Advertisement

Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!

01:33 PM Oct 06, 2024 | Team Udayavani |

ಮಹಾನಗರ: ಭಕ್ತಿಗೆ, ಶರಣಾಗತಿಗೆ ದೇವರು ಒಲಿಯುತ್ತಾರೆ ಎಂದು ಕೇಳಿದ್ದೇವೆ. ಅದೇ ಹೊತ್ತಿಗೆ ಭಕ್ತಿ ಮತ್ತು ಕಲೆಗಾರಿಕೆಗೆ ದೇವರೇ ಜೀವ ತಳೆದುಬರುತ್ತಾರೆ ಕೂಡ! ‘ಮಂಗಳೂರು ದಸರಾ’ ಎಂದು ಪ್ರಸಿದ್ಧಿ ಪಡೆದಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದರ್ಬಾರ್‌ ಮಂಟಪದಲ್ಲಿ ಪ್ರತಿಷ್ಠಾ ಪಿಸಲ್ಪಡುವ ಮಹಾಗಣಪತಿ, ಆದಿಶಕ್ತಿ, ಶಾರದಾ ಮಾತೆ, ನವದುರ್ಗೆಯರ ಮೂರ್ತಿಗಳು ನೋಡಿದರೆ ಇದು ಸತ್ಯ ಎನಿಸುತ್ತದೆ. ಇಲ್ಲಿ ಕಲೆ ಮತ್ತು ಭಕ್ತಿ ಬೆರೆತು ಸುಂದರವಾದ ಮೂರ್ತಿಗಳು ನಿರ್ಮಾಣಗೊಂಡು ಎಲ್ಲರ ಕಣ್ಮನ ಸೆಳೆಯುತ್ತಿವೆ.

Advertisement

ಈ ಮೂರ್ತಿಗಳ ರಚನೆ ನಾಗರಪಂಚಮಿ ಬೆನ್ನಿಗೇ ಆರಂಭವಾಗುತ್ತದೆ. ಏಳು ವರ್ಷಗಳಿಂದ ಈ ಮೂರ್ತಿಗಳ ತಯಾರಿ ನಡೆಸುತ್ತಿಳರುವುದು ವಿಗ್ರಹ ಶಿಲ್ಪಿ ಕುಬೇರ ಶಿವಮೊಗ್ಗ ನೇತೃತ್ವದ ಸುಮಾರು 20 ಮಂದಿಯ ತಂಡ. ಅವರ ಶ್ರಮ, ಕಲಾವಂತಿಕೆ ಮತ್ತು ಭಕ್ತಿ ಪ್ರತಿಯೊಂದು ಮೂರ್ತಿಯನ್ನೂ ಜೀವಂತಗೊಳಿಸಿದೆ.

ತಯಾರಿ ಹೇಗೆ ನಡೆಯುತ್ತದೆ?
ಮೂರ್ತಿ ರಚನೆಯ ಬಗ್ಗೆ ‘ಉದಯವಾಣಿ ಸುದಿನ’ ಜತೆ ಮಾತನಾಡಿದ ತಂಡದ ಮುಖ್ಯಸ್ಥ ಕುಬೇರ ಶಿವಮೊಗ್ಗ ಅವರು, ಮೂರ್ತಿ ರಚನೆಗೆ ಬೇಕಾದ ಕಚ್ಚಾವಸ್ತುಗಳಲ್ಲಿ ಕೆಲವನ್ನು ಊರಿನಿಂದ ತರುತ್ತೇವೆ. ಕೆಲವು ವಸ್ತುಗಳನ್ನು ಸ್ಥಳೀಯವಾಗಿಯೇ ಖರೀದಿಸುತ್ತೇವೆ. ಮುಖ್ಯವಾಗಿ 70-80 ಬ್ಲಾಕ್‌ ಆವೆ ಮಣ್ಣು, 13-15 ಕಟ್ಟು ಬೈ ಹುಲ್ಲು, ಸುಮಾರು 10 ಚೀಲದಷ್ಟು ಬತ್ತದ ಹೊಟ್ಟು (ಉಮಿ), ತೆಂಗಿನ ನಾರು ಹಗ್ಗ, ಮರದ ಕಂಬಗಳು ಬೇಕಾಗಿದ್ದು, ನೈಸರ್ಗಿಕ ಬಣ್ಣವನ್ನು ಬಳಸಲಾಗುತ್ತದೆ.

ಗಣಪತಿ ಮೂರ್ತಿಯಿಂದ ಆರಂಭ
ಗಣಪತಿ ಮೂರ್ತಿಯಿಂದ ಆರಂಭಿಸಿ, ಬಳಿಕ ಹಂತ ಹಂತವಾಗಿ ಇತರ ಮೂರ್ತಿಗಳ ರಚನೆ ನಡೆಯುತ್ತದೆ. ಮರದ ಕಂಬಗಳನ್ನು ಇಟ್ಟು ಆಧಾರವನ್ನು ನಿರ್ಮಿಸಿ ಬೈ ಹುಲ್ಲಿನಿಂದ ಮೂಲ ರಚನೆ ಮಾಡಿ, ಮಣ್ಣು- ಉಮಿ ಬಳಸಿ ಶೇಪ್‌ ಮಾಡಿ ಮುಖ, ಕೈಗಳನ್ನು ರಚಿಸಲಾಗುತ್ತದೆ. ಕೊನೆಯದಾಗಿ ಲಾಂಪಿಯ ಮೂಲಕ ಅಂತಿಮ ಸ್ಪರ್ಶ ನೀಡಲಾಗುತ್ತದೆ. ಸುಮಾರು 40 ದಿನಗಳ ಕಾಲ ನಿರಂತರ ಕೆಲಸದ ಬಳಿಕ ಮೂರ್ತಿಗಳು ಸಿದ್ಧವಾಗುತ್ತವೆ.

Advertisement

ಸಹಾಯಕನಾಗಿದ್ದವ ಇಂದು ಸಾರಥಿ
ಗುರುಗಳಾದ ರಾಜಶೇಖರ್‌ ಅವರೊಂದಿಗೆ 2009ರಲ್ಲಿ ಕುದ್ರೋಳಿಗೆ ಬಂದು ಸಹಾಯಕನಾಗಿ ಕೆಲಸ ಮಾಡಿ ಈಗ ಮುಖ್ಯ ಕಲಾವಿದನಾಗಿರುವುದಕ್ಕೆ ಅವರ ಆಶೀರ್ವಾದವೂ ಇದೆ. 2009ರಿಂದ 2013ರ ವರೆಗೆ ರಾಜಶೇಖರ್‌ ಅವರೊಂದಿಗೆ ಸಹಾಯಕನಾಗಿ ಕೆಲಸ ಮಾಡಿದ್ದೆ. 2014-17ರ ವರೆಗೆ ಸುಧೀರ್‌ ಅಚಾರ್ಯ ಅವರು ಮುಖ್ಯ ಕಲಾವಿದರಾಗಿದ್ದರು. 2018ರಿಂದ ಜವಾಬ್ದಾರಿ ವಹಿಸಿಕೊಂಡು ಹೊಸ ತಂಡದೊಂದಿಗೆ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ ಕುಬೇರ.

ಶಾರದೆಯ ಜಲ್ಲಿಗೆ 50 ಅಟ್ಟಿ ಮಲ್ಲಿಗೆ!
ಕಲಾವಿದರು ನಿರ್ಮಿಸಿ ಕೊಡುವ ಶಾರದೆಗೆ ವಿಶೇಷ ಅಲಂಕಾರ ಮಾಡಲು, ಅದರಲ್ಲೂ ವಿಜಯ ದಶಮಿ ದಿನ ‘ಮಲ್ಲಿಗೆಯ ಜಲ್ಲಿ’ ಹಾಕಲು ನುರಿತ ಮಹಿಳೆಯರ ತಂಡವಿದೆ. ರಾಧಿಕಾ ಕುಡ್ವ ಅವರ ನೇತೃತ್ವದಲ್ಲಿ ಶ್ರದ್ಧಾ ಅಶ್ವಿ‌ನ್‌ ಪ್ರಭು, ಗೀತಾ ಪ್ರಭು, ವೀಣಾ ಪೈ, ಮಮತಾ ಅನಿಲ್‌ ಮತ್ತು ಬಳಗದವರು ಈ ಸೇವೆ ಮಾಡುತ್ತಾರೆ. ಉದಯವಾಣಿ ‘ಸುದಿನ’ ಜತೆ ಮಾತನಾಡಿದ ರಾಧಿಕಾ ಕುಡ್ವ ಅವರು, ಶಾರದೆಯ ಮುಡಿಗೆ ಜಲ್ಲಿ ಮುಡಿಯುವ ಪುಣ್ಯ ಕಾರ್ಯವನ್ನು 14 ವರ್ಷದಿಂದ ಮಾಡುತ್ತಿದ್ದೇವೆ. ಉಡುಪಿ ಹಾಗೂ ಸ್ಥಳೀಯವಾದ 50ಕ್ಕೂ ಹೆಚ್ಚು ಅಟ್ಟಿ ಮಲ್ಲಿಗೆಯನ್ನು ಶಾರದೆಗೆ ಮುಡಿದು, ಅಲಂಕಾರ ಮಾಡಲು 3-4 ಗಂಟೆ ಬೇಕಾಗುತ್ತದೆ. ಶಾರದೆಯ ಹತ್ತಿರದಲ್ಲಿ ನಿಂತು ಅಲಂಕಾರ ಮಾಡುವುದೇ ಒಂದು ಭಾಗ್ಯ. ಇದು ನಾಜೂಕಿನ ಕೆಲಸವೂ ಹೌದು. ಉಚ್ಚಿಲದ ದಸರಾದಲ್ಲಿಯೂ ಶಾರದೆಯ ಅಲಂಕಾರ ಜವಾಬ್ದಾರಿಯನ್ನು ನಮಗೇ ವಹಿಸಿದ್ದಾರೆ ಎಂದರು.

ಆಧ್ಯಾತ್ಮಿಕ ಗುರುಗಳಾಗಿರುವ ಶಿವಮೊಗ್ಗ ಜಿಲ್ಲೆ ಗೋಣಿ ಬೀಡುವಿನ ಶ್ರೀಮನ್‌ಮಹಾತಪಸ್ವಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಆಶೀರ್ವಾದ ಪಡೆದು ಕೆಲಸ ಕಾರ್ಯ ಆರಂಭಿಸುತ್ತೇವೆ. ಪೀಠ ಪೂಜೆ ಮಾಡುವಾಗಲೇ ಮೂರ್ತಿಗಳು ಹೀಗೇ ಬರಬೇಕು ಎಂದು ಮನಸ್ಸಿನಲ್ಲಿ ಚಿತ್ರಣ ಮೂಡುತ್ತದೆ. ಕ್ಷೇತ್ರದ ಆಡಳಿತ ಮಂಡಳಿಯ ಸಹಕಾರದಿಂದ ನಿಗದಿತ ಅವಧಿಯೊಳಗೆ ಮೂರ್ತಿ ರಚನೆ ಸಾಧ್ಯವಾಗಿದೆ.
– ಕುಬೇರ ಶಿವಮೊಗ್ಗ ವಿಗ್ರಹ ಶಿಲ್ಪಿ, ಶ್ರೀಗುರು ಕಲಾಮಂದಿರ

ವ್ರತನಿಯಮಗಳ ಪಾಲನೆ
ಮೂರ್ತಿ ರಚನೆ ಮಾಡುವ ಕಲಾವಿದರು ನಿತ್ಯ ವ್ರತ ನಿಯಮಗಳನ್ನು ಪಾಲಿಸುತ್ತಾರೆ. ಬೆಳಗ್ಗೆ ಸ್ನಾನ-ಜಪ-ದೇವರ ಪ್ರಾರ್ಥನೆ ಮಾಡಿಯೇ ಕೆಲಸ ಆರಂಭ. ಮೂರ್ತಿ ರಚನೆ ಮಾಡುವಾಗಲೂ ದೇವರ ಹಾಡುಗಳನ್ನೇ ಕೇಳುತ್ತಾರೆ. ಸಾತ್ವಿಕ ಆಹಾರ ಸೇವಿಸುತ್ತಾರೆ. ಬೆಳಗ್ಗೆ 10 ಗಂಟೆಗೆ ಆರಂಭಿಸಿ ತಡರಾತ್ರಿ 3-4 ಗಂಟೆಯ ವರೆಗೂ ಕೆಲಸ ಮಾಡುತ್ತಾರೆ. ಉಚ್ಚಿಲ ದಸರಾದ ನವದುರ್ಗೆಯವರ ಮೂರ್ತಿಗಳನ್ನೂ ಇದೇ ತಂಡ ನಿರ್ಮಿಸಿದೆ.

-ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next