಯಾಸದಲ್ಲಿಯೂ ಕೊಂಚ ಬದಲಾವಣೆ ಮಾಡ
ಬೇಕಾಯಿತು. ಜಲಸಿರಿ ಯೋಜನೆಯ ಪೈಪ್‌ಲೈನ್‌ ಜಾಗ ದಲ್ಲಿಯೂ ಭೂಸ್ವಾಧೀನ ಬಾಕಿ ಇತ್ತು.

ನಾಗುರಿ ಸೇರಿದಂತೆ ಕೆಲವೊಂದು ಪ್ರದೇಶಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬವೂ ಕಾಮಗಾರಿ ಪೂರ್ಣಗೊಳ್ಳಲು ವಿಳಂಬಕ್ಕೆ
ಕಾರಣವಾಗಿತ್ತು. ಅಧಿಕಾರಿಗಳ ಪ್ರಕಾರ ಸದ್ಯ ಸಮಸ್ಯೆಗಳು ಪರಿಹಾರಗೊಂಡಿದ್ದು, ಸದ್ಯದಲ್ಲೇ ಕಾಮಗಾರಿಗೆ ಮತ್ತಷ್ಟು ವೇಗ
ನೀಡಲಾಗುತ್ತದೆ ಎನ್ನುತ್ತಾರೆ.

ರಸ್ತೆ ಪೂರ್ಣಗೊಂಡರೆ ಅನುಕೂಲ
ಪಡೀಲ್‌-ಪಂಪ್‌ವೆಲ್‌ ರಸ್ತೆಗೆ ಕಾಂಕ್ರೀಟ್‌ ಕಾಮಗಾರಿ ನಡೆದರೆ ಪಂಪ್‌ ವೆಲ್‌ನಲ್ಲಿ ಹೊಸದಾಗಿ ನಿರ್ಮಾಣಕ್ಕೆ ಯೋಚಿಸಿರುವ ಬಸ್‌ ಟರ್ಮಿನಲ್‌ ಗೆ ತೆರಳುವ ವಾಹನಗಳಿಗೆ ಹೆಚ್ಚು ಅನುಕೂಲವಾಗಲಿದೆ. ಪಡೀಲ್‌ನಲ್ಲಿ ಹೊಸದಾಗಿ ದ.ಕ. ಜಿಲ್ಲಾಧಿಕಾರಿ ಕಚೇರಿ
ಸಂಕೀರ್ಣ ನಿರ್ಮಾಣವಾಗುತ್ತಿರುವ ಕಾರಣ ಈ ರಸ್ತೆಯಲ್ಲಿ ಮುಂದೆ ವಾಹನಗಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೂ ಇದರಿಂದ ಸಹಾಯವಾಗಲಿದೆ. ಮಂಗಳೂರು, ತಲಪಾಡಿ, ಬೆಂಗಳೂರು, ಬಿ.ಸಿ.ರೋಡ್‌ ಭಾಗದಿಂದ ಪಡೀಲ್‌ ರಸ್ತೆಯಲ್ಲಿ ಬರುವ ವಾಹನದವರಿಗೆ ಹೆಚ್ಚು ಅನುಕೂಲವಾಗಲಿದೆ.

Advertisement

ಯೋಜನ ವೆಚ್ಚ ಹೆಚ್ಚಳ ಸಾಧ್ಯತೆ
ಪಡೀಲ್‌-ಪಂಪ್‌ವೆಲ್‌ ನಡುವಣ ಕಾಂಕ್ರೀಟ್‌ ರಸ್ತೆ ಕಾಮಗಾರಿ ಯೋಜನ ವೆಚ್ಚ ಒಟ್ಟು 26 ಕೋಟಿ ರೂ. ಆಗಿದ್ದು, ರಾಜ್ಯ ಸರಕಾರ ಪೂರಕ ಕೆಲಸಗಳಿಗಾಗಿ 4 ಕೋಟಿ ರೂ. ಒದಗಿಸಲಿದೆ. ಆದರೂ ಕಾಮಗಾರಿ ವಿಳಂಬ  ಸಹಿತ ಯೋಜನೆ ಪೂರ್ಣಗೊಳಿಸಲು ಮತ್ತಷ್ಟು ಅನುದಾನ ಬೇಕಾಗಬಹುದು. ಇನ್ನೂ ಮೂರರಿಂದ ನಾಲ್ಕು ಕೋಟಿ ರೂ. ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು.

ಆರು ತಿಂಗಳೊಳಗೆ ಪೂರ್ಣ ಪಡೀಲ್‌-ಪಂಪ್‌ವೆಲ್‌ ನಡುವಣ ನಾಲ್ಕು ಪಥದ ಕಾಂಕ್ರೀಟ್‌ ರಸ್ತೆ ಕಾಮಗಾರಿ ಈಗಾಗಲೇ
ಪ್ರಗತಿಯಲ್ಲಿದೆ. ರಸ್ತೆ ಕೆಲಸಕ್ಕೆ ವೇಗ ನೀಡಲು ಭೂಸ್ವಾಧೀನ ಸೇರಿದಂತೆ ಹಲವಾರು ಸಮಸ್ಯೆಗಳಿದ್ದವು. ಇದೀಗ ಅವು ಪರಿಹಾರಗೊಂಡಿದ್ದು, ಕೆಲಸಕ್ಕೆ ವೇಗ ನೀಡಲಾಗುತ್ತದೆ. ಸುಮಾರು ಆರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಅರುಣ್‌ಪ್ರಭ, ಸ್ಮಾರ್ಟ್‌, ಸಿಟಿ ಜನರಲ್‌ ಮ್ಯಾನೇಜರ್‌

‌*ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next