Advertisement

Mangaluru ಪರಸ್ಪರ ಹಲ್ಲೆ; ಪ್ರತ್ಯೇಕ ದೂರು ದಾಖಲು

12:15 AM May 27, 2024 | Team Udayavani |

ಮಂಗಳೂರು: ಎರಡು ಕಾರುಗಳಲ್ಲಿ ಸಾಗುತ್ತಿದ್ದ ಯುವಕರು ನಗರದ ಯೆಯ್ಯಾ ಡಿ ಬಳಿ ಶನಿವಾರ ತಡರಾತ್ರಿ ಪರಸ್ಪರ ಗಲಾಟೆಯಲ್ಲಿ ತೊಡಗಿ ಹಲ್ಲೆ ನಡೆಸಿರುವುದಕ್ಕೆ ಸಂಬಂಧಿಸಿ ಎರಡು ಪ್ರತ್ಯೇಕ ದೂರುಗಳು ಮಂಗಳೂರು ಪೂರ್ವ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.

Advertisement

ಅಶಿಶ್‌ ಅವರು ದಾಖಲಿಸಿರುವ ದೂರಿನಲ್ಲಿ, ಅವರು ಸ್ನೇಹಿತ ಗುರುರಾಜ್‌ ಅವರೊಂದಿಗೆ ಉರ್ವ ಮೈದಾನದಲ್ಲಿ ಕ್ರಿಕೆಟ್‌ ಪಂದ್ಯಾಟವನ್ನು ವೀಕ್ಷಿಸಿ, ಶನಿವಾರ ತಡರಾತ್ರಿ 2 ಗಂಟೆಗೆ ಕಾರಿನಲ್ಲಿ ರಾ.ಹೆ. 66ರ ಪದವು ಜಂಕ್ಷನ್‌ ತಲುಪುತ್ತಿದ್ದಂತೆ ನಂತೂರು ಕಡೆಯಿಂದ ಬಂದ ಕಾರೊಂದು ಏಕಾಏಕಿ ಶರಬತ್‌ ಕಟ್ಟೆ ಕಡೆಗೆ ತಿರುಗಿದೆ. ಈ ವೇಳೆ ಅವರು ತಮ್ಮ ಕಾರನ್ನು ನಿಲ್ಲಿಸಿದಾಗ ಆ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ಅಸಭ್ಯವಾಗಿ ಬೆರಳು ತೋರಿಸಿದ್ದಾನೆ. ನೋಂದಣಿ ಸಂಖ್ಯೆಯನ್ನು ನೋಡಲು ಹಿಂಬಾಲಿಸಿಕೊಂಡು ಹೋಗುವಾಗ ಅಲ್ಲಿನ ದೇವಸ್ಥಾನವೊಂದರ ಬಳಿ ಆ ಕಾರು ನಿಂತಿದ್ದು, ಅದರ ಬಳಿ ಹೋದಾಗ ವ್ಯಕ್ತಿಯೊಬ್ಬ ಗುರುರಾಜ್‌ ಮೇಲೆ ಹಲ್ಲೆಗೆ ಯತ್ನಿಸಿದನು. ಅಲ್ಲಿಂದ ತಪ್ಪಿಸಿಕೊಂಡು ಮುಂದಕ್ಕೆ ಹೋದಾಗ ಶರಬತ್‌ ಕಟ್ಟೆ ಮತ್ತೆ ಕಾರು ನಿಂತಿದ್ದು, ಪ್ರಶ್ನಿಸಲು ಹೋದಾಗ ವ್ಯಕ್ತಿಯೊಬ್ಬ ಡ್ಯಾಗರ್‌ನಲ್ಲಿ ಗುರುರಾಜ್‌ ಅವರ ಕಿಬ್ಬೊಟ್ಟಿಗೆ ತಿವಿದಿದ್ದಾನೆ.

ದೂರುದಾರರಿಗೂ ತೋರು ಬೆರಳಿಗೆ ಗಾಯವಾಗಿದೆ. ಈಬಗ್ಗೆ ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಿದ್ದು, ಗುರುರಾಜ್‌ ಒಳರೋಗಿಯಾಗಿ ದಾಖಲಾಗಿದ್ದಾರೆ. ಕೊಲ್ಲುವ ಉದ್ದೇಶದಿಂದ ಡ್ಯಾಗರ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಇನ್ನೊಂದು ಕಾರಿನಲ್ಲಿದ್ದವರು ಪ್ರತಿದೂರು ದಾಖಲಿಸಿದ್ದಾರೆ. ಶನಿವಾರ ರಾತ್ರಿ ಕಂಕನಾಡಿಯ ಲೈಲ್‌ ರೆಬೆಲ್ಲೋ ಅವರ ಮನೆಗೆ ಹೋಗಿ ಮರಳಿ ಬರುತ್ತಿರುವಾಗ ಪದವು ಜಂಕ್ಷನ್‌ ಬಳಿ ತಲುಪುತ್ತಿದ್ದಂತೆ ಹೆದ್ದಾರಿಯಲ್ಲಿ ಕೆಪಿಟಿ ಕಡೆಯಿಂದ ಬಂದ ಕಾರು ಹಾರ್ನ್ ಹಾಕಿದೆ. ಶರ್ಬತ್‌ ಕಟ್ಟೆ ಕಡೆಗೆ ಸಾಗುವ ರಸ್ತೆಯಲ್ಲಿ ಕಾರು ನಿಲ್ಲಿಸಿ ವಿಚಾರಿಸಿದಾಗ ಆ ಕಾರಿನಲ್ಲಿದ್ದವರು ಅವಾಚ್ಯವಾಗಿ ಬೈದಿದ್ದಾರೆ. ಹಿಂಬಾಲಿಸಿಕೊಂಡು ಬಂದು ಯೆಯ್ನಾಡಿ ರಸ್ತೆಯಲ್ಲಿ ಓವರ್‌ಟೇಕ್‌ ಮಾಡಿ ಅಡ್ಡಹಾಕಿ ನಿಲ್ಲಿಸಿದರು. ಆಗ ಕಾರಿನಿಂದ ಇಳಿದ ವ್ಯಕ್ತಿಗಳು ಡ್ರೈವರ್‌ ಸೀಟ್‌ನಲ್ಲಿದ್ದ ಲೈಲ್‌ ರೆಬೆಲ್ಲೋ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು ಹೊಡೆದಿದ್ದಾರೆ. ಯಾವುದೋ ವಸ್ತುವಿನಿಂದ ಹೊಡೆದ ಕಾರಣ ಅವರ ಮುಖದಲ್ಲಿ ರಕ್ತ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next