Advertisement

ರಾಷ್ಟ್ರೀಯ ಬಾಲ ಪುರಸ್ಕಾರ: ಪ್ರಧಾನಿ ಜೊತೆ ಮಂಗಳೂರಿನ ಬಾಲೆಯ ಮಾತು

01:08 AM Jan 25, 2022 | Team Udayavani |

ಮಂಗಳೂರು: ಪ್ರಸ್ತುತ ಸಾಲಿನ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಆಯ್ಕೆಯಾದ ಮಂಗಳೂರಿನ ಭರತ ನಾಟ್ಯ ಕಲಾವಿದೆ ರೆಮೋನಾ ಇವೆಟ್‌ ಪಿರೇರಾ ಅವರಿಗೆ ಪ್ರಧಾನಿ ಮೋದಿ ಸೋಮವಾರ ವೀಡಿಯೋ ಕಾನ್ಫರೆನ್ಸ್‌ ಮೂಲಕ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿ ದರು. ರೆಮೋನಾ ಅವರಿಗೆ ಕಲೆ ಮತ್ತು ಸಂಸ್ಕೃತಿ ವಿಭಾಗ ದಲ್ಲಿ ಈ ಪುರಸ್ಕಾರ ಲಭಿಸಿದೆ.

Advertisement

ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ರೆಮೋನಾ ಜತೆಗೆ ಸಂವಾದ ನಡೆಸಿದರು. ಮಂಗಳೂರಿನ ದ.ಕ. ಜಿ.ಪಂ. ಸಭಾಂಗಣದಲ್ಲಿ ವೀಡಿಯೋ ಕಾನ್ಫರೆನ್ಸ್‌ ಆಯೋ ಜನೆಗೊಂಡಿದ್ದು, ರೆಮೋನಾ ತನ್ನ ತಾಯಿ ಗ್ಲಾಡಿಸ್‌ ಪಿರೇರಾ ಅವರೊಂದಿಗೆ ಪಾಲ್ಗೊಂಡಿದ್ದರು.

“ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ನಿಮಗೆ ಮತ್ತು ದೇಶದ ಎಲ್ಲ ಹೆಣ್ಣುಮಕ್ಕಳಿಗೆ ಶುಭಾಶಯಗಳು’ ಎಂದು ಮಾತು ಆರಂಭಿ ಸಿದ ಪ್ರಧಾನಿ, ರೆಮೋನಾ ಸಾಧನೆಯನ್ನು ಪ್ರಶಂಸಿಸಿದರು.
ಸಂವಾದದ ವೇಳೆ, “ಮೂರನೇ ವಯಸ್ಸಿ ನಿಂದಲೇ ನೃತ್ಯಾಭ್ಯಾಸದಲ್ಲಿ ತೊಡಗಿಸಿ ಕೊಂಡಿದ್ದೀರಿ, ಹೇಗೆ ಅಭ್ಯಾಸ ಮಾಡಿದ್ದೀರಿ, ಸ್ವಯಂ ಆಗಿ ಅಭ್ಯಾಸ ಮಾಡುತ್ತಿದ್ದಿರಾ ಅಥವಾ ಹೆತ್ತವರು ಕಾಳಜಿ ವಹಿಸಿದ್ದರೇ’ ಎಂದು ಪ್ರಧಾನಿ ಪ್ರಶ್ನಿಸಿದರು. “ನನ್ನ ತಾಯಿಗೆ ನೃತ್ಯದಲ್ಲಿ ತೀವ್ರ ಆಸಕ್ತಿ ಇದ್ದು, ನನಗೆ ಸಣ್ಣ ವಯಸ್ಸಿನಿಂದಲೂ ನೃತ್ಯ ಕಲಿಸುತ್ತಿದ್ದರು. ಇದು ನನಗೆ ಪ್ರೇರಣೆ ನೀಡಿತು. ಭಾರತೀಯ ಸಂಸ್ಕೃತಿಯ ವೈವಿಧ್ಯ, ಶ್ರೀಮಂತಿಕೆಯನ್ನು ವಿಶ್ವದಾದ್ಯಂತ ಪಸರಿಸುವುದು ನನ್ನ ಗುರಿ’ ಎಂದು ರೆಮೋನಾ ಉತ್ತರಿಸಿದರು.

ನೃತ್ಯ ಕಲಿಕೆಯಲ್ಲಿ ಸವಾಲುಗಳು ಎದುರಾಗಿರಬಹುದು, ಅವುಗಳನ್ನು ಹೇಗೆ ನಿಭಾಯಿಸಿದಿರಿ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು. “ತಂದೆ ನಿಧನ ಹೊಂದಿದ ಬಳಿಕ ತಾಯಿಗೆ ಜೀವನ ನಿರ್ವಹಣೆ ಕಷ್ಟವಾದರೂ ನನಗೆ, ಸಹೋದರನಿಗೆ ಉತ್ತಮ ಶಿಕ್ಷಣ ಕೊಡಿಸಿ ದರು. ಆರ್ಥಿಕ ಅಡಚಣೆ ಇದ್ದರೂ ನನ್ನನ್ನು ನೃತ್ಯಶಾಲೆಗೆ ದಾಖಲಿಸಿ ತರಬೇತಿ ಸಿಗುವಂತೆ ಮಾಡಿದರು. ನನ್ನ ತಾಯಿ ಮತ್ತು ಗುರುಗಳಿಗೆ ನೃತ್ಯದ ಮೂಲಕವೇ ಒಳ್ಳೆಯ ಹೆಸರು, ಗೌರವ ತಂದು ಕೊಡಬೇಕೆಂಬುದು ನನ್ನ ಗುರಿ. ಅದಕ್ಕಾಗಿ ಶ್ರಮ ವಹಿಸಿ ನೃತ್ಯಾಭ್ಯಾಸ ಮಾಡಿದೆ’ ಎಂದು ಉತ್ತರಿಸಿದರು ರೆಮೋನಾ.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ, “ನೀವು ತುಂಬಾ ಅದೃಷ್ಟವಂತೆ. ನಿಮ್ಮ ತಾಯಿ ಆರ್ಥಿಕ ಸ್ಥಿತಿ ಉತ್ತಮ ವಾಗಿಲ್ಲದಿದ್ದರೂ ನಿಮಗೆ ಒಳ್ಳೆಯ ಶಿಕ್ಷಣ ನೀಡುವುದರೊಂದಿಗೆ ನಿಮ್ಮ ನೃತ್ಯಾಭ್ಯಾಸವನ್ನು ಪ್ರೋತ್ಸಾಹಿಸಿ, ತನ್ನ ಕನಸನ್ನು ನನಸಾಗಿಸಿದ್ದಾರೆ. ಅದಕ್ಕಾಗಿ ನಾನು ಅವರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ’ ಎಂದರು.

Advertisement

ಬಾಲ ಪುರಸ್ಕಾರಕ್ಕೆ ರಾಜ್ಯದಿಂದ ಏಕೈಕ ಆಯ್ಕೆ
ರೆಮೋನಾ 2022ರ ಸಾಲಿನ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ರಾಜ್ಯದಿಂದ ಆಯ್ಕೆಯಾದ ಏಕೈಕ ಪ್ರತಿಭೆ. ಮಂಗಳೂರಿನ ನೃತ್ಯಗುರು ಡಾ| ಶ್ರೀವಿದ್ಯಾ ಮುರಳೀಧರ್‌ ಅವರ ಶಿಷ್ಯೆ. ಪಾದುವಾ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ. 16 ರಾಜ್ಯಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ 20 ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕಳೆದ 13 ವರ್ಷಗಳಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿರುವ ರೆಮೋನಾ ಅಗ್ನಿನೃತ್ಯ, ಒಡೆದ ಗಾಜಿನ ಮೇಲೆ ನೃತ್ಯ, ಮಡಕೆ ಮೇಲೆ ಸಮತೋಲನದ ನೃತ್ಯ, ಕೋಲಿನ ಮೇಲೆ ನೃತ್ಯ ಇತ್ಯಾದಿ ಆವಿಷ್ಕಾರಿ ನೃತ್ಯಗಳನ್ನೂ ಮಾಡಿದವರು. ಇತರ ಪ್ರಮುಖ ನೃತ್ಯ ಪ್ರಕಾರಗಳಾದ ಒಡಿಸ್ಸಿ, ಮೋಹಿನಿಯಾಟ್ಟಂ ಅಲ್ಲದೆ ಯಕ್ಷಗಾನದಲ್ಲೂ ತರಬೇತಿ ಪಡೆಯುತ್ತಿದ್ದಾರೆ. ಗೌತಮ್‌ ಭಟ್ಟಾಚಾರ್ಯ ಅವರಿಂದ ಪಾಶ್ಚಿಮಾತ್ಯ ನೃತ್ಯ ಅಭ್ಯಾಸ ಮಾಡುತ್ತಿದ್ದಾರೆ. ಎನ್‌ಎಸ್‌ಎಸ್‌ ವಿದ್ಯಾರ್ಥಿನಿಯೂ ಆಗಿದ್ದಾರೆ.

ಗಾಜಿನ ಮೇಲೆ ನೃತ್ಯ ಸವಾಲಲ್ಲವೇ?
“ಗಾಜಿನ ಮೇಲೆ ನೀವು ಅತೀ ಉತ್ತಮವಾಗಿ ನೃತ್ಯ ಮಾಡುತ್ತೀರಿ ಎಂದು ತಿಳಿಯಿತು’ ಎಂದು ಪ್ರಧಾನಿ ಹೇಳಿದರು. “ಮೊದ ಮೊದಲು ಗಾಜಿನ ಮೇಲೆ ನೃತ್ಯ ಮಾಡುವುದು ಕಷ್ಟವಾಗುತ್ತಿತ್ತು. ತಾಯಿಯ ನಿರಂತರವಾಗಿ ಆತ್ಮವಿಶ್ವಾಸ ತುಂಬುತ್ತಿದ್ದರು. ಅದರಿಂದಾಗಿ ಧೈರ್ಯಗೆಡದೆ ಮೊದಲು ಗಾಜಿನ ಮೇಲೆ ನಿಲ್ಲುವುದನ್ನು ಕಲಿತುಕೊಂಡೆ. ಅದಕ್ಕೆ ಸಾಕಷ್ಟುಸಮಯ ಬೇಕಾಯಿತು. ಬಳಿಕ ಅದರ ಮೇಲೆ ಅಭ್ಯಾಸ ಆರಂಭಿಸಿದೆ. ಆಗ ಹಲವು ಬಾರಿ ಗಾಜಿನ ತುಣುಕುಗಳಿಂದ ಕಾಲಿಗೆ ಗಾಯವಾಗಿತ್ತು. ಆದರೂ ಛಲ ಬಿಡಲಿಲ್ಲ’ ಎಂದು ರೆಮೋನಾ ವಿವರಿಸಿದರು.

ವೀಡಿಯೋ ಕಾನ್ಫರೆನ್ಸ್‌ ವೇಳೆ ದ.ಕ. ಜಿ.ಪಂ. ಸಿಇಒ ಡಾ| ಕುಮಾರ್‌, ಕಳೆದ ಬಾರಿಯ ಪ್ರಶಸ್ತಿ ಪುರಸ್ಕೃತ ರಾಕೇಶ್‌ ಕೃಷ್ಣ, ರೆಮೋನಾ ಅವರ ತಾಯಿ ಗ್ಲಾಡಿಸ್‌ ಪಿರೇರಾ ಉಪಸ್ಥಿತರಿದ್ದರು. ಪ್ರಶಸ್ತಿಯ ಮೊತ್ತ 1 ಲಕ್ಷ ರೂ.ಗಳನ್ನು ರೆಮೋನಾ ಬ್ಯಾಂಕ್‌ ಖಾತೆಗೆ ಆನ್‌ಲೈನ್‌ ಮುಖಾಂತರ ವರ್ಗಾವಣೆ ಮಾಡಲಾಯಿತು.

ನಿಮ್ಮ ತಾಯಿಯ ಸಂಪೂರ್ಣ ಅರ್ಪಣಾ ಮನೋಭಾವ ನಿಮ್ಮ ಸಾಧನೆಗೆ ಪ್ರೇರಣೆಯಾಗಿದೆ. ಅವರಿಗೆ ಮತ್ತೊಮ್ಮೆ ವಿಶೇಷ ಅಭಿನಂದನೆಗಳು. ನಿಮಗೆ ಕಲೆ ಒಲಿದಿದೆ, ಅದಕ್ಕೆ ನೀವು ಮಾಡಿದ ಸಾಧನೆ ತಪಸ್ಸು.
-ನರೇಂದ್ರ ಮೋದಿ, ಪ್ರಧಾನಿ

ಬಾಲ ಪುರಸ್ಕಾರ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಆದರೆ ದಿಲ್ಲಿಗೆ ಹೋಗಿ ಪ್ರಶಸ್ತಿ ಸ್ವೀಕರಿಸುವ ಅವಕಾಶ ಕೊರೊನಾದಿಂದಾಗಿ ತಪ್ಪಿರುವುದಕ್ಕೆ ನಿರಾಶೆಯೂ ಇದೆ.
– ರೆಮೋನಾ ಪಿರೇರಾ

Advertisement

Udayavani is now on Telegram. Click here to join our channel and stay updated with the latest news.

Next