Advertisement
ಬೆಳಗ್ಗೆ ಚಾಲನೆ ಪಡೆದ ಕಂಬಳವು ಸಂಜೆ ವೇಳೆಗೆ ಹಗ್ಗದ ಕೋಣಗಳ ಓಟ, ಕನೆಹಲಗೆ, ಅಡ್ಡಹಲಗೆಯ ಆಕರ್ಷಣೆ ಯೊಂದಿಗೆ ಮೆರುಗು ಪಡೆಯಿತು. ರಾತ್ರಿ ಇಡೀ ವಿವಿಧ ವಿಭಾಗಗಳ ಸೆಮಿಫೈನಲ್ ನಡೆದಿದ್ದು, ರವಿವಾರ ಫೈನಲ್ ನಡೆಯಲಿದೆ.
ಸಂಜೆ ಜರಗಿದ ಸಭಾ ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಎಂಆರ್‌ಜಿ ಗ್ರೂಪ್ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಮಾತನಾಡಿ, ಮಂಗಳೂರು ಕಂಬಳವನ್ನು ಇದೇ ಜಾಗದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಲಾಗುವುದು. ಮುಂದಿನ ಮಾರ್ಚ್‌ನಲ್ಲಿ ಈ ಪ್ರದೇಶದಲ್ಲಿ ಹಲವು ಯೋಜನೆಗಳ ಕೆಲಸಆರಂಭವಾಗುತ್ತದೆ. ಅದರಲ್ಲಿ ಬರುವ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲೇ ಕಂಬಳ ಕರೆಯನ್ನೂ ಸೇರಿಸಿಕೊಂಡು ಇದನ್ನುಶಾಶ್ವತವಾಗಿ ಉಳಿಸಲು ಪ್ರಯತ್ನಿಸಲಾಗು ವುದು ಎಂದು ಭರವಸೆ ನೀಡಿದರು.
Related Articles
ಐವರು ನ್ಯಾಯಾಧೀಶರ ಪೀಠದಲ್ಲೂ ಕಂ ಬಳ ಸಮಿತಿ ಪರವಾಗಿ ಆದೇಶ ಬಂದಿದೆ. ಪೇಟಾದವರು ಮತ್ತೆ ಹೈಕೋರ್ಟ್‌ನಲ್ಲಿ ಅಪೀಲು ಹಾಕಿ ಬೆಂಗಳೂರು ಕಂಬಳ ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಯಾವ ಕಾರಣಕ್ಕೂ ಕಂಬಳವನ್ನು ನಿಲ್ಲಿಸಲು ಸಾಧ್ಯವಿಲ್ಲ, ಕಂಬಳದಿಂದ ನಾವೇ ಹೊರತು ನಮ್ಮಿಂದ ಕಂಬಳ ಅಲ್ಲ ಎಂದರು.
Advertisement
ತುಳುವಿಗಾಗಿಯೂ ಹೋರಾಟಕಂಬಳದೊಂದಿಗೆ ತುಳುವಿಗಾಗಿ ಯೂ ನಾವು ಹೋರಾಡುತ್ತಿದ್ದೇವೆ. ತುಳುವನ್ನು ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎನ್ನುವ ಧ್ವನಿಗೆ ಈಗ ಬಲಬಂದಿದ್ದು, ವಿಧಾನಸಭೆಯಲ್ಲೂ ಇದು ಪ್ರತಿಧ್ವನಿಸಿದೆ. ಅಧಿಕೃತ ಭಾಷೆ ಮಾಡುವುದಕ್ಕೆ ಏನೂ ಹೆಚ್ಚು ಖರ್ಚಿಲ್ಲ. ಎಷ್ಟೋ ರಾಜ್ಯಗಳಲ್ಲಿ ಅನೇಕ ಅಧಿಕೃತ ಭಾಷೆಗಳಿವೆ. ಹಾಗಾಗಿ ಇನ್ನು ಆರು ತಿಂಗಳಲ್ಲಿ ಇದು ಆಗದಿದ್ದರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಬಹುದು ಎಂದರು. ಅತಿಥಿಯಾಗಿದ್ದ ಕೋಲಾರ ಸಂಸದ ಮಲ್ಲೇಶ್‌ಬಾಬು ಮಾತನಾಡಿ, ನಮ್ಮ ಕಲೆ ಸಂಸ್ಕೃತಿಯಲ್ಲೊಂದಾದ ಕಂಬಳವನ್ನು ಉಳಿಸುವ ಹಾಗೂ ಅದರ ಸೊಗಸನ್ನು ಜನರಿಗೆ ತೋರ್ಪಡಿಸುವ ಕೆಲಸ ಉತ್ತಮವಾದದ್ದು ಎಂದರು. ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಕಂಬಳದಲ್ಲಿ ಈಗ ಶೇ.75 ರಷ್ಟೂ ಯುವಕರಿದ್ದಾರೆ. ಮಂಗಳೂರು ಕಂಬಳ ವಿಶೇಷ ಜನಾಕರ್ಷಣೆಯನ್ನೂ ಪಡೆದಿದೆ ಎಂದರು. ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಒಂದೊಮ್ಮೆ ಕಂಬಳ ನಡೆಯುತ್ತಿದ್ದ ಗ್ರಾಮೀಣ ಭಾಗದ ಗದ್ದೆಗಳು ಕಣ್ಮರೆಯಾಗಿರುವಾಗ, ನಗರದಲ್ಲೂ ಮಂಗಳೂರು ಕಂಬಳ ಆಯೋಜಿಸಿದ್ದು ಶ್ಲಾಘನೀಯ ಎಂದರು.
ಮಂಗಳೂರು ಕಂಬಳ ರೂವಾರಿ ಕ್ಯಾ| ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ, ಡಾ| ಎಂ.ಎನ್. ರಾಜೇಂದ್ರ ಕುಮಾರ್, ಮಾಜಿ ಸಚಿವ ರಮಾನಾಥ ರೈ, ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್, ಬಾರಾಡಿಬೀಡು ಕಂಬಳದ ಡಾ| ಜೀವಂಧರ ಬಲ್ಲಾಳ್, ಪ್ರಮುಖರಾದ ಪಟ್ಲ ಸತೀಶ್ ಶೆಟ್ಟಿ, ಅನಿಲ್ ಕುಮಾರ್, ಗುರುಕಿರಣ್, ಮಿಥುನ್ ರೈ ಮುಂತಾದವರಿದ್ದರು.