Advertisement

ರನ್‌ವೇ ವಿಸ್ತರಣೆಗೆ ಇನ್ನೂ ಅಂತಿಮವಾಗದ ಭೂಸ್ವಾಧೀನ!

01:16 AM Oct 05, 2021 | Team Udayavani |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಿ ಹಲವು ವರ್ಷ ಸಂದರೂ ತುರ್ತು ಬೇಡಿಕೆಯಾಗಿದ್ದ ರನ್‌ವೇ ವಿಸ್ತರಣೆಗೆ ಅಗತ್ಯವಿರುವ ಭೂಸ್ವಾಧೀನ ಮಾತ್ರ ಇನ್ನೂ ಅಂತಿಮವಾಗುವ ಹಂತದಲ್ಲಿದೆ.

Advertisement

ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಂಸ್ಥೆ ವಹಿಸಿಕೊಂಡ ಬಳಿಕ ಭೂಸ್ವಾಧೀನ ಚರ್ಚೆ ಹಿನ್ನೆಲೆಗೆ ಸರಿದಿದೆ. ಈ ಹಿಂದೆ ನಡೆದಿದ್ದ ಪ್ರಕ್ರಿಯೆ ಮೊದಲ ಹಂತದಲ್ಲಿಯೇ ಬಾಕಿಯಾಗಿದೆ.

2010ರಲ್ಲಿ ವಿಮಾನ ದುರಂತ ಸಂಭವಿಸಿದ ಬಳಿಕ ರನ್‌ವೇ ವಿಸ್ತರಣೆಯ ಕೂಗು ಬಹುವಾಗಿ ಕೇಳಿಬಂದಿತ್ತು. ರನ್‌ವೇ ವಿಸ್ತರಣೆಯಾಗದ ಕಾರಣ ದೊಡ್ಡ ಗಾತ್ರದ ವಿಮಾನಗಳು ಇಳಿಯಲು ಸಾಧ್ಯವಾಗುತ್ತಿಲ್ಲ. ವಿಸ್ತರಣೆಯಾದರೆ ದೇಶ-ವಿದೇಶಗಳಿಂದಲೂ ಎಲ್ಲ ಗಾತ್ರದ ವಿಮಾನಗಳು ಮಂಗಳೂರಿಗೆ ಆಗಮಿಸಲು ಸಾಧ್ಯ.

ವಿಮಾನ ನಿಲ್ದಾಣ ಅಭಿವೃದ್ಧಿಗೆ ಅವಶ್ಯ ಜಮೀನು ಒದಗಿಸುವುದು ಆಯಾ ರಾಜ್ಯ ಸರಕಾರದ ಹೊಣೆ. ರನ್‌ವೇ ವಿಸ್ತರಣೆಗೆ ಕೊಳಂಬೆ, ಅದ್ಯಪಾಡಿ ಪ್ರದೇಶದಲ್ಲಿ ಜಮೀನು ಗುರುತಿಸಿ ಜಿಲ್ಲಾಡಳಿತವು ರಾಜ್ಯ ಸರಕಾರದ ಮೂಲ ಸೌಕರ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಹಲವು ಸಮಯ ಕಳೆದಿದೆ. 400 ಕೋಟಿ ರೂ. ವೆಚ್ಚದ ಯೋಜನೆ ಇದಾಗಿತ್ತು. ಭೂ ಸ್ವಾಧೀನದ ವೆಚ್ಚವನ್ನು ರಾಜ್ಯ ಸರಕಾರ, ಕಾಮಗಾರಿ ವೆಚ್ಚವನ್ನು ವಿಮಾನ ನಿಲ್ದಾಣ ಪ್ರಾಧಿಕಾರ ಭರಿಸುವ ಬಗ್ಗೆ ತೀರ್ಮಾನವಾಗಿತ್ತು. ಆದರೆ ಯೋಜನೆಯ ಸಂಪೂರ್ಣ ವೆಚ್ಚವನ್ನು ಪ್ರಾಧಿಕಾರವೇ ಭರಿಸಬೇಕೆಂದು ರಾಜ್ಯ ಸರಕಾರ ನಿಲುವು ತೋರಿದ್ದ ಹಿನ್ನೆಲೆಯಲ್ಲಿ ವಿಸ್ತರಣೆಗೆ ತೊಡಕಾಗಿತ್ತು.

ಪ್ರಾಧಿಕಾರವೇ ಮಾಡಬೇಕು
ಮಂಗಳೂರು ಸಹಾಯಕ ಆಯುಕ್ತ ಮದನ ಮೋಹನ್‌ “ಉದಯವಾಣಿ’ ಜತೆಗೆ ಮಾತನಾಡಿ, “ರನ್‌ ವೇ ವಿಸ್ತರಣೆಗೆ 33 ಎಕರೆ ಭೂಮಿ ಅಗತ್ಯದ ಬಗ್ಗೆ ಕೆಲವು ವರ್ಷಗಳ ಹಿಂದೆ ನಿಲ್ದಾಣ ಪ್ರಾಧಿಕಾರದಿಂದ ಜಿಲ್ಲಾಡಳಿತವನ್ನು ಕೋರಲಾಗಿತ್ತು. ಆದರೆ ಈಗ ನಿಲ್ದಾಣದ ನಿರ್ವಹಣೆ ಅದಾನಿ ಸಂಸ್ಥೆಗೆ ಹೋಗಿರುವುದರಿಂದ ಅವರಿಗೆ ಭೂಸ್ವಾಧೀನ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಪ್ರಾಧಿಕಾರದ ಮೂಲಕವೇ ಭೂ ಸ್ವಾಧೀನದ ಬಗ್ಗೆ ನಿರ್ಧಾರವಾಗಿದೆ. ಸದ್ಯ ಭೂಮಿಯ ಮೌಲ್ಯ ನಿರ್ಧಾರ ನಡೆಯುತ್ತಿದೆ’ ಎಂದಿದ್ದಾರೆ.

Advertisement

ಇದನ್ನೂ ಓದಿ:ಶೂನ್ಯ ಗುರುತ್ವದಲ್ಲಿ ಇಟಲಿ ವಿಜ್ಞಾನಿ ಗೊಂಬೆ!

ಆಗಬೇಕಾಗಿರುವುದು ಏನು?
ಪ್ರಾಧಿಕಾರವು ಕೇಳಿದ ಭೂಮಿಗೆ ಸಂಬಂಧಿಸಿ ವಿಸ್ತೀರ್ಣ ಹಾಗೂ ಮೌಲ್ಯದ ಕುರಿತಂತೆ ಅಂತಿಮಗೊಳಿಸಿ ಮೊತ್ತ ನಿಗದಿಪಡಿಸಬೇಕಾಗಿದೆ. ಬಳಿಕ ಪ್ರಾಥಮಿಕ ಅಧಿಸೂಚನೆ ಹೊರಡಿಸುವಂತೆ ಕಂದಾಯ ಇಲಾಖೆಗೆ ಜಿಲ್ಲಾಡಳಿತದ ಪತ್ರ ಸಲ್ಲಿಕೆಯಾಗುತ್ತದೆ. ಒಪ್ಪಿಗೆ ದೊರೆತ ಬಳಿಕ ಸಂಬಂಧಪಟ್ಟವರ ಭೂಮಿಯಸರ್ವೇ ಮಾಡಿ ಅಂದಾಜುಪಟ್ಟಿ ರಚಿಸಿ ಪರಿಹಾರ ಪ್ರಕ್ರಿಯೆ ಆರಂಭವಾಗುತ್ತದೆ. ದರ ನಿಗದಿಯಾದ ಅನಂತರ ಅಂತಿಮ ಅಧಿಸೂಚನೆ ಹೊರಡಿಸಿ, ಭೂಮಿಕಳೆದುಕೊಳ್ಳುವವರಿಗೆ ನೋಟಿಸ್‌ ನೀಡಿ ಪರಿಹಾರವಿತರಿಸಲಾಗುತ್ತದೆ. ಬಳಿಕ ಭೂಮಿಯನ್ನು ಪ್ರಾಧಿ
ಕಾರಕ್ಕೆ ನೀಡಲಾಗುತ್ತದೆ. ಇಷ್ಟೆಲ್ಲ ಪೂರ್ಣಗೊಳ್ಳಲು ಇನ್ನೆಷ್ಟು ಸಮಯ ಬೇಕೋ ಗೊತ್ತಾಗುತ್ತಿಲ್ಲ!

2,000 ಅಡಿ ಉದ್ದದ ರನ್‌ವೇಗೆ ನಿರ್ಧಾರ
ನಿಲ್ದಾಣದ ರನ್‌ವೇ ಪ್ರಸ್ತುತ 8,038 ಅಡಿ ಉದ್ದವಿದೆ. 2013ರಲ್ಲಿ 11,600 ಅಡಿಗೆ ವಿಸ್ತರಿಸುವ ಯೋಜನೆ ರೂಪಿಸಲಾಗಿತ್ತು. ಈ ಯೋಜನೆಗೆ 280 ಎಕರೆ ಜಾಗ ಹಾಗೂ 1,120 ಕೋಟಿ ರೂ. ವೆಚ್ಚ ಎಂದು ಅಂದಾಜಿಸಲಾಗಿತ್ತು. ಭೂಸ್ವಾಧೀನ ನಡೆಸಲು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ ಅಧಿಕ ಮೊತ್ತ ಅಗತ್ಯವಿದ್ದ ಕಾರಣ ರನ್‌ವೇ ವಿಸ್ತರಣೆಯನ್ನು 10,500 ಅಡಿಗೆ ಸೀಮಿತಗೊಳಿಸಲು ತೀರ್ಮಾನಿಸ ಲಾಯಿತು. ಅದೂ ಹೊರೆ ಎಂಬ ಕಾರಣ ಸದ್ಯ 33 ಎಕರೆ ಭೂಸ್ವಾಧೀನಕ್ಕೆ ಸರಕಾರ ಚಿಂತನೆ ನಡೆಸಿದೆ. ಇದರ ಮೌಲ್ಯ ಇನ್ನಷ್ಟೇ ಅಂತಿಮವಾಗಬೇಕಿದೆ.

ರನ್‌ವೇ ವಿಸ್ತರಣೆಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ದರ ಸಂಧಾನ ಮಾಡಿಕೊಂಡು ಭೂ ಮಾಲಕರಿಂದ ನೇರವಾಗಿ ಖರೀದಿಸುವ ನೆಲೆಯಲ್ಲಿ ಮಾತುಕತೆ ನಡೆಯುತ್ತಿದೆ. ದರ ನಿಗದಿ ಹಾಗೂ ಪೂರಕ ವ್ಯವಸ್ಥೆಗಳನ್ನು ಜಿಲ್ಲಾಡಳಿತ ನಡೆಸಲಿದೆ. ಇದಕ್ಕೆ ಬೇಕಾಗುವ ಮೊತ್ತವನ್ನು ಅದಾನಿ ಸಂಸ್ಥೆಯವರು ನೀಡಬೇಕಾಗುತ್ತದೆ. ಈ ಬಗ್ಗೆ ಮುಂದಿನ ಹಂತದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು.
– ಡಾ| ರಾಜೇಂದ್ರ ಕೆ.ವಿ., ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next