Advertisement

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ

02:28 AM Nov 25, 2024 | Team Udayavani |

ಮಂಗಳೂರು: ತೋಟ ಬೆಂಗ್ರೆಯ ಅಳಿವೆ ಬಾಗಿಲಿನಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ಮುಂದುವರಿದಿದ್ದು, ರವಿವಾರ ಮುಂಜಾವ ಮರಳುಗಾರಿಕೆಯಲ್ಲಿ ನಿರತರಾಗಿದ್ದವರು ಸ್ಥಳೀಯ ಮೀನುಗಾರ ಯುವಕನೋರ್ವನಿಗೆ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಸಂಭವಿಸಿದೆ.

Advertisement

ಮುಂಜಾವ 2 ಗಂಟೆಯ ಸುಮಾರಿಗೆ ಸ್ಥಳೀಯ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದ ವೇಳೆ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದವರನ್ನು ಪ್ರಶ್ನಿಸಿದ್ದರು. ಆಗ ಸುಮಾರು 15 ಮಂದಿಯ ತಂಡ ಹಲ್ಲೆಗೆ ಮುಂದಾಗಿದೆ. ಕೆಲವು ಮೀನುಗಾರರು ಈ ವೇಳೆ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓರ್ವ ಯುವಕನಿಗೆ ಹಾರೆಯಿಂದ ಬಲವಾದ ಹೊಡೆತ ಬಿದ್ದಿದ್ದು, ಆತನ ಬೆನ್ನು, ಕಣ್ಣು ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿವೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೋಟ್‌ನಲ್ಲಿ ಕೇರಳಕ್ಕೆ ರವಾನೆ
ಫ‌ಲ್ಗುಣಿ ಮತ್ತು ನೇತ್ರಾವತಿ ನದಿಗಳು ಸಮುದ್ರ ಸೇರುವ ಈ ಸ್ಥಳದಲ್ಲಿ ಮರಳುಗಾರಿಕೆಗೆ ಅವಕಾಶವಿಲ್ಲ. ಆದಾಗ್ಯೂ ಕಳೆದ ಸುಮಾರು ಒಂದೂವರೆ ವರ್ಷದಿಂದ ಮರಳುಗಾರಿಕೆ ನಡೆಯುತ್ತಿದೆ. ಹೊರಭಾಗದ ಕೆಲವು ಮಂದಿ ಇಲ್ಲಿ ರಾತ್ರಿ ಮರಳು ಸಂಗ್ರಹಿಸಿ ಬೋಟ್‌ಗಳ ಮೂಲಕ ಕೇರಳಕ್ಕೆ ಸಾಗಿಸುತ್ತಿದ್ದಾರೆ. ರವಿವಾರ ಮುಂಜಾವ ಕೂಡ ನೂರಾರು ಗೋಣಿಚೀಲಗಳಲ್ಲಿ ಮರಳು ಸಂಗ್ರಹಿಸಿರುವುದು, ಖಾಲಿ ಗೋಣಿಚೀಲಗಳನ್ನು ತಂದಿಟ್ಟಿರುವುದು ಕಂಡುಬಂದಿದೆ ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ.

ಸುರಕ್ಷತೆಗೆ ಜಲಮಾರ್ಗ ಆಯ್ಕೆ
ಈ ಹಿಂದೆ ಜೆಸಿಬಿ, ಲಾರಿಗಳನ್ನು ತಂದು ರಸ್ತೆಯ ಮೂಲಕವೇ ಮರಳು ಸಾಗಾಟ ನಡೆಯುತ್ತಿತ್ತು. ಇದಕ್ಕೆ ಸ್ಥಳೀಯರು ತಡೆಯೊಡ್ಡಿದ್ದರು. ಪೊಲೀಸರು ಕೂಡ ಕಣ್ಣಿಟ್ಟಿದ್ದರು. ಅನಂತರ ರಾತ್ರಿ ವೇಳೆ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ. ಇಲ್ಲಿ ಸಾಕಷ್ಟು ಮರಳು ಲಭ್ಯವಿರುವುದರಿಂದ ಸುಲಭವಾಗಿ ಸಂಗ್ರಹಿಸಲಾಗುತ್ತಿದೆ. ಸ್ಥಳೀಯರಿಗೆ ಹಲ್ಲೆ ನಡೆಸುವ, ಮಾರಕಾಯುಧಗಳನ್ನು ತೋರಿಸಿ ಬೆದರಿಕೆ ಹಾಕುವ ಘಟನೆಗಳು ಆಗಾಗ್ಗೆ ನಡೆಯುತ್ತಿದೆ.

ಮರಳು ಮಾಫಿಯಾದ ಬಗ್ಗೆ ಪೊಲೀಸರು, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೂರು ನೀಡಲಾಗಿದೆ. ಆದರೂ ಅಕ್ರಮ ಮರಳುಗಾರಿಕೆ ಮುಂದುವರಿದಿದೆ. ಮರಳುಗಾರಿಕೆಯಿಂದ ಅಳಿವೆಬಾ ಗಿಲಿಗೆ ಹಾನಿಯಾಗುತ್ತಿದ್ದು, ಮೀನು ಗಾರಿಕ ಬೋಟ್‌ಗಳ ಚಲನೆಗೆ ತೊಂದರೆಯಾಗಿದೆ ಎಂದು ಮೀನು ಗಾರರು ದೂರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next