ಮಂಗಳೂರು: ಬಿಜೈ ಕೈಬಟ್ಟಲಿನ ರೇಗೋ ಕಾಂಪೌಂಡ್‌ನ ಮನೆಯೊಂದರಿಂದ ಗ್ಯಾಸ್ ಸಿಲಿಂಡರ್ ಕಳವು ಮಾಡಿದ ಪ್ರಕರಣದಲ್ಲಿ ಅಣ್ಣು ಪೂಜಾರಿ ವಿರುದ್ಧ ಆರೋಪ ಸಾಬೀತಾಗಿದ್ದು, 2ನೇ ಸಿ.ಜೆ.ಎಂ. ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಎರಡನೇ ಆರೋಪಿ ಗಂಗಯ್ಯ ನೀಲಕಂಠಯ್ಯ ಮುತ್ತಯ್ಯನ ಮಠ ಯಾನೇ ಸ್ವಾಮಿಯನ್ನು ಸಾಕ್ಷ್ಯಾಧಾರ ಕೊರತೆಯಿಂದ ನ್ಯಾಯಾಲಯವು ಬಿಡುಗಡೆಗೊಳಿಸಿದೆ.
ಪ್ರಕರಣದ ವಿವರ
ಪಾಣೆಮಂಗಳೂರು ನರಿಕೊಂಬು ನಿವಾಸಿ ಅಣ್ಣು ಪೂಜಾರಿ (55) ಮತ್ತು ಗಂಗಯ್ಯ ನೀಲಕಂಠಯ್ಯ ಮುತ್ತಯ್ಯನ ಮಠ ಯಾನೇ ಸ್ವಾಮಿ (53) 2022ರ ಆ. 1ರಂದು ಮಧ್ಯಾಹ್ನ ಕದ್ರಿ ಕೈಬಟ್ಟಲು ರೇಗೊ ಕಾಂಪೌಂಡಿನ ಜಾರ್ಜ್ ಸಿಕ್ವೇರಾ ಅ ವರ ಮನೆಯ ಹಿಂಬದಿಯಿಂದ ಅಡುಗೆ ಕೋಣೆ ಪ್ರವೇಶಿಸಿ ಅಲ್ಲಿದ್ದ ಸುಮಾರು 4 ಸಾವಿರ ರೂ. ಮೌಲ್ಯದ ಭಾರತ್ ಗ್ಯಾಸ್ ಕಂಪೆನಿಯ 2 ಸಿಲಿಂಡರ್‌ಗಳನ್ನು ಕಳವು ಮಾಡಿದ್ದರು.
ಈ ಕುರಿತಂತೆ ಪ್ರಕರಣ ದಾಖಲಾಗಿ ಅಂದಿನ ಮಂಗಳೂರು ಪೂರ್ವ ಠಾಣಾ ಪೊಲೀಸ್ ಉಪನಿರೀಕ್ಷಕ ಮಾರುತಿ ಎಸ್.ಪಿ. ತನಿಖೆ ನಡೆಸಿ ಆರೋಪಿಗಳನ್ನು ದಸ್ತಗಿರಿ ಮಾಡಿ ಕಳವಾದ ಗ್ಯಾಸ್ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡು ಭಾಗಶಃ ತನಿಖೆ ನಡೆಸಿದ್ದರು. ಮುಂದಿನ ತನಿಖೆಯನ್ನು ಪೊಲೀಸ್ ಉಪನಿರೀಕ್ಷಕ ಜ್ಞಾನಶೇಖರ್ ಅವರು ನಡೆಸಿ ಆರೋಪಿಗಳ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಎಲ್ಲ ಸಾಕ್ಷಾ Âಧಾರ ವಿಚಾರಣೆ ನಡೆಸಿ, ವಾದ-ಪ್ರತಿವಾದ ಆಲಿಸಿದ 2ನೇ ಸಿ.ಜೆ.ಎಂ. ನ್ಯಾಯಾಲಯದ ನ್ಯಾಯಾಧೀಶ ಮಧುಕರ್ ಪಿ. ಭಾಗವತ್ ಕೆ. ಅವರು 1ನೇ ಆರೋಪಿ ಅಣ್ಣು ಪೂಜಾರಿ ತಪ್ಪಿತಸ್ಥ ಎಂದು ನಿರ್ಣಯಿಸಿ ಐಪಿಸಿ ಕಲಂ: 454ರಡಿಯ ಅಪರಾಧಕ್ಕಾಗಿ 1 ವರ್ಷ ಜೈಲು ಶಿಕ್ಷೆ ಮತ್ತು 250 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದಲ್ಲಿ 2 ದಿನಗಳ ಸಾಮಾನ್ಯ ಸೆರೆಮನೆ ವಾಸ ಅನುಭವಿಸಬೇಕು ಎಂದು ಆದೇಶಿಸಿದ್ದಾರೆ. ಭಾ.ದಂ.ಸಂ. ಕಲಂ: 380ರಡಿಯ ಅಪರಾಧಕ್ಕಾಗಿ 1ವರ್ಷ ಜೈಲು ಶಿಕ್ಷೆ ಮತ್ತು 250 ರೂ.ದಂಡ. ದಂಡ ಪಾವತಿಸಲು ತಪ್ಪಿದಲ್ಲಿ 2 ದಿನಗಳ ಸಾಮಾನ್ಯ ಸೆರೆಮನೆ ವಾಸ ಅನುಭವಿಸಬೇಕು ಎಂದು ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಅಣ್ಣು ಪೂಜಾರಿಗೆ ಸಹಕರಿಸಿದ ಗಂಗಯ್ಯ ನೀಲಕಠಂಯ್ಯನನ್ನು ನ್ಯಾಯಾಲಯ ಬಿಡುಗಡೆಗೊಳಿಸಿದೆ.
ಸರಕಾರದ ಪರ 2ನೇ ಸಿಜೆಎಂ ನ್ಯಾಯಾಲಯದ ಹಿರಿಯ ಸಹಾಯಕ, ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ. ಅವರು ವಾದ ಮಂಡಿಸಿದ್ದರು.