Advertisement

Mangaluru: ಹೈನುಗಾರರಿಗೆ ಇಂದಿನಿಂದ ಪ್ರೋತ್ಸಾಹಧನ ಏರಿಕೆ

12:22 AM Jan 01, 2025 | Team Udayavani |

ಮಂಗಳೂರು: ಹೈನುಗಾರರಿಗೆ ನೆರವಾಗುವ ಉದ್ದೇಶದಿಂದ ಜ. 1ರಿಂದ ಪ್ರತೀ ಲೀಟರ್‌ ಹಾಲಿಗೆ ವಿಶೇಷ ಪ್ರೋತ್ಸಾಹಧನವನ್ನು 1 ರೂ.ನಿಂದ 1.50 ರೂ.ಗಳಿಗೆ ಏರಿಕೆ ಮಾಡಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ದ.ಕ. ಹಾಲು ಒಕ್ಕೂಟವು ತೀರ್ಮಾನಿಸಿದೆ.

Advertisement

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಮೇವಿನ ಕೊರತೆ, ವಾತಾವರಣದ ಅಧಿಕ ಉಷ್ಣತೆ, ಪಶು ಆಹಾರದ ಕೊರತೆ ಮತ್ತು ಕೂಲಿ ಕಾರ್ಮಿಕರ ತೀವ್ರ ಅಭಾವದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಾಲು ಉತ್ಪಾದನ ವೆಚ್ಚ ಅಧಿಕವಿದೆ.

ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಯಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸಲು ಹೈನುಗಾರರಿಗೆ ಲೀ. ಹಾಲಿಗೆ 2 ರೂ.ಗಳಿಂದ 3 ರೂ. ವರೆಗೆ ಹೆಚ್ಚು ದರ ನೀಡುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಮಂಗಳವಾರ ದ.ಕ. ಹಾಲು ಒಕ್ಕೂಟದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಈಗ ಹೈನುಗಾರಿಕೆ ಕಷ್ಟ ಸಾಧ್ಯವಾಗಿದೆ. ಸಂಘಗಳ ಮುಖಾಂತರ ಹಾಲು ಶೇಖರಣೆ ನಿರೀಕ್ಷಿತ ಪ್ರಮಾಣದಷ್ಟು ಅಭಿವೃದ್ಧಿಯಾಗಿಲ್ಲ. ಇದನ್ನು ಮನಗಂಡು ವಿಶೇಷ ಪ್ರೋತ್ಸಾಹಧನವನ್ನು ಆಡಳಿತ ಮಂಡಳಿ ನಿರ್ಣಯದಂತೆ ಬದಲಾವಣೆ ಮಾಡಲಾಗಿದೆ.

ಇದರಂತೆ ಸಂಘದ ಮಾರ್ಜಿನನ್ನು 80 ಪೈಸೆಯಿಂದ 1.05 ರೂ.ಗೆ, ರೈತ ಕಲ್ಯಾಣ ಟ್ರಸ್ಟ್‌ ವಂತಿಗೆ 5 ಪೈಸೆಯಿಂದ 10 ಪೈಸೆಗೆ, ಪ್ರತೀ 0.1 ಫ್ಯಾಟ್‌ಗೆ 17 ಪೈಸೆಯಿಂದ 20 ಪೈಸೆಗೆ, 4.5 ಫ್ಯಾಟ್‌-8.5 ಎಸ್‌ಎನ್‌ಎಫ್‌ ಸಂಘಕ್ಕೆ ನೀಡುವ ದರ 37.74 ರೂ.ಗಳಿಂದ 38.25 ರೂ. ಹಾಗೂ 4.5ಫ್ಯಾಟ್‌-8.5 ಎಸ್‌ಎನ್‌ಎಫ್‌ ರೈತರಿಗೆ ನೀಡುವ ದರ 36.74 ರೂ.ಗಳಿಂದ 36.95 ರೂ.ಗೆ ಏರಿಕೆಯಾಗಲಿದೆ. ಪ್ರಸ್ತುತ ಒಕ್ಕೂಟ ವ್ಯಾಪ್ತಿಯಲ್ಲಿ 749 ಸಂಘಗಳು ಕಾರ್ಯಾಚರಿಸುತ್ತಿದ್ದು, 51,138 ಸಕ್ರಿಯ ಸದಸ್ಯರಿಂದ ದಿನವಹಿ 3,40,158 ಲೀ. ಹಾಲು ಸಂಗ್ರಹಣೆಯಾಗುತ್ತಿದೆ. ಡಿಸೆಂಬರ್‌ ಅಂತ್ಯದವರೆಗೆ ಅಂದಾಜು 870 ಕೋ.ರೂ. ವ್ಯವಹಾರ ನಡೆಸಿ 7.76 ಕೋ.ರೂ. ಲಾಭ ಗಳಿಸುವ ನಿರೀಕ್ಷೆ ಇದೆ ಎಂದರು.

Advertisement

ಹಾಲು ಒಕ್ಕೂಟದ ಆಡಳಿತ ನಿರ್ದೇ ಶಕ ಎಂ.ಡಿ. ವಿವೇಕ್‌ ಡಿ., ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಜಯರಾಮ… ರೈ, ನಿರ್ದೇಶಕರಾದ ದಿವಾಕರ್‌ ಶೆಟ್ಟಿ ಕಾಪು, ರವಿರಾಜ್‌ ಹೆಗ್ಡೆ, ನಾರಾಯಣ ಪ್ರಕಾಶ್‌, ಸವಿತಾ ಶೆಟ್ಟಿ, ಸದಾಶಿವ ಶೆಟ್ಟಿ, ನರಸಿಂಹ ಕಾಮತ್‌, ಸುಧಾಕರ್‌ ರೈ, ಮಾರುಕಟ್ಟೆ ವಿಭಾಗದ ಅಧಿಕಾರಿ ರವಿರಾಜ್‌ ಉಡುಪ ಉಪಸ್ಥಿತರಿದ್ದರು.

ಈರೋಡ್‌ನಿಂದ ರಾಸು
ಹೈನುಗಾರಿಕೆಗೆ ಪ್ರೋತ್ಸಾಹ ನೀಡಲು ಹಾಗೂ ಉತ್ಪಾದನ ವೆಚ್ಚವನ್ನು ಕಡಿಮೆ ಮಾಡಲು ಪ್ರಸ್ತುತ ಮಾಸಿಕ 600 ಮೆ. ಟನ್‌ ರಸಮೇವನ್ನು ಸಂಘಗಳಿಗೆ ಪ್ರತೀ ಕೆ.ಜಿ.ಗೆ 7.50 ರೂ.ನಂತೆ ಒದಗಿಸಲಾಗುತ್ತಿದೆ. ಉತ್ತಮ ರಾಸುಗಳಿಗಾಗಿ ದಕ್ಷಿಣ ಭಾರತದ ಈರೋಡ್‌ನ‌ಲ್ಲಿ ಕಡಿಮೆ ದರದಲ್ಲಿ ಉತ್ತಮ ತಳಿಯ ಜಾನುವಾರುಗಳು ಲಭ್ಯವಿರುವುದನ್ನು ಗುರುತಿಸಿ ಹೈನು ಗಾರರಿಗೆ ಅವರ ಬೇಡಿಕೆಗೆ ಅನುಗುಣ ವಾಗಿ ರಾಸುಗಳನ್ನು ಖರೀದಿಸಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಪ್ರತೀ ರಾಸಿಗೆ 16,000 ರೂ.ಗಳಷ್ಟು ಅನುದಾನವನ್ನು ರಾಸು ಸಾಗಾಣಿಕೆಗೆ, ವಿಮೆಗಾಗಿ, ಉಚಿತ ಪಶು ಆಹಾರಕ್ಕಾಗಿ ನೀಡಲಾಗುತ್ತಿದೆ ಎಂದು ಸುಚರಿತ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next