Advertisement

Mangaluru: ಅನುಮತಿ ದೊರೆತರೂ ಓಡದ ಸರಕಾರಿ ಬಸ್‌!

02:35 PM Sep 26, 2024 | Team Udayavani |

ಮಹಾನಗರ: ಮಂಗಳೂರು-ಮೂಡುಬಿದಿರೆ-ಕಾರ್ಕಳ ನಡುವಣ ಕೆಎಸ್ಸಾರ್ಟಿಸಿ ಬಸ್‌ ಸಂಚಾರಕ್ಕೆ ಅಡ್ಡಿಯಾಗಿದ್ದ ತೊಡಕು ನಿವಾರಣೆಗೊಂಡರೂ ಬಸ್‌ ಓಡಿಸಲು ಇನ್ನೂ ಅವಕಾಶ ಸಿಕಿಲ್ಲ. ಬಸ್‌ ಕಾರ್ಯಾಚರಣೆ ಮಾಡಲು ಐದು ತಿಂಗಳ ಹಿಂದೆ ನ್ಯಾಯಾಲಯ ಅನುಮತಿ ನೀಡಿದರೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್‌ಟಿಎ) ಸಭೆ ನಡೆಯದೆ ಈ ರೂಟ್‌ಗಳಲ್ಲಿ ಬಸ್‌ ಓಡಾಟಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ.

Advertisement

ಈ ರೂಟ್‌ನಲ್ಲಿ ಹೊಸ ಬಸ್‌ ಓಡಿಸಲು ಕೆಎಸ್ಸಾರ್ಟಿಸಿ ಇಂಗಿತ ವ್ಯಕ್ತಪಡಿಸಿದೆ. ಆದರೆ ಪರವಾನಿಗೆಗೆ ಸಿಗಬೇಕಾದರೆ ಈ ಕುರಿತು (ಆರ್‌ಟಿಎ)ಯಲ್ಲಿ ನಿರ್ಧಾರ ಆಗಬೇಕು. ಆದರೆ ಮಂಗಳೂರಿನಲ್ಲಿ ಕಳೆದ ಒಂದು ವರ್ಷದಿಂದ ಆರ್‌ಟಿಎ ಸಭೆ ನಡೆದಿಲ್ಲ. ಇದರಿಂದಾಗಿ ಹೊಸ ಪರ್ಮಿಟ್‌ ನೀಡಲು ಇನ್ನೂ ಸಾಧ್ಯವಾಗಿಲ್ಲ.

ಮಂಗಳೂರು-ಮೂಡುಬಿದಿರೆ- ಕಾರ್ಕಳ ನಡುವಣ 8 ಬಸ್‌ 56 ಟ್ರಿಪ್‌ ಓಡಿಸಲು ಕೆಎಸ್ಸಾರ್ಟಿಸಿ ಕೆಲವು ವರ್ಷಗಳ ಹಿಂದೆ ಪರವಾನಿಗೆ ಕೇಳಿತ್ತು. ಆದರೆ ಮೂಡುಬಿದಿದರೆ ಮಾರ್ಗದಲ್ಲಿ ಗುರುಪುರ ಹಳೆ ಸೇತುವೆ ದುರ್ಬಲವಾಗಿದೆ ಎಂಬ ಕಾರಣದಿಂದಾಗಿ ಕೇವಲ 24 ಟ್ರಿಪ್‌ ಓಡಿಸಲು ಮಾತ್ರ ಅವಕಾಶ ನೀಡಲಾಗಿತ್ತು. ಹೊಸ ಸೇತುವೆ ನಿರ್ಮಾಣ, ಹಳೆ ಸೇತುವೆ ದುರಸ್ತಿ ಬಳಿಕವೂ ಅನುಮತಿ ಸಿಗದ ಕಾರಣ ಇದನ್ನು ಪ್ರಶ್ನಿಸಿ, ಕೆಎಸ್ಸಾರ್ಟಿಸಿ ನ್ಯಾಯಾಲಯದ ಮೊರೆ ಹೋಗಿತ್ತು. ಈ ರೂಟ್‌ನಲ್ಲಿ 56 ಟ್ರಿಪ್‌ ಓಡಿಸಲು ಕೆಎಸ್ಸಾರ್ಟಿಸಿಗೆ ನ್ಯಾಯಾಲಯ ಕೆಲವು ತಿಂಗಳ ಹಿಂದೆಯೇ ಅನುಮತಿ ನೀಡಿದೆ. ಆದರೂ ಬಸ್‌ ಕಾರ್ಯಾಚರಣೆ ಇನ್ನೂ ಆರಂಭಗೊಂಡಿಲ್ಲ.

ಸಭೆ ನಡೆಸಲು ನೀತಿ ಸಂಹಿತೆ ಅಡ್ಡಿ
ಮಂಗಳೂರು-ಮೂಡುಬಿದಿರೆ-ಕಾರ್ಕಳ ನಡುವಣ ಬಸ್‌ ಸಂಚಾರಕ್ಕೆ ಸಂಬಂಧಿಸಿದ ಪರವಾನಿಗೆ ನೀಡಲು ಆರ್‌ಟಿಎ ಸಭೆಯಲ್ಲಿ ನಿರ್ಧರಿಸಬೇಕು. ಆರ್‌ಟಿಎ ಸಭೆಗೆ ಈಗಾಗಲೇ ದಿನ ನಿಗದಿ ಮಾಡಿದರೂ ವಿಧಾನಪರಿಷತ್‌ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿಗೆ ಮುಂದೂಡಲಾಗಿದೆ. ಪರವಾನಿಗೆ ಕುರಿತು ಅಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ.
-ಶ್ರೀಧರ್‌ ಮಲ್ಲಾಡ್‌,  ಮಂಗಳೂರು ಆರ್‌ಟಿ

ಹೊಸ ಬಸ್‌ ಓಡಿಸುತ್ತೇವೆ
ಮಂಗಳೂರು-ಮೂಡುಬಿದಿರೆ-ಕಾರ್ಕಳ ಮಾರ್ಗವಾಗಿ 8 ಬಸ್‌ 56 ಟ್ರಿಪ್‌ ಕಾರ್ಯಾಚರಣೆಗೆ ನ್ಯಾಯಾಲಯದಿಂದ ಅನುಮತಿ ದೊರಕಿದೆ. ಆದರೆ, ಆರ್‌ಟಿಎ ಸಭೆಯಲ್ಲಿ ಪರವಾನಿಗೆ ಸಿಗಬೇಕು. ಪರವಾನಿಗೆ ದೊರಕಿದ ಕೂಡಲೇ ಬಸ್‌ ಓಡಿಸಲು ಕೆಎಸ್ಸಾರ್ಟಿಸಿ ತಯಾರಿದೆ. ಈ ರೂಟ್‌ಗಳಲ್ಲಿ ಹೊಸ ಬಸ್‌ ಓಡಿಸಲು ನಿರ್ಧರಿಸಿದ್ದೇವೆ.
-ರಾಜೇಶ್‌ ಶೆಟ್ಟಿ, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

Advertisement

ವರ್ಷದಿಂದ ನಡೆಯದ ಆರ್‌ಟಿಎ ಸಭೆ
ವಾಹನಗಳಿಗೆ ಹೊಸ ಪರವಾನಿಗೆ, ರೂಟ್‌, ಸಮಯ ಬದಲಾವಣೆ ಸಹಿತ ವಿವಿಧ ಬೇಡಿಕೆ ಇತ್ಯರ್ಥಕ್ಕೆ ಸಾಮಾನ್ಯವಾಗಿ ಕಾಲಕಾಲಕ್ಕೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆ ನಡೆಯುತ್ತದೆ. ಆದರೆ ಮಂಗಳೂರಿನಲ್ಲಿ ಕಳೆದ ಒಂದು ವರ್ಷದಿಂದ ಆರ್‌ಟಿಎ ಸಭೆ ನಡೆದಿಲ್ಲ. ಅದರಲ್ಲೂ ಬಸ್‌ ಪರವಾನಿಗೆಗೆ ಸಂಬಂಧಿಸಿ ಕೊನೆಯ ಸಭೆ ನಡೆದಿದ್ದು, 2022ರ ಜನವರಿ ತಿಂಗಳಿನಲ್ಲಿ. ಸಭೆ ನಡೆಸಲು ಹಲವು ತಿಂಗಳಿನಿಂದ ಒತ್ತಡ ಇದ್ದರೂ ಕೆಲವು ಬಾರಿ ಸಭೆ ನಿಗದಿಗೊಂಡು ಮೊಟಕುಗೊಂಡಿತ್ತು. ಇದೀಗ ಸೆ. 26ರಂದು ಸಭೆಗೆ ನಿರ್ಧರಿಸಲಾಗಿತ್ತು. ಆದರೆ ಸದ್ಯ ವಿಧಾನಪರಿಷತ್‌ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದ ಕಾರಣ, ಆರ್‌ಟಿಎ ಸಭೆಯಲ್ಲಿ ಮತ್ತೆ ಒಂದು ತಿಂಗಳ ಮಟ್ಟಿಗೆ ಮುಂದೂಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next