ಮಂಗಳೂರು: ಇಲ್ಲಿನ ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಬೈರೇಶ್ ಎಸ್.ಎಚ್. ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ನಲ್ಲಿ 720ರಲ್ಲಿ 710 ಅಂಕ ಗಳಿಸಿ ಜನರಲ್ ಮೆರಿಟ್ನಲ್ಲಿ ಅಖೀಲ ಭಾರತ ಮಟ್ಟದಲ್ಲಿ 48ನೇ ರ್ಯಾಂಕ್ ಹಾಗೂ ರಾಜ್ಯ ಮಟ್ಟದಲ್ಲಿ ದ್ವಿತೀಯ ರ್ಯಾಂಕ್ ಗಳಿಸಿ ಹೊಸದಿಲ್ಲಿಯ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಯಲ್ಲಿ ಪ್ರವೇಶ ಪಡೆದಿರುತ್ತಾರೆ.
ನೀಟ್ನಲ್ಲಿ 720ರಲ್ಲಿ 702 ಅಂಕ ಪಡೆದು ಜನರಲ್ ಮೆರಿಟ್ನಲ್ಲಿ ಅಖಿಲ ಭಾರತ ಮಟ್ಟದಲ್ಲಿ 180ನೇ ರ್ಯಾಂಕ್ ಪಡೆದ ಶಾಮಿಕ್ ಅಬ್ದುಲ್ ರೆಹಮಾನ್ ಪುದುಚೇರಿಯ ಜಿಪ್ಮರ್ ನಲ್ಲಿ, 700 ಅಂಕ ಪಡೆದು ಜನರಲ್ ಮೆರಿಟ್ನಲ್ಲಿ ಅಖಿಲ ಭಾರತ ಮಟ್ಟದಲ್ಲಿ 307ನೇ ರ್ಯಾಂಕ್ ಪಡೆದ ಅರ್ನವ್ ಕಾಮತ್ ಏಮ್ಸ್ ಭುವನೇಶ್ವರದಲ್ಲಿ, 680 ಅಂಕ ಪಡೆದು ಹೇಮಚಂದ್ರ ಸಿ. ಏಮ್ಸ್ ಮಂಗಳಗಿರಿಯಲ್ಲಿ ಸೀಟು ಗಿಟ್ಟಿಸಿಕೊಂಡಿದ್ದಾರೆ.
ವೈದ್ಯಕೀಯ ಕಾಲೇಜಿಗೆ ಪ್ರವೇಶಕ್ಕಾಗಿ ಅಖೀಲ ಭಾರತ ಮಟ್ಟದ ಸೀಟು ಹಂಚಿಕೆ ಮಾಡಲಾಗಿದ್ದು, ರಾಜ್ಯ ಮಟ್ಟದ ಸೀಟು ಹಂಚಿಕೆಯು ಇನ್ನಷ್ಟೇ ಆಗಬೇಕಿದೆ. ಹೊಸದಿಲ್ಲಿಯ ಏಮ್ಸ್ ಸೇರಿದಂತೆ ಏಮ್ಸ್ನ ದೇಶದ ಬೇರೆ ಬೇರೆ ಭಾಗದಲ್ಲಿರುವ ಇನ್ನಿತರ ಶಾಖೆಗಳು, ಪುದುಚೇರಿಯ ಜಿಪ್ಮರ್ (ಜೆಐಪಿಎಂಇಆರ್), ಬಿಎಂಸಿ, ಕೆಎಂಸಿ ಸೇರಿದಂತೆ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಎಕ್ಸ್ಪರ್ಟ್ನ ಶೇ. 45ರಷ್ಟು ವಿದ್ಯಾರ್ಥಿಗಳು ಪ್ರತಿ ವರ್ಷ ಪ್ರವೇಶ ಪಡೆಯುತ್ತಾರೆ.
ಸಂಸ್ಥೆಗೆ ಹೆಮ್ಮೆ
ವೈದ್ಯಕೀಯ ಶಿಕ್ಷಣದಲ್ಲಿ ಮುಂಚೂಣಿ ಯಲ್ಲಿರುವ ಹೊಸದಿಲ್ಲಿಯ ಏಮ್ಸ್ ನಲ್ಲಿ ಸೀಟು ಪಡೆಯುವುದು ವೈದ್ಯ ಶಿಕ್ಷಣ ಆಕಾಂಕ್ಷಿಗಳ ಕನಸಾಗಿರುತ್ತದೆ. ಹಾಗೆಯೇ ಹೊಸದಿಲ್ಲಿಯ ಏಮ್ಸ್ ನಲ್ಲಿ ತಮ್ಮ ವಿದ್ಯಾರ್ಥಿಗಳು ಸೀಟು ಪಡೆಯಬೇಕು ಎಂಬುದು ಕೂಡ ಪ್ರತೀ ಶಿಕ್ಷಣ ಸಂಸ್ಥೆಯ ಆಕಾಂಕ್ಷೆಯಾಗಿರುತ್ತದೆ. ಒಂದು ಸಂಸ್ಥೆಯಿಂದ ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವೈದ್ಯ ಶಿಕ್ಷಣಕ್ಕೆ ಪ್ರವೇಶ ಪಡೆಯುವುದು ಹೆಮ್ಮೆಯ ವಿಚಾರ ಎಂದು ಸಂಸ್ಥೆ ಅಧ್ಯಕ್ಷ ಪ್ರೊ| ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.