Advertisement
ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಅತೀ ಹೆಚ್ಚು ಮತಗಳನ್ನು ಗಳಿಸಿದ ದಾಖಲೆ ಕೆ.ಆರ್. ಕಾರಂತ್ ಅವರ ಹೆಸರಿನಲ್ಲಿದೆ. 1967ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ಮಧ್ಯೆ ನಿಕಟ ಸ್ಪರ್ಧೆ ಏರ್ಪಟ್ಟು ಕಾರಂತ್ ಅವರು ದ್ವಿತೀಯ ಸ್ಥಾನಿಯಾಗಿದ್ದರು. ಆಗ ಗೆಲುವು ಸಾಧಿಸಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಭ್ಯರ್ಥಿ ಸಿ.ಎಂ. ಪೂಣಚ್ಚ ಅವರು 1,25,162 ಮತಗಳನ್ನು ಗಳಿಸಿದ್ದರು. 1957ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಎಸ್.ಎ. ಶರ್ಮಾ ಎಂಬವರು 21,213 ಮತಗಳನ್ನು ಗಳಿಸಿದ್ದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 2009 ಮತ್ತು 2014ರ ಚುನಾವಣೆ ಯಲ್ಲಿ ತಲಾ 7 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 2019ರ ಚುನಾವಣೆ ಯಲ್ಲೂ 7 ಮಂದಿ ಪಕ್ಷೇತರರು ಸ್ಪರ್ಧಾ ಕಣದಲ್ಲಿರುವುದು ವಿಶೇಷ. 2014ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ದೀಪಕ್ ರಾಜೇಶ್ ಕುವೆಲ್ಲೊ ಮತ್ತು ಮ್ಯಾಕ್ಸಿಂ ಪಿಂಟೋ ಅವರು ಈ ಬಾರಿಯೂ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಪಕ್ಷೇತರರಿಗೆ ಗ್ಯಾಸ್ ಸಿಲಿಂಡರ್, ಆಟೋರಿಕ್ಷಾ, ಹೂಕೋಸು, ಚಾವಿ, ಡೀಸೆಲ್ ಪಂಪ್, ಪ್ರಷರ್ ಕುಕ್ಕರ್, ಮಡಿಕೆ, ಕಹಳೆ ಉದುತ್ತಿರುವ ಮನುಷ್ಯ ಹಾಗೂ ಬ್ಯಾಟ್ ಚಿಹ್ನೆಗಳನ್ನು ವಿತರಿಸಲಾಗಿದೆ.