Advertisement

Mangaluru ಎಂಡಿಎಂಎ ಡ್ರಗ್ಸ್‌ ಸಹಿತ ನೈಜೀರಿಯಾದ ಮಹಿಳೆಯ ಬಂಧನ

08:41 PM Sep 02, 2023 | Team Udayavani |

ಮಂಗಳೂರು: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್‌ ಜಾಲದ ಕಿಂಗ್‌ಪಿನ್‌ ನೈಜೀರಿಯಾ ಮೂಲದ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಆಡೆವೊಲೆ ಅಡೆಟುಟು ಆನು ಆಲಿಯಾಸ್‌ ರೆಜನಾ ಜರಾ ಆಲಿಯಾಸ್‌ ಆಯಿಶಾ(33) ಬಂಧಿತ ಮಹಿಳೆ. ಈಕೆಯ ವಶದಿಂದ 20 ಲ.ರೂ. ಮೌಲ್ಯದ 400 ಗ್ರಾಂ ತೂಕದ ಮಾದಕ ವಸ್ತು ಎಂಡಿಎಂಎ ವಶಕ್ಕೆ ಪಡೆದುಕೊಳ್ಳಲಾಗಿದೆ.

ಸಿಸಿಬಿ ಪೊಲೀಸರು ಮಂಗಳೂರಿನಲ್ಲಿ ಇತ್ತೀಚೆಗೆ ಪ್ರಮುಖ ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಎಂಡಿಎಂಎನ್ನು ವಶಪಡಿಸಿಕೊಂಡಿದ್ದರು. ಅವರ ವಿಚಾರಣೆ ವೇಳೆ ಈಕೆಯ ಮಾಹಿತಿ ಲಭ್ಯವಾಗಿತ್ತು. ಈಕೆ ಬೆಂಗಳೂರಿನ ಜಕ್ಕೂರು ಚೊಕ್ಕನಹಳ್ಳಿ ಮುಖ್ಯರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಳು.

ವಿದ್ಯಾಭ್ಯಾಸಕ್ಕಾಗಿ ಬಂದಿದ್ದಳು
ಈಕೆ ವ್ಯಾಸಂಗ ವೀಸಾದಡಿಯಲ್ಲಿ ಭಾರತಕ್ಕೆ ಬಂದು ವಿದ್ಯಾಭ್ಯಾಸ ಮಾಡಿಕೊಂಡು ಅನಂತರ ಇಲ್ಲಿ ಸ್ವಲ್ಪ ಸಮಯ ನರ್ಸಿಂಗ್‌ ಕೆಲಸ ಮಾಡಿಕೊಂಡಿದ್ದಳು. ಬಳಿಕ ನರ್ಸಿಂಗ್‌ ಕೆಲಸ ಬಿಟ್ಟು ಮಾದಕ ವಸ್ತುಗಳ ಮಾರಾಟ ದಂಧೆ ನಡೆಸುತ್ತಿದ್ದಳು. ಉಳ್ಳಾಲ, ಸೆನ್‌ ಪೊಲೀಸ್‌ ಠಾಣೆ, ಮಂಗಳೂರು ಉತ್ತರ, ಕಂಕನಾಡಿ ನಗರ, ಕೊಣಾಜೆ, ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ 7 ಡ್ರಗ್ಸ್‌ ಪ್ರಕರಣದ ಆರೋಪಿಗಳು ಈಕೆಯಿಂದಲೇ ಡ್ರಗ್ಸ್‌ ಖರೀದಿಸಿದ್ದರು. ಈಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಆರ್‌.ಜೈನ್‌ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಪಿ.ಎ ಹೆಗಡೆ, ಪೊಲೀಸ್‌ ನಿರೀಕ್ಷಕ ಶ್ಯಾಮ್‌ ಸುಂದರ್‌ ಎಚ್‌.ಎಂ, ಪಿಎಸ್‌ಐಯವರಾದ ರಾಜೇಂದ್ರ ಬಿ, ಶರಣಪ್ಪ ಭಂಡಾರಿ, ಸುದೀಪ್‌ ಎಂ ವಿ, ನರೇಂದ್ರ ಹಾಗೂ ಸಿಸಿಬಿ ಸಿಬಂದಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next