Advertisement

ಮಂಗಳೂರು ಪಾಲಿಕೆ ವಾರ್ಡ್‌: “ಆಸ್ತಿ ಸರ್ವೇ’ಗೆ ಪ್ರಸ್ತಾವ

12:01 AM Dec 20, 2022 | Team Udayavani |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಖಾಸಗಿ ಹಾಗೂ ಸರಕಾರಿ ಆಸ್ತಿಗಳನ್ನು ಸಮಗ್ರವಾಗಿ ಸರ್ವೇ ನಡೆಸುವ ಮಹತ್ವದ ಯೋಜನೆಗೆ ಅನುಮತಿ ನೀಡುವಂತೆ ಸರಕಾರಕ್ಕೆ ಪಾಲಿಕೆ ಯಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ.

Advertisement

ನೇತ್ರಾವತಿ ಹಾಗೂ ಫಲ್ಗುಣಿ ನದಿ ತೀರಕ್ಕೆ ಹೊಂದಿಕೊಂಡಿರುವ ಸುಮಾರು 20 ವಾರ್ಡ್‌ ವ್ಯಾಪ್ತಿಯಲ್ಲಿ ಈಗಾಗಲೇ ಸಂಪೂರ್ಣ ಸರ್ವೇ ನಡೆಸಲಾಗಿದೆ. ನದಿ ಬದಿ ವ್ಯಾಪ್ತಿಯಲ್ಲಿ ಸ್ಮಾರ್ಟ್‌ಸಿಟಿ ಹಾಗೂ ಇತರ ಯೋಜನೆಯ ಕಾಮಗಾರಿ ಹಮ್ಮಿಕೊಳ್ಳಲು ಅನುಕೂಲವಾಗುವ ನೆಲೆಯಲ್ಲಿ ಸಂಪೂರ್ಣ ಸರ್ವೇ ನಡೆಸಲಾಗಿದೆ. ಇದನ್ನು ಪಾಲಿಕೆಯ ಉಳಿದ ವಾರ್ಡ್‌ ವ್ಯಾಪ್ತಿಗಳಿಗೂ ವಿಸ್ತರಿಸುವ ನಿಟ್ಟಿನಲ್ಲಿ ಸರಕಾರದ ಒಪ್ಪಿಗೆ ನಿರೀಕ್ಷಿಸಲಾಗಿದೆ.

ಪಾಲಿಕೆಯು ತೆರಿಗೆ ಸಂಗ್ರಹದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗುವುದು,ಮಂಗಳೂರಿನ ಸಮಗ್ರ ಮಾಹಿತಿಯುಕ್ತ ದಾಖಲೆ ಸಿದ್ಧಪಡಿಸುವ ಉದ್ದೇಶದಿಂದ ಸರ್ವೇ ನಡೆಸಲು ಚಿಂತಿಸಲಾಗಿದೆ. ಇದರಲ್ಲಿ ಖಾಸಗಿ, ಸರಕಾರಿ ಆಸ್ತಿಗಳನ್ನು (ಮನೆ, ನಿವೇಶನ, ವಾಣಿಜ್ಯ ಕಟ್ಟಡ, ಕೈಗಾರಿಕೆ ಕಟ್ಟಡ ಇತ್ಯಾದಿ) ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಸಂಬಂಧ ಜಿಪಿಎಸ್‌ ಆಧಾರಿತವಾಗಿ ಸರ್ವೇ ನಡೆಯಲಿದೆ.

ಸದ್ಯ ಪ್ರಶ್ನೆಗೆ ಉತ್ತರವಿಲ್ಲ!
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು ಆಸ್ತಿ ಎಷ್ಟು? ಎಷ್ಟು ತೆರಿಗೆ ನಿರೀಕ್ಷೆ? ಎಷ್ಟು ಕಟ್ಟಡಗಳಿವೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಪಾಲಿಕೆಯಲ್ಲಿ ವೈಜ್ಞಾನಿಕ ದಾಖಲೆಗಳಿಲ್ಲ. ಸದ್ಯ ಇರುವುದೆಲ್ಲವೂ ಹಳೆಯ ಕಾಲದಲ್ಲಿ ಲೆಕ್ಕ ಹಾಕಿದ ವಿವರಗಳು ಮಾತ್ರ. ಇದರ ಮಾನದಂಡವನ್ನು ಬಳಸಿ ಇದೀಗ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ಆದರೆ ಈಗ ಮಂಗಳೂರು ಸಾಕಷ್ಟು ಬದಲಾಗಿದ್ದು, ಕಟ್ಟಡಗಳ ಸಂಖ್ಯೆ/ಮನೆಗಳ ಸಂಖ್ಯೆಯಲ್ಲಿ ಏರಿಕೆ ಯಾಗಿದ್ದರೂ ತೆರಿಗೆ ಸಂಗ್ರಹದಲ್ಲಿ ಗಣನೀಯ ಏರಿಕೆ ಆಗಲಿಲ್ಲ ಎಂಬುದು ವಿಶೇಷ. ಹೀಗಾಗಿ ಆಸ್ತಿ ಸರ್ವೇ ನಡೆಸಲು ಉದ್ದೇಶಿಸಲಾಗಿದೆ.

ಹಳೆಯ ಕ್ರಮದಲ್ಲಿ ತೆರಿಗೆ ಸಂಗ್ರಹದಲ್ಲಿ ಕೆಲವು ಆಸ್ತಿ/ಮನೆ ಬಿಟ್ಟುಹೋಗಿದ್ದರೆ/ಹೊಸದಾಗಿ ನಿರ್ಮಾಣಗೊಂಡಿದ್ದರೆ/ ಹಿಂದೆ ಇರುವುದಕ್ಕೆ ಸೇರ್ಪಡೆಗೊಂಡಿದ್ದರೆ ಅವುಗಳನ್ನು ಸರ್ವೇ ವ್ಯಾಪ್ತಿಯಲ್ಲಿ ಪರಿಗಣಿಸಲಾಗುತ್ತದೆ. ಸದ್ಯ 20 ವಾರ್ಡ್‌ ವ್ಯಾಪ್ತಿಯಲ್ಲಿ ಆಗಿರುವ ಸರ್ವೇ ಮುಂದೆ ಉಳಿದ 40 ವಾರ್ಡ್‌ಗಳಿಗೂ ವಿಸ್ತರಣೆಯಾಗಲಿದೆ.

Advertisement

ಮನೆ, ಕಟ್ಟಡಗಳ ಸರ್ವೇ
ಆಸ್ತಿ ಸರ್ವೇ ಮೂಲಕ ಮಂಗಳೂರು ಪಾಲಿಕೆಯ ಒಟ್ಟು ಆಸ್ತಿ, ಗಡಿ ಪ್ರದೇಶ ಸಹಿ ತ ಒಟ್ಟು ವಿವರಗಳು ಇದರ ಮೂಲಕ ದೊರೆಯಲಿದೆ. ಒಂದೊಂದು ತಂಡಗಳು ಪ್ರತೀ ಮನೆ ಮನೆಗೆ ಹಾಗೂ ಕಟ್ಟಡಗಳಿಗೆ ಭೇಟಿ ಮಾಡಿ ಸರ್ವೇ ನಡೆಸಲಿದ್ದಾರೆ. ಮನೆಯ ಸರ್ವೇ ನಂಬರ್‌/ ಮನೆ ನಂಬರ್‌/ಆಸ್ತಿ ವಿವರ/ತೆರಿಗೆ ವಿವರ/ನೀರಿನ ಮೀಟರ್‌ ವಿವರ ಹೀಗೆ ಎಲ್ಲ ವಿವರಗಳನ್ನು ಡಾಟಾ ಮೂಲಕ ನಮೂದಿಸಲಾಗುತ್ತದೆ. ಪಾಲಿಕೆ ವ್ಯಾಪ್ತಿಯ ಪ್ರತೀ ಮನೆಯಲ್ಲೂ ಈ ಸರ್ವೇ ನಡೆದು ಅಂತಿಮವಾಗಿ ಇದರ ವರದಿಯನ್ನು ಪಾಲಿಕೆಗೆ ನೀಡುವುದು ಯೋಜನೆ ಉದ್ದೇಶ.

ಸಮಗ್ರ ಮಾಹಿತಿ ಸಂಗ್ರಹ ಉದ್ದೇಶ
ನಗರದ 20 ವಾರ್ಡ್‌ ವ್ಯಾಪ್ತಿಯಲ್ಲಿ ಈಗಾಗಲೇ ಸರ್ವೇ ನಡೆದಿದೆ. ಇದನ್ನು ಉಳಿದ ವಾರ್ಡ್‌ ವ್ಯಾಪ್ತಿಯಲ್ಲಿಯೂ ಜಾರಿಗೊಳಿಸುವಂತೆ ಈಗಾಗಲೇ ಸರಕಾರದ ಗಮನಸೆಳೆಯಲಾಗಿದೆ. ಈ ಮೂಲಕ ಮಂಗಳೂರು ನಗರ ವ್ಯಾಪ್ತಿಯ ಸಂಪೂರ್ಣ ಆಸ್ತಿ ಸಹಿತ ಕಟ್ಟಡಗಳ ಕುರಿತಂತೆ ಸಮಗ್ರ ಮಾಹಿತಿ ಸಂಗ್ರಹಿಸಲಾಗುವುದು.
– ಅಕ್ಷಯ್‌ ಶ್ರೀಧರ್‌, ಆಯುಕ್ತರು, ಮನಪಾ

Advertisement

Udayavani is now on Telegram. Click here to join our channel and stay updated with the latest news.

Next