Advertisement

Vande Bharat Express; ವಿಶೇಷ ಸೌಲಭ್ಯಗಳ ಆಗರ

10:53 PM Dec 30, 2023 | Team Udayavani |

ಉಡುಪಿ: ಬಹುಬೇಡಿಕೆಯ ಮಂಗಳೂರು- ಮಡಗಾಂಂವ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭಗೊಂಡಿದೆ.

Advertisement

ರೈಲು ಎಂದಾಕ್ಷಣ ಶುಚಿತ್ವದ ಬಗ್ಗೆಯೇ ಎಲ್ಲರೂ ಪ್ರಶ್ನೆ ಮಾಡುತ್ತಾರೆ. ಹೊರಗಿನ ಸದ್ದು, ವಾಸನೆ, ಒಳಗಿನ ಸದ್ದು, ತುಕ್ಕು ಹಿಡಿದಿರುವ ಕಬ್ಬಿಣದ ತಗಡು, ದುರ್ನಾತ ಬೀರುವ ಶೌಚಾಲಯಗಳು ಹೀಗೆ ಸಮಸ್ಯೆಗಳೇ ಕಾಣಸಿಗುತ್ತಿದ್ದವು. ಆದರೆ ವಂದೇ ಭಾರತ್‌ ರೈಲು ಅದಕ್ಕೆಲ್ಲ ಸಂಪೂರ್ಣ ತದ್ವಿರುದ್ಧವಾಗಿದೆ. ಮಹಾನಗರ ಗಳಲ್ಲಿರುವ ಮೆಟ್ರೋದಲ್ಲಿ ಸಂಚರಿಸಿದಂತಹ ಭಾವನೆ ಮೂಡುತ್ತದೆ.

ಅತ್ಯಾಧುನಿಕ ಸೌಲಭ್ಯ
ಅತ್ಯಾಧುನಿಕ ಕಾರುಗಳ ಲ್ಲಿರುವಂತಹ ವರ್ಚುವಲ್‌ ಟಚ್‌ ಲೈಟಿಂಗ್‌, ಕ್ಷಿಪ್ರವಾಗಿ ದಹನವಾಗದ ವಸ್ತುಗಳ ಬಳಕೆ, ಆಪತ್ಕಾಲದಲ್ಲಿ ರೈಲು ಚಾಲಕನೊಂದಿಗೆ ನೇರವಾಗಿ ಸಂವಹನ ನಡೆಸುವ ವ್ಯವಸ್ಥೆ, ಮುಂದಿನ ನಿಲ್ದಾಣದ ಮಾಹಿತಿ, ರೈಲು ಸಂಚರಿಸುವ ವೇಗದ ಸಂಖ್ಯೆ, ಅಲ್ಲಲ್ಲಿ ಸಿಸಿ ಕೆಮರಾ, ಸೆಂಟ್ರಲ್‌ ಎಸಿ, ನ್ಪೋಕ್‌ ಅಲರಾಂ, ಬೆರಳು ಸ್ಪರ್ಶದಲ್ಲಿ ತೆರೆಯುವ ಕೋಚ್‌ ಬಾಗಿಲುಗಳು, ಎಲ್‌ಇಡಿ ಸ್ಕ್ರೀನ್‌ ಹೀಗೆ ಹತ್ತು ಹಲವಾರು ವೈಶಿಷ್ಯತೆಗಳನ್ನು ಇದು ಒಳಗೊಂಡಿದೆ.

7 ಬೋಗಿಗಳಲ್ಲಿ 1 ವಿಐಪಿ ಬೋಗಿಯಾಗಿದೆ. ಉಳಿದವು ನಾರ್ಮಲ್‌ ಬೋಗಿಗಳು. ವಿಐಪಿ ಬೋಗಿಯಲ್ಲಿ ತಿರುಗುವ ಸೀಟುಗಳ ಜತೆಗೆ ಟೇಬಲ್‌ ವ್ಯವಸ್ಥೆಯಿದೆ. 4 ಮಂದಿ ಕುಳಿತುಕೊಳ್ಳಬಹುದು. ಎಲ್ಲ ಸೀಟುಗಳನ್ನು ಫೋಲ್ಡಿಂಗ್‌, ಮನಬಂದಂತೆ ತಿರುಗಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರಕೃತಿಯನ್ನು ಕಣ್ತುಂಬಿಕೊಂಡು ಪ್ರಯಾಣ ಬೆಳೆಸಲು ಬೃಹದಾಕಾರದ ಗ್ಲಾಸ್‌ಗಳನ್ನು ಅಳವಡಿಸಲಾಗಿದ್ದು, ಬೆಟ್ಟಗುಡ್ಡ, ನದಿ, ವಿವಿಧ ತೋಟಗಳ ರಮಣೀಯ ನೋಟವನ್ನು ನೋಡುವುದೇ ಚೆಂದ. ವೈ-ಫೈ ವ್ಯವಸ್ಥೆ ಮೂಲಕ ಪ್ರಯಾಣಿಕರು ಇಂಟರ್‌ನೆಟ್‌ ಸೇವೆ ಪಡೆದುಕೊಳ್ಳಬಹುದು.

ಮಂಗಳೂರು ಸೆಂಟ್ರಲ್‌ನಿಂದ ಮಡಗಾಂವ್‌ಗೆ ದರ
ಚೇರ್‌ ಕಾರ್‌: 985 ರೂ. ಎಕ್ಸಿಕ್ಯೂಟಿವ್‌ ಕ್ಲಾಸ್‌: 1955 ರೂ.

Advertisement

ವೇಳಾಪಟ್ಟಿ
ಬೆಳಗ್ಗೆ 8.30ಕ್ಕೆ ಮಂಗಳೂರಿನಿಂದ ಹೊರಡುವ ರೈಲು ನಂ.20646 ಉಡುಪಿಗೆ ಆಗಮನ 9.48(ನಿರ್ಗಮನ 9.50), ಕಾರವಾರಕ್ಕೆ 12.08(12.10), ಮಡಗಾಂವ್‌ಗೆ 1.15ಕ್ಕೆ ತಲಪುವುದು. ಮರುಪ್ರಯಾಣದಲ್ಲಿ ನಂ. 20645 ಸಂಜೆ 6.10ಕ್ಕೆ ಹೊರಟು ಕಾರವಾರಕ್ಕೆ 6.55(6.57), ಉಡುಪಿ 9.12(9.14), ಮಂಗಳೂರು ಸೆಂಟ್ರಲ್‌ 10.45ಕ್ಕೆ ತಲಪುವುದು.

ದ್ವಿಮುಖ ಸಂಚಾರ ಯೋಗ್ಯ ರೈಲು
ರೈಲಿನ ಹಿಂದೆ ಹಾಗೂ ಮುಂದುಗಡೆ ಚಾಲಕನ ಕ್ಯಾಬಿನ್‌ ಇದೆ. ಭಾರತೀಯ ಮತ್ತು ಪಾಶ್ಚಿಮಾತ್ಯ ಶೌಚಾಲಯ ವ್ಯವಸ್ಥೆ, ಕೈ ತೊಳೆಯಲು ಸೋಪ್‌ ಮತ್ತು ಒಣಗಿಸಿಕೊಳ್ಳಲು ಡ್ರೈಯರ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಊಟ- ಉಪಾಹಾರ
ಈ ರೈಲು ಸೆಮಿ-ಹೈ ಸ್ಪೀಡ್‌ ಆಗಿರುವ ಕಾರಣ, ರೈಲಿನ ಟಿಕೆಟ್‌ ದರದಲ್ಲಿ ಊಟವನ್ನು ಸೇರಿಸಲಾಗಿದೆ. ರೈಲಿನಲ್ಲಿಯೇ ಉಪಾಹಾರ ಮತ್ತು ಮಧ್ಯಾಹ್ನದ ಊಟವನ್ನು ನೀಡಲಾಗುತ್ತದೆ. ನೀರು ಸಹಿತ ಎಲ್ಲ ವ್ಯವಸ್ಥೆಗಳೂ ಅಚ್ಚುಕಟ್ಟು. ರೆಫ್ರಿಜರೇಟರ್‌, ಪ್ರಥಮ ಚಿಕಿತ್ಸೆ ಸೌಲಭ್ಯಗಳೆಲ್ಲವೂ ಇದರಲ್ಲಿದೆ. ಮಧ್ಯಾಹ್ನ ಊಟಕ್ಕೆ ಚಪಾತಿ, ಪಲಾವ್‌, ಗುಲಾಬ್‌ ಜಾಮೂನು ನೀಡಲಾಯಿತು. ಬಳಿಕ ಸಂಜೆ ಬಾದಾಮಿ ಹಾಲು, ಮೈಸೂರು ಪಾಕ್‌ ಹಾಗೂ ಲಘು ಉಪಾಹಾರ, ನೀಡಲಾಯಿತು.

ಹೊಸ ಅನುಭವ
ಮೆಟ್ರೋದಲ್ಲಿ ಓಡಾಡಿದ ಅನುಭವ ನೀಡಿದೆ. ಎಲ್ಲ ರೈಲು ಗಳಲ್ಲಿ ಇಂತಹ ವ್ಯವಸ್ಥೆ ಕಲ್ಪಿಸಿದರೆ ಮತ್ತಷ್ಟು ಅನುಕೂಲವಾಗಲಿದೆ. ಶುಚಿತ್ವ ಸಹಿತ ಸಿಬಂದಿ ಸೌಜನ್ಯಪೂರ್ವಕವಾಗಿ ನೋಡಿಕೊಳ್ಳುತ್ತಿರುವುದು ಮತ್ತಷ್ಟು ಖುಷಿ ನೀಡಿದೆ.
-ರಂಜಿತಾ, ಪ್ರಯಾಣಿಕರು

ದರಕ್ಕೆ ಅನುಗುಣ ವಾಗಿರುವ ವ್ಯವಸ್ಥೆ ಕಲ್ಪಿಸಲಾಗಿದೆ. ಆರಾಮ ದಾಯಕ ಹಾಗೂ ಸುಖಕರ ಪ್ರಯಾಣದ ಅನುಭವ ಲಭಿಸಿದೆ. ಮಡಗಾಂವ್‌ ಅಷ್ಟೇ ಅಲ್ಲದೆ ದೇಶದ ಇತರ ಭಾಗಗಳಿಗೂ ಈ ಸೇವೆ ವಿಸ್ತರಿಸಬೇಕು.
-ಗೌರವ್‌, ಪ್ರಯಾಣಿಕರು

Advertisement

Udayavani is now on Telegram. Click here to join our channel and stay updated with the latest news.

Next