ಮಂಗಳೂರು: ಎಂ.ಎಂ.ಎಂ. ಗ್ರೂಪ್ಸ್ ಬ್ಯಾನರ್‌ನಡಿ ನಿರ್ಮಾಣವಾದ “ಮಿಸ್ಟರ್ ಮದಿಮಯೆ’ ತುಳು ಸಿನೆಮಾ ಶುಕ್ರವಾರ ಮಂಗಳೂರಿನ ಬಿಗ್ ಸಿನೆಮಾಸ್, ಸಿನೆಪೊಲಿಸ್, ಪಿವಿಆರ್, ಸುರತ್ಕಲ್‌ನ ಸಿನೆಗ್ಯಾಲಕ್ಸಿ, ಪಡುಬಿದ್ರಿಯ ಬಿಗ್ ಸಿನೆಮಾಸ್, ಪುತ್ತೂರಿನ ಭಾರತ್ ಸಿನೆಮಾಸ್, ಬೆಳ್ತಂಗಡಿಯ ಭಾರತ್, ಸುಳ್ಯದ ಸಂತೋಷ್ ಚಿತ್ರಮಂದಿರಗಳಲ್ಲಿ ತೆರೆಕಂಡಿತು. ಮಂಗಳೂರಿನ ರೂಪವಾಣಿ ಮತ್ತು ಉಡುಪಿಯ ಕಲ್ಪನಾ ಥಿಯೇಟರ್‌ನಲ್ಲಿ ಜ. 19ರಂದು ಬಿಡುಗಡೆಗೊಳ್ಳಲಿದೆ.
ಮಂಗಳೂರಿನ ಭಾರತ್ ಸಿನೆಮಾಸ್‌ನಲ್ಲಿ ಶುಕ್ರವಾರ ಚಿತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ರಾಜೇಶ್ ಗುರೂಜಿ ಉದ್ಘಾಟಿಸಿದರು. ಅತಿಥಿಯಾಗಿದ್ದ ಆರ್.ಕೆ. ನಾಯರ್ ಮಾತನಾಡಿ, ಇಂದು ದೇಶ ವಿದೇಶಗಳಲ್ಲಿ ತುಳು ಸಿನೆಮಾ ಬಿಡುಗಡೆಯಾಗುತ್ತಿದೆ. ತುಳುವರು ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಮಿ| ಮದಿಮಯೆ ಸಿನೆಮಾ ಗೆಲ್ಲಲಿ ಎಂದು ಹಾರೈಸಿದರು.
ಚಿತ್ರ ನಿರ್ಮಾಪಕ ಟಿ.ಎ. ಶ್ರೀನಿವಾಸ್ ಮಾತನಾಡಿ, ಇಂದು ತುಳು ಸಿನೆಮಾಗಳಿಗೆ ಉಡುಪಿ, ಮಂಗಳೂರಿನಲ್ಲಿ ಥಿಯೇಟರ್ ಕೊಡುತ್ತಿಲ್ಲ ಅನ್ನುವುದು ಬೇಸರದ ವಿಚಾರ. ಇಂತಹ ಬೆಳವಣಿಗೆ ನಿಲ್ಲಬೇಕು. ತುಳು ಭಾಷೆಯ ಸಿನೆಮಾಗಳಿಗೆ ಮೊದಲ ಪ್ರಾಶಸ್ತ್ಯ ಸಿಗಬೇಕು ಎಂದರು.
ನಟ ಭೋಜರಾಜ್ ವಾಮಂಜೂರು, ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್. ಧನ್‌ರಾಜ್, ಪ್ರಮುಖರಾದ ಪ್ರಕಾಶ್ ಪಾಂಡೇಶ್ವರ, ಇಸ್ಮಾಯಿಲ್ ಮೂಡುಶೆಡ್ಡೆ, ಮುಹಮ್ಮದ್ ಆತಿಫ್, ತಸ್ಲಿಮ್, ತಮ್ಮ ಲಕ್ಷ್ಮಣ, ಪಮ್ಮಿ ಕೊಡಿಯಾಲ್‌ಬೈಲ್, ಸಂತೋಷ್ ಪಡುಬಿದ್ರಿ, ರಾಹುಲ್ ಅಮೀನ್, ನಾಯಕ ನಟ ಸಾಯಿಕೃಷ್ಣ ಕುಡ್ಲ, ನಾಯಕಿ ಶ್ವೇತಾ ಸುವರ್ಣ, ಜ್ಯೋತಿಷ್ ಶೆಟ್ಟಿ, ನಿರ್ಮಾಪಕ ಮಿಥುನ್ ಕೆ.ಎಸ್., ಚೇತನ್, ರಾಜೇಶ್ ಫೆರಾವೋ, ನಿರ್ದೇಶಕ ನವೀನ್ ಕೆ. ಪೂಜಾರಿ ಉಪಸ್ಥಿತರಿದ್ದರು. ಮಧುರಾಜ್ ಗುರುಪುರ ನಿರೂಪಿಸಿದರು.
ವಿವಾಹ ಸಮಾರಂಭದ ಸುತ್ತ ನಡೆಯುವ ಕತೆಗೆ ಹಾಸ್ಯದ ಲೇಪನ ಹಚ್ಚಲಾಗಿದೆ. ಜತೆಗೆ ಸೆಂಟಿಮೆಂಟ್ ಕೂಡ ಇದೆ. ಪ್ರೇಕ್ಷಕರ ಅಭಿರುಚಿಯನ್ನು ಅರಿತು ಸಿನೆಮಾದ ಕತೆ ಹೆಣೆಯಲಾಗಿದೆ. ಕ್ಲೈಮಾಕ್ಸ್ ವಿಭಿನ್ನವಾಗಿದ್ದು, ಒಟ್ಟು ಸಿನೆಮಾ ಪ್ರೇಕ್ಷಕರಿಗೆ ಸಂಪೂರ್ಣ ಮನೋರಂಜನೆ ಒದಗಿಸುತ್ತದೆ ಎಂದು ನಿರ್ದೇಶಕ ನವೀನ್ ಕೆ. ಪೂಜಾರಿ ತಿಳಿಸಿದ್ದಾರೆ.