ಬೆಂಗಳೂರು: ಸಕಲೇಪುರ ತಾಲೂಕಿನ ಆಚಂಗಿ-ದೊಡ್ಡನಾಗರ ಬಳಿ ಶುಕ್ರವಾರ (ಆ.16) ಮಧ್ಯಾಹ್ನ ರೈಲ್ವೆ ಹಳಿ ಮೆಲೆ ಗುಡ್ಡಕುಸಿದು ಬಿದ್ದ ಪರಿಣಾಮ ಮತ್ತೆ ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ಈ ಹಿನ್ನೆಲೆಯಲ್ಲಿ ಬಾಳ್ಳುಪೇಟೆ ಸಮೀಪ ಯಶವಂತಪುರ-ಕಾರವಾರ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಮಾರ್ಗ ಮಧ್ಯದಲ್ಲಿ ಸಿಲುಕಿಕೊಂಡು ಒದ್ದಾಡುವಂತಾಗಿದೆ.
ಕಳೆದ ಒಂದು ವಾರದ (ಆಗಸ್ಟ್ 10) ಹಿಂದೆಯೂ ಇದೇ ಸ್ಥಳದಲ್ಲಿ ಹಳಿಯ ಮೇಲೆ ಗುಡ್ಡ ಕುಸಿದು ಬಿದ್ದು, ರೈಲು ಸಂಚಾರ ಸ್ಥಗಿತಗೊಳ್ಳುವಂತಾಗಿತ್ತು. ಇದೀಗ ಮಣ್ಣು ತೆರವುಗೊಳಿಸಿ, ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟ ಬೆನ್ನಲ್ಲೇ ಮತ್ತೆ ಹಳಿ ಮೇಲೆ ಗುಡ್ಡ ಕುಸಿದು ಬಿದ್ದಿದೆ.
ಆಚಂಗಿ-ದೊಡ್ಡನಾಗರ ಪ್ರದೇಶಕ್ಕೆ ರೈಲ್ವೆ ಇಲಾಖೆ ಅಧಿಕಾರಿಗಳು ದೌಡಾಯಿಸಿದ್ದು, ಹಳಿ ಮೇಳೆ ಕುಸಿದು ಬಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿರುವುದಾಗಿ ಮೂಲಗಳು ತಿಳಿಸಿವೆ.
ಜುಲೈ 26ರಂದು ಹಾಸನ ಜಿಲ್ಲೆಯ ಯಡಕುಮೇರಿ ಹಾಗೂ ಕಡಗರವಳ್ಳಿ ಪ್ರದೇಶದಲ್ಲಿ ಭಾರೀ ಪ್ರಮಾಣದ ಭೂ ಕುಸಿತ ಸಂಭವಿಸಿ, 12 ರೈಲು ಸಂಚಾರವನ್ನು ರದ್ದುಗೊಳಿಸಲಾಗಿತ್ತು ಎಂದು ವರದಿ ತಿಳಿಸಿದೆ.